ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ: ಫಸಲು ರಕ್ಷಣೆಗೆ ಅನ್ನದಾತರ ಹೆಣಗಾಟ

ವಿಧಾನಪರಿಷತ್‌ ಚುನಾವಣೆ ನೀತಿ ಸಂಹಿತೆಗೆ ಠಾಣೆ ಸೇರಿದ ಬಂದೂಕು
Last Updated 29 ನವೆಂಬರ್ 2021, 5:17 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಸಹ್ಯಾದ್ರಿ ಶ್ರೇಣಿಯ ರೈತರ ಬೆಳೆ ಸಂರಕ್ಷಣೆಗೆ ಸರ್ಕಾರದ ಕಠಿಣ ನಿಯಮ ಅಡ್ಡಿಯಾಗಿದೆ. ಸುಗ್ಗಿ ಕಾಲದ ಸಂಭ್ರಮದಲ್ಲಿದ್ದ ಅನ್ನದಾತನ ಪರವಾನಗಿ ಹೊಂದಿದ್ದ ಬಂದೂಕು ಠಾಣಾ ಕೊಠಡಿ ಸೇರಬೇಕಾಗಿದ್ದು, ಇದೀಗ ಬೆಳೆ ಸಂರಕ್ಷಣೆಯ ಸವಾಲು ಎದುರಾಗಿದೆ.

ಮಲೆನಾಡು ಭಾಗದಲ್ಲಿ ಮಾನವ, ವನ್ಯಜೀವಿ ಸಂಘರ್ಷ ಬಹಳ ಕಾಲದಿಂದ ಇದೆ. ಇತ್ತೀಚೆಗೆ ಕಾಡು ಪ್ರಾಣಿಗಳ ಲೂಟಿಯಿಂದ ಫಸಲು ರಕ್ಷಿಸುವ ಅನಿವಾರ್ಯ ಎದುರಾಗಿದೆ. ಸುಗ್ಗಿ ಕಾಲವಾದ್ದರಿಂದ ಬೆಳೆ ಸಂರಕ್ಷಣೆಗೆ ಹಗಲಿರುಳು ಕೃಷಿಕರು ಕಾಯುತ್ತಿದ್ದಾರೆ. ವಿಧಾನಪರಿಷತ್ ಚುನಾವಣಾ ನೀತಿ ಸಂಹಿತೆ ಕಾರಣ ಪರವಾನಗಿ ಪಡೆದ ಬೆಳೆ ಸಂರಕ್ಷಣೆಯ ಬಂದೂಕನ್ನು ಪೊಲೀಸ್ ಠಾಣೆಗೆ ನೀಡಬೇಕೆಂಬ ನಿಯಮದಿಂದ ರೈತರು ಕಂಗಾಲಾಗಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಪರವಾನಗಿ ಪಡೆದ ಬಂದೂಕು ಪೊಲೀಸ್ ಠಾಣೆಯಲ್ಲಿ ಠೇವಣಿ ಇಡುವ ನಿಯಮ ರೈತರಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ. ಬೆಳೆ ರಕ್ಷಣೆಗೆ ಬಂದೂಕು ಅಗತ್ಯ ಇದ್ದು, ಆ ಉದ್ದೇಶ ಸಾಕಾರವಾಗುತ್ತಿಲ್ಲ. ಈಗಾಗಲೇ ಬಂದೂಕು ಠೇವಣಿ ಇಡುವಂತೆ ರೈತರಿಗೆ ನೋಟಿಸ್‌ ನೀಡಲಾಗಿದ್ದು, ರೈತರು ಹೆಣಗಾಡುತ್ತಿದ್ದಾರೆ.

ಮುಂಗಾರು ಹಂಗಾಮಿನ ಭತ್ತ, ಅಡಿಕೆ, ಶುಂಠಿ, ಕಾಳು ಮೆಣಸು, ಏಲಕ್ಕಿ, ತಾಳೆ, ಕೊಕೊ, ಅರಿಶಿಣ, ವಿವಿಧ ರೀತಿಯ ತರಕಾರಿ ಬೆಳೆಗಳ ರಕ್ಷಣೆಗೆಂದು ಸಾಗುವಳಿ ಪ್ರದೇಶದ ಆರ್‌ಟಿಸಿ, ಮ್ಯುಟೇಷನ್, ಕಂದಾಯ ಸರ್ವೇ ನಕ್ಷೆ, ಗುರುತಿನ ಚೀಟಿ, ವಿಎ, ಆರ್‌ಐ, ಗ್ರಾಮಸ್ಥರ ವರದಿ, ಸರ್ಕಾರಿ ವೈದ್ಯರ ಕಣ್ಣಿನ ಸಾಮರ್ಥ್ಯ ವರದಿ, ಬಂದೂಕು ತರಬೇತಿ ಪತ್ರ, ಅರಣ್ಯ ಇಲಾಖೆ ನಿರಾಕ್ಷೇಪಣ ಪತ್ರ, ಫೋಟೊ, ಅದಾಯ ಪ್ರಮಾಣ ಪತ್ರ ಸೇರಿ ಇತರ ದಾಖಲೆಗಳನ್ನು ಸಲ್ಲಿಸಿ ಪಡೆದ ಬಂದೂಕು ಸುಗ್ಗಿ ಕಾಲದಲ್ಲಿ ಠಾಣೆ ಸೇರಿರುವುದು ರೈತರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ನೀತಿ ಸಂಹಿತೆ ಅಡ್ಡ ಬಂದಾಗ ಬಂದೂಕು ಠಾಣಾ ಕೊಠಡಿಯಲ್ಲಿ ಠೇವಣಿ ಇಡಬೇಕು. 6 ತಿಂಗಳು, ವರ್ಷಕ್ಕೊಮ್ಮೆ ಬಂದೂಕುಗಳನ್ನು ಠೇವಣಿ ಇಡುವುದು, ವಾಪಸ್‌ ಪಡೆಯುವುದೇ ಕೆಲಸವಾಗಿದೆ. ಬೆಳೆ ಇಲ್ಲದಿರುವಾಗ ಠೇವಣಿ ಇಡುವುದಕ್ಕೆ ತೊಂದರೆ ಇಲ್ಲ. ಕಟಾವಿಗೆ ಬಂದ ಅವಧಿಯಲ್ಲಿ ಠೇವಣಿ ಇಡುವುದು ಸಮಂಜಸವಲ್ಲ. ಸರ್ಕಾರ ನಿಯಮ ಸಡಿಲಿಸಿ ಬೇಡಿಕೆ ಈಡೇರಿಸದಿದ್ದರೆ ತಾಲ್ಲೂಕು ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ.

***

ಸುಗ್ಗಿ ಕಾಲದಲ್ಲಿ ಬೆಳೆ ಸಂರಕ್ಷಣೆಗೆ ಬಂದೂಕು ಅತ್ಯಗತ್ಯ. ಬಂದೂಕು ಠೇವಣಿ ನಿಯಮ ಸಡಿಲಿಸುವಂತೆ ಗೃಹ ಸಚಿವರಿಗೆ ಮನವಿ ಮಾಡಲಾಗಿದೆ. ಸಚಿವರು ಸಮಸ್ಯೆಗೆ ಸ್ಪಂದಿಸಿದ್ದು, ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಸಿ.ಬಿ. ಈಶ್ವರ್, ಎಪಿಎಂಸಿ ನಿರ್ದೇಶಕ, ತೀರ್ಥಹಳ್ಳಿ

***

ಚುನಾವಣೆ ಸಂದರ್ಭ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಂದೂಕು ಠೇವಣಿ ಪಡೆಯಲಾಗುತ್ತಿದೆ. ಜಿಲ್ಲಾಧಿಕಾರಿ ಆದೇಶದಂತೆ ಫಸಲು ರಕ್ಷಣೆ ಬಂದೂಕು ಠೇವಣಿ ಕಡ್ಡಾಯ.

ಡಾ.ಎಸ್.ಬಿ. ಶ್ರೀಪಾದ್, ತಹಶೀಲ್ದಾರ್, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT