ಸೋಮವಾರ, ಆಗಸ್ಟ್ 15, 2022
20 °C

ಅರಣ್ಯ ಇಲಾಖೆ ದಿನಗೂಲಿಗಳ ಸೇವೆ ಕಾಯಂಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಅರಣ್ಯ ಇಲಾಖೆ ದಿನಗೂಲಿ ನೌಕರರ ಸೇವೆ ಕಾಯಂಗೊಳಿಸಬೇಕು ಎಂದು ನಿವೃತ್ತ ಉಪ ಸಂರಕ್ಷಣಾಧಿಕಾರಿ ವೀರೇಶ್ ನಾಯ್ಕ ಒತ್ತಾಯಿಸಿದರು.

ಅರಣ್ಯ ಇಲಾಖೆಯ ವಿವಿಧ ವಲಯಗಳಲ್ಲಿ ದಿನಗೂಲಿ ನೌಕರಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಮಾಸಿಕ ವೇತನ ವಿತರಣೆಯಲ್ಲೂ ಅವರಿಗೆ ಅನ್ಯಾಯವಾಗಿದೆ. ಇಲಾಖಾ ಸಿಬ್ಬಂದಿಯಿಂದ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಇಲಾಖೆಯ ರಕ್ಷಣಾ ಶಿಬಿರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಭದ್ರತೆ ಇಲ್ಲ. ವೇತನವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿಲ್ಲ. ಗುತ್ತಿಗೆ ಹೆಸರಿನಲ್ಲಿ ನೌಕರರಿಗೆ ಇಎಸ್‌ಐ ಹಾಗೂ ಪಿಎಫ್ ಕಡಿತಗೊಳಿಸಿಲ್ಲ. ಆವಶ್ಯಕತೆಗಿಂತ ಹೆಚ್ಚು ನೌಕರರನ್ನು ನೇಮಿಸಿಕೊಂಡು ಕಡಿಮೆ ವೇತನ ನೀಡಲಾಗುತ್ತಿದೆ ಎಂದು ದೂರಿದರು.

ವಿನಾಕಾರಣ ಕೆಲಸದಿಂದ ತೆಗೆದುಹಾಕಲಾಗುತ್ತಿದೆ. ಹೊರಗುತ್ತಿಗೆ ವೇತನ ಪಾವತಿಸುವ ಏಜೆನ್ಸಿಗಳು ಸರ್ಕಾರ, ಕಾರ್ಮಿಕರ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿವೆ. ಮಾಸಿಕ ವೇತನ ನೀಡಲು ವಿಳಂಬ ಮಾಡಲಾಗುತ್ತಿದೆ. ಕಡಿಮೆ ವೇತನ ನೀಡಲಾಗುತ್ತಿದೆ ಎಂದು ಆರೋಪಿಸಿದರು.

2017ರ ನಂತರ ನೌಕರರಿಗೆ ಪೂರ್ಣ ಪ್ರಮಾಣದ ವೇತನ,  ಸಮಾನ ಕೆಲಸಕ್ಕೆ ಸಮಾನ ವೇತನ ಪಾವತಿಸಬೇಕು. ಉನ್ನತ ಅಧಿಕಾರಿಗಳು ಹಾಗೂ ಸರ್ಕಾರದ ಆದೇಶ ಪಾಲಿಸಬೇಕು. ಪ್ರತಿ ತಿಂಗಳು 5ರ ಒಳಗೆ ವೇತನ ನೀಡಬೇಕು. ನೌಕರರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಎಲ್ಲ ನೌಕರರನ್ನು ಖಾಯಂಗೊಳಿಸಬೇಕು. ಗುರುತಿನ ಚೀಟಿ ವಿತರಿಸಬೇಕು. ಕೆಲಸದಿಂದ ತೆಗೆದಿರುವ ನೌಕರರನ್ನು ಪುನರ್ ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಸರ್ಕಾರಿ ದಿನಗೂಲಿ ಪಿಸಿಪಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳ ನೌಕರರ ಸಂಘದ ಅಧ್ಯಕ್ಷ ಹಿಂಚುವಳ್ಳಿ ಶಂಕರಪ್ಪ, ಮಹಿಳಾ ಅಧ್ಯಕ್ಷೆ ಎಚ್.ಜಿ.ಹೇಮಲತಾ, ರಾಜ್ಯ ಕಾರ್ಯದರ್ಶಿ ಬಸವರಾಜ್ ಅಂಗಡಿ, ಖಜಾಂಚಿ ಪ್ರದೀಪ್, ಎಲ್. ಮಂಜುನಾಥ್, ನಾಗರಾಜ್, ಲಿಂಗಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು