ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚ್ಚಾಡುವುದು ಬಿಟ್ಟು ಸಂಘಟಿತರಾದರೆ ಉದ್ಧಾರ

ಗೋಸಾಯಿ ಮಹಾಸಂಸ್ಥಾನ ಮಠದ ಮಂಜುನಾಥ ಭಾರತಿ ಸ್ವಾಮೀಜಿ ಸಲಹೆ
Last Updated 8 ಮೇ 2022, 4:03 IST
ಅಕ್ಷರ ಗಾತ್ರ

ದಾವಣಗೆರೆ: ‘ನಾವು ನಾವೇ ಕಚ್ಚಾಡುವದನ್ನು ಬಿಡಬೇಕು. ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸದೃಢರಾಗಲು ಇರುವ ತೊಡಕುಗಳನ್ನು ನಿವಾರಿಸಿಕೊಂಡು ಮುನ್ನಡೆಯಲು ಸಮಾಜವು ಸಂಘಟಿತವಾಗಬೇಕು’ ಎಂದು ಗೋಸಾಯಿ ಮಹಾಸಂಸ್ಥಾನ ಮಠದ ಮಂಜುನಾಥ ಭಾರತಿ ಸ್ವಾಮೀಜಿ ಹೇಳಿದರು.

ನಗರದ ದೇವರಾಜು ಅರಸು ಬಡಾವಣೆಯ ಶ್ರೀಕೃಷ್ಣಭವಾನಿ ಕಲ್ಯಾಣ ಮಂಟಪದಲ್ಲಿ ಕ್ಷತ್ರೀಯ ಮರಾಠ ವಿದ್ಯಾವರ್ಧಕ ಸಂಘ, ಜೀಜಾಮಾತಾ ಮಹಿಳಾ ಮಂಡಳಿ, ಛತ್ರಪತಿ ಶಿವಾಜಿ ಯುವಕ ಸಂಘಗಳ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಪರೋಪಕಾರ, ಉದಾರತೆಯ ಮೂಲಕ ಸಮಾಜಕ್ಕೆ ಮಾದರಿಯಾದವರು ಛತ್ರಪತಿ ಶಿವಾಜಿ ಮಹಾರಾಜ್, ಸಮಸ್ತ ಮಾನವ ಕುಲದ ರಕ್ಷಣೆಗಾಗಿ ಬಾಳಿದವರು. ಸ್ತ್ರೀಯರಿಗೆ ರಕ್ಷಣೆ ನೀಡಿದವರು. ನ್ಯಾಯದ ಮಾರ್ಗದಲ್ಲಿ ನಡೆದು, ಇತರರನ್ನು ಅದೇ ದಾರಿಯಲ್ಲಿ ಮುನ್ನಡೆಸುವ ನಾಯಕತ್ವ ಗುಣ ಶಿವಾಜಿ ಮಹಾರಾಜರಲ್ಲಿ ಇತ್ತು ಆದ್ದರಿಂದಲೇ ಅವರನ್ನು ವಿಶ್ವನಾಯಕ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.

ಕಷ್ಟದಲ್ಲಿರುವವರನ್ನು ಕಷ್ಟದಿಂದ ಪಾರು ಮಾಡುವ, ದುಃಖದಿಂದ ಸುಖದತ್ತ ಮತ್ತು ಅಜ್ಞಾನದಿಂದ ಜ್ಞಾನ ಮಾರ್ಗಕ್ಕೆ, ತರುವವನೇ ಕ್ಷತ್ರಿಯ ಎಂದು ಹೇಳಿದರು.

ಹಾವೇರಿ ಜಿಲ್ಲೆಯ ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಮಾತನಾಡಿ, ‘ಯಾವುದೇ ಧರ್ಮ ಅಥವಾ ಜಾತಿಯನ್ನು ದೂಷಣೆ ಮಾಡಬಾರದು. ಭಾವನಾತ್ಮಕ ವಿಷಯಗಳನ್ನು ಬದಿಗಿಟ್ಟು, ಸಮಾಜವನ್ನು ಬೆಳೆಸಬೇಕು. ದೇಶದ ಇತಿಹಾಸದ ಜೊತೆ ಜೊತೆಗೆ ಕ್ಷತ್ರಿಯ ಮರಾಠರ ಇತಿಹಾಸ ಇದೆ’ ಎಂದರು.

‘ಎಲ್ಲ ರಾಜಕೀಯ ಪಕ್ಷಗಳು ನಮ್ಮ ಸಮಾಜವನ್ನು ಬಳಸಿಕೊಳ್ಳುವುದು ಹೆಚ್ಚು. ಅವಕಾಶ ನೀಡುವುದು ಕಡಿಮೆ. ನಾವು ಹೋರಾಟದ ಮೂಲಕ ಅವಕಾಶ ಪಡೆಯಬೇಕಿದೆ.ರಾಜಕೀಯ ವ್ಯವಸ್ಥೆಯಲ್ಲಿ ನಾವು ಗೆಲ್ಲಬೇಕಿದೆ. ಒಂದೇ ಸಮುದಾಯದಿಂದ ಗೆಲ್ಲಲು ಸಾಧ್ಯವಿಲ್ಲ. ಎಲ್ಲ ಸಮುದಾಯಗಳ ಪ್ರೀತಿ ವಿಶ್ವಾಸ ಗಳಿಸಬೇಕಿದೆ’ ಎಂದು ತಿಳಿಸಿದರು.

‘ಸಮಾಜದ ಹಲವಾರು ವರ್ಷಗಳ ಬೇಡಿಕೆ ಇಂದಿಗೂ ಈಡೇರಿಲ್ಲ. ಮುಂದಿನ ಪೀಳಿಗೆಯ ಭವಿಷ್ಯದ ಒಳಿತಿಗೆ ನಮ್ಮ ಸಮಾಜದ ಯುವಕರು, ಶಿಕ್ಷಣ, ಉದ್ಯೋಗ, ಆರ್ಥಿಕವಾಗಿ ಸದೃಢರಾಗಬೇಕಾದರೆ ರಾಜ್ಯಾದಲ್ಲಿ ಸಮಾಜ ಸಂಘಟನೆ ಅವಶ್ಯಕತೆ ಇದೆ. ನಮ್ಮ ಸಮಾಜ ಜಾಗೃತಗೊಂಡಿದೆ. ಆದರೆ, ಸಂಘಟಿತವಾಗಿಲ್ಲ. ಇದೇ ವರ್ಷ ಪೀಠಾಲಂಕೃತರಾಗಿರುವ ಮಂಜುನಾಥ ಭಾರತಿ ಸ್ವಾಮೀಜಿಯವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಸಂಘಟಿತರಾಗಬೇಕಿದೆ’ ಎಂದು ತಿಳಿಸಿದರು.

ಸನ್ಮಾನ ಸ್ವೀಕರಿಸಿದ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಜಿ. ಮೂಳೆ, ‘ನಾವು ನಮ್ಮ ಇತಿಹಾಸವನ್ನು ಮರೆತಿದ್ದೇವೆ. ಇತಿಹಾಸ ಮರೆತ ಸಮಾಜಕ್ಕೆ ಭವಿಷ್ಯ ಇರುವುದಿಲ್ಲ. ಶಿವಾಜಿ ಮಹಾರಾಜ, ಸಂಭಾಜಿ ಮಹಾರಾಜರ ಇತಿಹಾಸವನ್ನು ತಿಳಿದು ನಾವು ಮುನ್ನಡೆಯಬೇಕು’ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮೊದಲು ಸ್ವಾಮೀಜಿಯವರನ್ನು ಬೆಳ್ಳಿ ರಥದ ಮೂಲಕ ಪೂರ್ಣಕುಂಭ ಮತ್ತು ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು. ನಗರದ ದುರ್ಗಾಂಬಿಕಾ ದೇವಸ್ಥಾನದಿಂದ ಹೊಂಡದ ವೃತ್ತ ಮತ್ತು ಜಾಲಿನಗರದ ಮೂಲಕ ವೇದಿಕೆಯ ಸ್ಥಳ ತಲುಪಿತು.

ಪಾಲಿಕೆ ಉಪ ಮೇಯರ್ ಗಾಯಿತ್ರಿಬಾಯಿ ಖಂಡೋಜಿರಾವ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎ.ವೈ. ರಾಕೇಶ್ ಜಾಧವ್, ಪಾಲಿಕೆ ನಾಮನಿರ್ದೇಶಿತ ಸದಸ್ಯ ಎಚ್.ಎಸ್. ಗಣೇಶ್‌ರಾವ್ ಪವಾರ್, ಧೂಡಾ ನಾಮನಿರ್ದೇಶಿತ ಸದಸ್ಯ ಟಿ. ಮಾರುತಿರಾವ್ ಘಾಟ್ಗೆ, ದಿಶಾ ಕಮಿಟಿ ಸದಸ್ಯೆ ಭಾಗ್ಯ ಪಿಸಾಳೆ, ದಗಡೋಜಿರಾವ್ ಸಾಳಂಕಿ, ವಿಕಾಸ್ ದೇವಕರ್ ಅವರನ್ನು ಸನ್ಮಾನಿಸಲಾಯಿತು.

ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಖಜಾಂಚಿ ಯಶವಂತರಾವ್ ಜಾಧವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಪಾಲ್‌ರಾವ್‌ ಮಾನೆ ಸ್ವಾಗತಿಸಿದರು. ಜಿ.ಎಚ್. ಮರಿಯೋಜಿರಾವ್, ಜಿ.ಯಲ್ಲಪ್ಪ ಢಮಾಳೆ, ಕೆ.ಎನ್. ಮಂಜೋಜಿರಾವ್, ವೈ.ಮಲ್ಲೇಶ್, ಗೌರಬಾಯಿ ಮೋಹಿತೆ, ಪವಿತ್ರ ರಾಣೆಬೆನ್ನೂರು, ಕೃಷ್ಣೋಜಿರಾವ್ ರಟ್ಟೇಹಳ್ಳಿ, ಶೇಖರಪ್ಪ ಕಣಿವೆಬಿಳಚಿ, ಗೋಪಾಲ್‌ರಾವ್ ಜಾಧವ್ ಚಿತ್ರದುರ್ಗ, ಮರಿಯೋಜಿರಾವ್ ಹರಿಹರ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT