ಶಿವಮೊಗ್ಗ: ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 30 ಎಕರೆಗಿಂತ ಹೆಚ್ಚಿನ ಅರಣ್ಯ ಒತ್ತುವರಿ ಗುರುತಿಸಿ ತೆರವುಗೊಳಿಸಲು ಅರಣ್ಯ ಇಲಾಖೆ ಪ್ರಕ್ರಿಯೆ ಆರಂಭಿಸಿದೆ.
ಮಲೆನಾಡಿನ ಪರಿಸರ ಸೂಕ್ಷ್ಮ ವಲಯದಲ್ಲಿ 24 ಕಡೆ ಇಂತಹ ಒತ್ತುವರಿ ಪ್ರಕರಣ ಗುರುತಿಸಲಾಗಿದೆ. 1,000 ಎಕರೆಗೂ ಹೆಚ್ಚು ಅರಣ್ಯ ಒತ್ತುವರಿ ಆಗಿದೆ. ಈ ಸಂಬಂಧ ನೋಟಿಸ್ ನೀಡಲು ಇಲಾಖೆ ಸಿದ್ಧತೆ ನಡೆಸಿದೆ.
‘ಒತ್ತುವರಿ ಮಾಡಿಕೊಂಡವರೇ ಸ್ವಯಂ ಪ್ರೇರಿತವಾಗಿ ತೆರವು ಮಾಡಲು ಅವಕಾಶ ನೀಡಲಿದ್ದೇವೆ. ನಂತರ ನಾವೇ ತೆರವುಗೊಳಿಸಲಿದ್ದೇವೆ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಹನುಮಂತಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
‘ಎಸಿಎಫ್ ನ್ಯಾಯಾಲಯದಲ್ಲಿ 64 ‘ಎ’ ಅಡಿ ಆದೇಶ ಹೊರಡಿಸಿದ, ವಿಚಾರಣೆಗೆ ಬಾಕಿ ಇಲ್ಲದ ಪ್ರಕರಣ ಹಾಗೂ ನ್ಯಾಯಾಲಯದಿಂದ ತಡೆಯಾಜ್ಞೆ ಇಲ್ಲದ ಭಾರಿ ಒತ್ತುವರಿಗಳನ್ನು ಆದ್ಯತೆ ಮೇರೆಗೆ ತೆರವುಗೊಳಿಸಲು ದಾಖಲೆಗಳನ್ನು ಪರಿಶೀಲಿಸಿ ಇಟ್ಟುಕೊಳ್ಳಲು ಅಧಿಕಾರಿ ಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಅವರು ಹೇಳಿದರು.
‘ಎರಡನೇ ಹಂತದಲ್ಲಿ ಅಧಿಸೂಚಿತ ಅರಣ್ಯದೊಳಗೆ ಒತ್ತುವರಿ ಮಾಡಿ ನಿರ್ಮಿಸಿರುವ ರೆಸಾರ್ಟ್ ಹಾಗೂ ಹೋಂ ಸ್ಟೇಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಿ ದ್ದೇವೆ. ಮೂರನೇ ಹಂತದಲ್ಲಿ 2015ರ ನಂತರದ ಒತ್ತುವರಿ ತೆರವುಗೊಳಿಸಲಿದ್ದೇವೆ’ ಎಂದು ತಿಳಿಸಿದರು.
ಆರ್‌ಎಫ್‌ಒ ವರ್ಗಾವಣೆ:
ವಿಹಂಗಮ ಹಾಲಿಡೇ ರೆಸಾರ್ಟ್‌ನ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ್ದ ಆರ್‌ಎಫ್‌ಒ ಲೋಕೇಶ್ ಅವರನ್ನು ಎರಡು ದಿನಗಳಲ್ಲಿಯೇ ವರ್ಗಾವಣೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.