ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಕಾಂಗ್ರೆಸ್ ಶಕ್ತಿ ಪ್ರದರ್ಶನ, ಒಗ್ಗಟ್ಟಿನ ಮಂತ್ರ ಪಠಣ

Published 15 ಏಪ್ರಿಲ್ 2024, 9:02 IST
Last Updated 15 ಏಪ್ರಿಲ್ 2024, 9:02 IST
ಅಕ್ಷರ ಗಾತ್ರ

ಶಿವಮೊಗ್ಗ: ಮಧ್ಯಾಹ್ನದ ಉರಿ ಬಿಸಿಲನ್ನು ಲೆಕ್ಕಿಸದೇ ಬೆಂಬಲಿಗರ ಪ್ರವಾಹವೇ ಶಿವಮೊಗ್ಗಕ್ಕೆ ಹರಿದುಬಂತು. ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರ ನಾಮಪತ್ರ ಸಲ್ಲಿಕೆ ಮೆರವಣಿಗೆ ಚುನಾವಣೆಗೆ ಮುನ್ನವೇ ಪಕ್ಷದ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿ ಮಾರ್ಪಟ್ಟಿತ್ತು.

ಬೆಳಿಗ್ಗೆ ಪತಿ ಶಿವರಾಜಕುಮಾರ್ ಅವರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ ಗೀತಾ, ನಂತರ ಕಾಂಗ್ರೆಸ್ ಪಕ್ಷದಿಂದ ಇಲ್ಲಿನ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಆಯೋಜಿಸಿರುವ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿವಿಧೆಡೆಯಿಂದ ಭಾರಿ ಸಂಖ್ಯೆಯಲ್ಲಿ ಬಂದಿದ್ದ ಬೆಂಬಲಿಗರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಗ್ರಾಮೀಣರು, ಮಹಿಳೆಯರು ಹಾಗೂ ಕೂಲಿ ಕಾರ್ಮಿಕರು ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದು, ಪಕ್ಷದ ಚಿಹ್ನೆ ಧರಿಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಬೆಳಗಾವಿಯಲ್ಲಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಶಿವಮೊಗ್ಗಕ್ಕೆ ಬರುವುದು ವಿಳಂಬವಾಯಿತು. ಹೀಗಾಗಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರೇ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಬಿಸಿಲಿಗೆ ಬಳಲಿರುವ ನಾಯಕರು ತೆರೆದ ವಾಹನಗಳಲ್ಲಿ ಸಾಗುವಾಗಲೇ ಬೆಂಬಲಿಗರಿಂದ ಎಳನೀರು, ಮಜ್ಜಿಗೆ ತರಿಸಿಕೊಂಡು ಕುಡಿದರು.

ಮೆರವಣಿಗೆ ಗಾಂಧಿ ಬಜಾರ್ ಮುಖ್ಯರಸ್ತೆಯ ಮೂಲಕ ಶಿವಪ್ಪ ನಾಯಕ ವೃತ್ತಕ್ಕೆ ಬಂದಾಗ ಅಲ್ಲಿ ಗೀತಾ ಶಿವರಾಜಕುಮಾರ್ ಅವರಿಗೆ ಕ್ರೇನ್ ಮೂಲಕ ಬೃಹತ್ ಸೇಬು ಹಣ್ಣಿನ ಹಾರ ಹಾಕಿ ಶುಭ ಕೋರಲಾಯಿತು. ವಿವಿಧ ಸಂಘಟನೆಯ ಮುಖಂಡರು ಗೀತಾ ಅವರಿಗೆ ಹೂವು ಕೊಟ್ಟು, ಮಹಿಳೆಯರು ಉಡಿ ತುಂಬಿ ಹರಸಿದರು.

ಅಲ್ಲಿಂದ ಅಮೀರ್ ಅಹಮದ್ ವೃತ್ತ, ನೆಹರೂ ರಸ್ತೆ ಮೂಲಕ ಸೀನಪ್ಪ ಶೆಟ್ಟಿ (ಗೋಪಿ ವೃತ್ತ) ವೃತ್ತಕ್ಕೆ ಮೆರವಣಿಗೆ ಬಂತು. ಕೊನೆಯ ಹಂತದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಂದು ಮೆರವಣಿಗೆಗೆ ಸೇರಿಕೊಂಡರು. ಮೆರವಣಿಗೆಗೆ ವಾದ್ಯ ಮೇಳ, ಡೊಳ್ಳು, ಬೊಂಬೆ ಕುಣಿತ ಸಾಥ್ ನೀಡಿದವು. ಸೀನಪ್ಪ ಶೆಟ್ಟಿ ವೃತ್ತದಲ್ಲೂ ಬೆಂಬಲಿಗರು ಸೇಬು ಹಾರ ಹಾಕಿ, ಹೂವಿನ ಮಳೆ ಸುರಿಸಿದರು.

ಮೆರವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ ಪ್ಲೇಕಾರ್ಡ್ ರಾರಾಜಿಸಿದವು. ಮೆರವಣಿಗೆಯ ದಾರಿಯುದ್ದಕ್ಕೂ ಸಚಿವ ಮಧುಬಂಗಾರಪ್ಪ ಹಾಗೂ ಮುಖಂಡರು ಮತಯಾಚಿಸಿದರು.

ಶಾಸಕರಾದ ಸಾಗರದ ಬೇಳೂರು ಗೋಪಾಲಕೃಷ್ಣ, ಶಿರಸಿಯ ಭೀಮಣ್ಣ ನಾಯ್ಕ್, ಭದ್ರಾವತಿಯ ಬಿ.ಕೆ.ಸಂಗಮೇಶ್ವರ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಪ್ರಸನ್ನಕುಮಾರ್‌, ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಬಿ.ಕೆ. ಸುಕುಮಾರ್ ಶೆಟ್ಟಿ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್‌, ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಕಾಂಗ್ರೆಸ್ ಮುಖಂಡರಾದ ಎಂ.ಶ್ರೀಕಾಂತ, ಎಚ್.ಸಿ.ಯೋಗೀಶ್, ಶ್ರೀನಿವಾಸ ಕರಿಯಣ್ಣ ಪಾಲ್ಗೊಂಡಿದ್ದರು.

ಗ್ಯಾರಂಟಿ ಯೋಜನೆಗಳು ಜನ ಸಾಮಾನ್ಯರ ಮನ ಗೆದ್ದಿವೆ. ಪ್ರಚಾರದ ವೇಳೆಯಲ್ಲಿ ಮಹಿಳೆಯರು ಹೆಚ್ಚಿನ ಒಲವು ತೋರುತ್ತಿದ್ದಾರೆ. ನನಗೆ ನಂಬಿಕೆ ಇದೆ. ಜನರು ಕೈ ಬಿಡುವುದಿಲ್ಲ
–ಗೀತಾ ಶಿವರಾಜಕುಮಾರ್, ಕಾಂಗ್ರೆಸ್ ಅಭ್ಯರ್ಥಿ

‘ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿರಬೇಕು’

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ’ದಾನ ಧರ್ಮ ಮಾಡುವ ಕೈ (ಕಾಂಗ್ರೆಸ್) ಅಧಿಕಾರದಲ್ಲಿದ್ದರೆ ಕಮಲ (ಬಿಜೆಪಿ) ಕೆಸರಲ್ಲಿದ್ದರೆ ಚಂದ. ಅದೇ ಉದ್ದೇಶದಿಂದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರಿಗೆ ಮತ ನೀಡಿ ಹರಸಬೇಕು’ ಎಂದು ಮನವಿ ಮಾಡಿದರು. ‘ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಗ್ಯಾರಂಟಿ ಯೋಜನೆಯನ್ನು ಕೀಳಾಗಿ ಜರಿದಿದ್ದಾರೆ. ಇದು ಖಂಡನೀಯ. ರಾಜ್ಯದೆಲ್ಲೆಡೆ ಈ ಬಗ್ಗೆ ಹೋರಾಟ ಮಾಡಬೇಕು’ ಎಂದರು. ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಮಹಿಳೆಯರ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರಣಾಳಿಕೆಯಲ್ಲಿ ಸಾಮಾಜಿಕ ನ್ಯಾಯ ಲಿಂಗ ಸಮಾನತೆ ಅಲ್ಪಸಂಖ್ಯಾತರ ವೈಯಕ್ತಿಕ ಕಾನೂನುಗಳ ಸುಧಾರಣೆ ಹಿರಿಯ ನಾಗರಿಕರು ಅಂಗವಿಕಲರ ಅಭ್ಯುದಯಕ್ಕೆ ಒತ್ತು ನೀಡಲಾಗಿದೆ ಎಂದರು. ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಕನುಸುಗಳಿಗೆ ಜೀವ ತುಂಬಲು ಗೀತಾ ಅವರಿಗೆ ಮತ ನೀಡಿ ಆಶೀರ್ವದಿಸಬೇಕು ಎಂದು ಕೋರಿದರು.

ಎಲ್ಇಡಿ ಸ್ಕ್ರೀನ್ ಬಿದ್ದು ಗಾಯ: ಆಸ್ಪತ್ರೆಗೆ ಮಧುಬಂಗಾರಪ್ಪ ಭೇಟಿ

ಗೀತಾ ಶಿವರಾಜಕುಮಾರ್ ಅವರ ನಾಮಪತ್ರ ಸಲ್ಲಿಕೆ ಮೆರವಣಿಗೆ ವೇಳೆ ಎಲ್‌ಇಡಿ ಸ್ಕ್ರೀನ್ ಬಿದ್ದು ಭದ್ರಾವತಿ ತಾಲ್ಲೂಕಿನ ಮಾವಿನಕೆರೆ ಗ್ರಾಮದ ನಾಗರಾಜಪ್ಪ ಗಾಯಗೊಂಡಿದ್ದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಕ್ಯಾಂಟರ್‌ಗಳಲ್ಲಿ ಈ ಎಲ್‌ಇಡಿ ಪರದೆಗಳನ್ನು ಇರಿಸಲಾಗಿತ್ತು. ಗಾಂಧಿ ಬಜಾರ್‌ನಲ್ಲಿ ಮೆರವಣಿಗೆ ಸಾಗುತ್ತಿದ್ದಾಗ ಎಲ್‌ಇಡಿ ಪರದೆ ಕೆಳಗೆ ಬಿದ್ದಿದೆ. ಈ ವೇಳೆ ವಾಹನದ ಪಕ್ಕದಲ್ಲಿ ನಡೆದು ಸಾಗುತ್ತಿದ್ದ ಕೆಲವರು ಗಾಯಗೊಂಡಿದ್ದರು. ಗಾಯಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಕಲಗೋಡು ರತ್ನಾಕರ ಜಿ.ಡಿ. ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT