ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಮಲೆನಾಡಿನಲ್ಲಿ ಕಳೆಗಟ್ಟಿದ ಗೌರಿ ಗಣೇಶ ಹಬ್ಬದ ಸಂಭ್ರಮ

Published 19 ಸೆಪ್ಟೆಂಬರ್ 2023, 14:18 IST
Last Updated 19 ಸೆಪ್ಟೆಂಬರ್ 2023, 14:18 IST
ಅಕ್ಷರ ಗಾತ್ರ

ಶಿವಮೊಗ್ಗ: ಶಿವಮೊಗ್ಗ ನಗರ ಸೇರಿ ಜಿಲ್ಲೆಯಲ್ಲಿ ಗೌರಿ-ಗಣೇಶ ಹಬ್ಬವನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳ ಖರೀದಿ ಜೋರಾಗಿತ್ತು. ಒಂದೇ ದಿನ ಗೌರಿ ಹಾಗೂ ಗಣೇಶನ ಹಬ್ಬ ಬಂದಿದ್ದರಿಂದ ಹಬ್ಬದ ಸಂಭ್ರಮ ಇಮ್ಮಡಿಯಾಗಿತ್ತು.

ನಗರದ ವಿವಿಧ ಬಡಾವಣೆ, ಕೇರಿ, ಮನೆ ಹಾಗೂ ದೇವಾಲಯಗಳಲ್ಲಿ ವಿನಾಯಕನ ಮೂರ್ತಿ ಪ್ರತಿಷ್ಠಾಪಿಸಿ ಜನರು ಶ್ರದ್ಧಾ, ಭಕ್ತಿಯಿಂದ ಪೂಜಿಸಿದರು.

ನಗರದ ಭೀಮೇಶ್ವರ ದೇವಸ್ಥಾನ, ರಾಮಣ್ಣ ಶ್ರೇಷ್ಠಿ ಪಾರ್ಕ್, ರವೀಂದ್ರ ನಗರ ಪ್ರಸನ್ನ ಗಣಪತಿ ದೇವಾಲಯ, ಕೋಟೆ ರಸ್ತೆ, ಅಶೋಕ ರಸ್ತೆ, ಗಾಂಧಿಬಜಾರ್‌, ಎಸ್‌ಪಿಎಂ ರಸ್ತೆ, ಶರಾವತಿ ನಗರ, ಎಪಿಎಂಸಿ ಮಾರುಕಟ್ಟೆ, ವಿದ್ಯಾನಗರ, ಹೊಸಮನೆ, ಗೋಪಾಳ ಸೇರಿ ವಿವಿಧೆಡೆಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. 

ಗೌರಿ ಹಬ್ಬದ ಹಿನ್ನೆಲೆಯಲ್ಲಿ ಹೆಣ್ಣುಮಕ್ಕಳನ್ನು ಕುಂಕುಮಕ್ಕೆ ಆಹ್ವಾನಿಸಿ, ಬಾಗಿನ ಅರ್ಪಿಸುವುದು, ಗೌರಿಗೆ ವಿಶೇಷ ಪೂಜೆ ಸೇರಿ ನಾನಾ ಆಚರಣೆ ನಡೆದವು. ಬಹುತೇಕ ಮನೆಗಳಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ ಹೆಣ್ಣುಮಕ್ಕಳು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಹಬ್ಬದ ಹಿನ್ನೆಲೆಯಲ್ಲಿ ಮನೆಗಳನ್ನು ತಳಿರು, ತೋರಣಗಳಿಂದ ಅಲಂಕರಿಲಾಗಿತ್ತು. ನಗರದ ವಿವಿಧ ದೇವಾಲಯಗಳಲ್ಲೂ ವಿಶೇಷ ಪೂಜೆ ನಡೆಯಿತು.

ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿಗೆ ಕುಟುಂಬದ ಎಲ್ಲರೂ ಸೇರಿ ಪೂಜೆ ನೆರವೇರಿಸಿದರು. ಇನ್ನೂ ಕೆಲವರು ಮನೆಗಳಲ್ಲೇ ಇದ್ದ ಬೆಳ್ಳಿ, ಪಂಚಲೋಹದ ಗಣೇಶಮೂರ್ತಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಹಬ್ಬ ಆಚರಿಸಿದರು. ರಾತ್ರಿಯಾಗುತ್ತಿದ್ದಂತೆ ಬಹುತೇಕರು ಮಹಾನಗರ ಪಾಲಿಕೆಯಿಂದ ವ್ಯವಸ್ಥೆ ಮಾಡಿದ್ದ ಚಿಕ್ಕ ತೊಟ್ಟಿಗಳಲ್ಲಿ ಗಣೇಶಮೂರ್ತಿಗಳನ್ನು ವಿರ್ಜಿಸಿದರು. ಇನ್ನೂ ಕೆಲವರು ತುಂಗಾ ಚಾನಲ್‌ನಲ್ಲಿ ವಿಸರ್ಜನೆ ಮಾಡಿದರು.

ವಿಶೇಷ ಪೂಜೆ: ರವೀಂದ್ರನಗರದ ಗಣೇಶ ದೇವಾಲಯ, ರಾಮಣ್ಣ ಶ್ರೇಷ್ಠಿ ಪಾರ್ಕ್‌ ದೇವಾಲಯ, ವಿನೋಬನಗರದ ಶಿವಾಲಯ ದೇವಾಲಯ, ಕೋಟೆ ಸೀತಾರಾಮಾಂಜನೇಯ ದೇವಾಲಯ ಹಾಗೂ ಗಾಂಧಿ ಬಜಾರ್‌ ಬಸವೇಶ್ವರ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ, ಅಲಂಕಾರ ನೆರವೇರಿದವು. ನೂರಾರು ಭಕ್ತರು ದರ್ಶನ ಪಡೆದು ಭಕ್ತಿ ನಮನ ಸಲ್ಲಿಸಿದರು.

ಗಣೇಶಮೂರ್ತಿಗಳ ದರ್ಶನ ಪಡೆಯಲು ಬಂದ ಸಾರ್ವಜನಿಕರಿಗೆ ಮಂಗಳಾರಾತಿ, ಪ್ರಸಾದ ವಿನಿಯೋಗ ನಡೆಯಿತು. ಕೆಲವೆಡೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಖರೀದಿ ಭರಾಟೆ: ಹಬ್ಬದ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಕಣ್ಣು ಹಾಯಿಸಿದಷ್ಟು ದೂರದವರೆಗೂ ಜನಜಂಗುಳಿ ಕಂಡಬಂದಿತು. ಒಂದು ಕಡೆ ಹೂ-ಹಣ್ಣು ಖರೀದಿಯಲ್ಲಿ ಹೆಣ್ಣುಮಕ್ಕಳು ತೊಡಗಿದ್ದರೆ,  ಮತ್ತೊಂದು ಕಡೆ ಗಣೇಶಮೂರ್ತಿ ಕೊಂಡೊಯ್ಯುವುದು ಜೋರಾಗಿತ್ತು. ವರಮಹಾಲಕ್ಷ್ಮೀ ಹಬ್ಬಕ್ಕೆ ಹೋಲಿಸಿದರೆ ಹೂ-ಹಣ್ಣು ಬೆಲೆ ಕೊಂಚ ಕಡಿಮೆ ಇತ್ತು.

ಶಿವಮೊಗ್ಗದ ಯುವಕೇಸರಿ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಿರುವ ಗಣೇಶ
ಶಿವಮೊಗ್ಗದ ಯುವಕೇಸರಿ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಿರುವ ಗಣೇಶ
ಶಿವಮೊಗ್ಗದ ಭೀಮೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಸಂಘಟನಾ ಮಹಾಮಂಡಳದ ಗಣಪ
ಶಿವಮೊಗ್ಗದ ಭೀಮೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಸಂಘಟನಾ ಮಹಾಮಂಡಳದ ಗಣಪ
ಶಿವಮೊಗ್ಗದ ಅಶೋಕ ರಸ್ತೆಯಲ್ಲಿ ಪ್ರತಿಷ್ಠಾಪಿಸಿರುವ ಓಂ ಗಣಪತಿ
ಶಿವಮೊಗ್ಗದ ಅಶೋಕ ರಸ್ತೆಯಲ್ಲಿ ಪ್ರತಿಷ್ಠಾಪಿಸಿರುವ ಓಂ ಗಣಪತಿ
ಶಿವಮೊಗ್ಗದ ಕೋಟೆರಸ್ತೆಯಲ್ಲಿರುವ ಸಮರವೀರ ಗಣಪ
ಶಿವಮೊಗ್ಗದ ಕೋಟೆರಸ್ತೆಯಲ್ಲಿರುವ ಸಮರವೀರ ಗಣಪ
ಶಿವಮೊಗ್ಗದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿ ಪ್ರತಿಷ್ಠಾ‍ಪಿಸಿರುವ ಹಿಂದೂ ಮಹಾಸಭಾ ಗಣಪ
ಶಿವಮೊಗ್ಗದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿ ಪ್ರತಿಷ್ಠಾ‍ಪಿಸಿರುವ ಹಿಂದೂ ಮಹಾಸಭಾ ಗಣಪ
ಶಿವಮೊಗ್ಗದ ಜಿ.ನಾರಾಯಣ ಕಾಂಪೌಂಡ್‌ನ ಗೆಳೆಯರು ಪ್ರತಿಷ್ಠಾಪಿಸಿರುವ ಶ್ರೀಕೃಷ್ಣ ರೂ‍ಪಿ ಗಣಪ
ಶಿವಮೊಗ್ಗದ ಜಿ.ನಾರಾಯಣ ಕಾಂಪೌಂಡ್‌ನ ಗೆಳೆಯರು ಪ್ರತಿಷ್ಠಾಪಿಸಿರುವ ಶ್ರೀಕೃಷ್ಣ ರೂ‍ಪಿ ಗಣಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT