ಗುರುವಾರ , ಮೇ 6, 2021
23 °C
‘ಲೈವ್‍ ಹನಿ’ ಪರಿಕಲ್ಪನೆಯಲ್ಲಿ ಜೇನು ತುಪ್ಪ ಮಾರಾಟ ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ

ಅತಿಥಿ ಉಪನಾಸ್ಯಕನ ಜೇನು ಕೃಷಿ ಮಾದರಿ

ರಾಘವೇಂದ್ರ ಟಿ. Updated:

ಅಕ್ಷರ ಗಾತ್ರ : | |

Prajavani

ಸೊರಬ: ತುಂಡುಭೂಮಿಯಲ್ಲಿ ಸಂಸಾರ ಸಾಗಿಸಲು ಸಾಧ್ಯವಿಲ್ಲ ಎನ್ನುವುದನ್ನು ಮನಗಂಡು 20 ವರ್ಷಗಳ ಕಾಲ ಜಮೀನ್ದಾರರ ಜಮೀನಿನಲ್ಲಿ ಗೇಣಿ ರೈತನಾಗಿ ದುಡಿದು, ಎತ್ತಿನ ಗಾಡಿಯಲ್ಲಿ ಸುತ್ತಮುತ್ತಲಿನ ಗ್ರಾಮದ ರೈತರ ಮನೆಗಳಿಗೆ ಸೌದೆ, ಗೊಬ್ಬರ ಬಾಡಿಗೆ ಹೊಡೆಯುತ್ತಿದ್ದ ಕಮಲಾಕರ ಭಟ್ ಅವರ ಛಲದ ಬದುಕು ಅತಿಥಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುವ ಪುತ್ರ ವಿಘ್ನೇಶ್ ಅವರಿಗೆ ಪ್ರೇರಣೆಯಾಗಿದೆ.

ಈ ಪ್ರೇರಣೆಯಿಂದಲೇ ವಿಘ್ನೇಶ್‌ ‘ಜೇನು ಕೃಷಿ’ಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಅತಿಥಿ ಉಪನ್ಯಾಸಕ ವೃತ್ತಿಯಿಂದ ಜೀವನ ನಿರ್ವಹಣೆ ಕಷ್ಟವಾದಾಗ ಬದಲಿ ವೃತ್ತಿಯಾಗಿ ಆಯ್ದುಕೊಂಡಿದ್ದು ಜೇನು ಕೃಷಿಯನ್ನು.

ಬಾಲ್ಯದಿಂದಲೇ ಮರದಲ್ಲಿ ಕಟ್ಟಿರುವ ತುಡವಿ ಜೇನು ಹಿಡಿದು ಮನೆಯಲ್ಲಿ ಸಾಕುವ ಹವ್ಯಾಸ ಬೆಳೆಸಿಕೊಂಡಿದ್ದ ವಿಘ್ನೇಶ್‌ ಈಗ
ಜೇನು ಕೃಷಿಯನ್ನು ಒಂದು ಉದ್ಯಮವಾಗಿ ಬದಲಾಯಿಸಿಕೊಂಡು ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

‘ಲೈವ್‍ ಹನಿ’ ಪರಿಕಲ್ಪನೆಯಲ್ಲಿ ಜೇನು ತುಪ್ಪ ಬಯಸಿ ಬರುವ ಗ್ರಾಹಕರಿಗೆ ಪೆಟ್ಟಿಗೆಯಲ್ಲಿ ನೇರವಾಗಿ ತುಪ್ಪ ತೆಗೆದು ರುಚಿ ನೋಡಲು ಕೊಡುತ್ತಾರೆ. ಇದರಿಂದ
ಹತ್ತಿರದಿಂದ ಜೇನುನೊಣಗಳನ್ನು ಹಾಗೂ ಅವುಗಳು ರಟ್ಟಿನಲ್ಲಿ ಮೊಟ್ಟೆ ಹಾಗೂ ತುಪ್ಪ ಮಾಡುತ್ತಿರುವ ದೃಶ್ಯವನ್ನು ಕಣ್ತುಂಬಿಕೊಳ್ಳುವ ಅನುಭವ ಗ್ರಾಹಕರಿಗೆ ಲಭಿಸುತ್ತದೆ. 

‘ಈ ಕಾರಣದಿಂದಲೇ ಒಂದು ಕೆ.ಜಿ. ತುಪ್ಪ ಕೇಳಿಬರುವ ಗ್ರಾಹಕರು ಪೆಟ್ಟಿಗೆಯಿಂದ ಹೊರತೆಗೆದ ತುಪ್ಪವನ್ನು ನೋಡುತ್ತಿದ್ದಂತೆ ಖುಷಿಯಲ್ಲಿ 7ರಿಂದ 8 ಕೆ.ಜಿ ತುಪ್ಪವನ್ನು ಕೊಂಡುಕೊಳ್ಳುತ್ತಾರೆ. ಗ್ರಾಹಕರು ಕಂಪನಿಗಳು ಸಿದ್ಧಪಡಿಸುವ ತುಪ್ಪವನ್ನು ಬಿಟ್ಟು ಜೇನು ಸಾಕಾಣಿಕೆ ಮಾಡಿದವರಿಂದ ತುಪ್ಪ ಖರೀದಿಸಿದರೆ ಜೇನು ಕೃಷಿಗೆ ಉತ್ತೇಜನ ನೀಡಿದಂತಾಗುತ್ತದೆ’ ಎನ್ನುವರು ವಿಘ್ನೇಶ್‌.

ಗ್ರಾಮದ ಎಲ್ಲರ ತೋಟ, ಮನೆಯ ಹಿತ್ತಲಲ್ಲಿ ಸುಮಾರು 150 ಪೆಟ್ಟಿಗೆಗಳನ್ನು ಇಟ್ಟಿರುವ ವಿಘ್ನೇಶ್‌ ಅವರು ಪೆಟ್ಟಿಗೆಗಳನ್ನು ತಾವೇ ಸಿದ್ಧಪಡಿಸಿಕೊಳ್ಳುತ್ತಾರೆ. ಪ್ರತಿದಿನ ಬೆಳಿಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಸರಾಸರಿ 5 ಕೆ.ಜಿ. ತುಪ್ಪ ತೆಗೆಯುತ್ತಾರೆ. ಮಾರುಕಟ್ಟೆಯಲ್ಲಿ 1 ಕೆ.ಜಿ. ತುಪ್ಪಕ್ಕೆ ₹ 500 ಬೆಲೆ ಇದೆ. ನಸರಿ ಜೇನುಹುಳುಗಳನ್ನು 4 ಪೆಟ್ಟಿಗೆಗಳಲ್ಲಿ ಸಾಕಲಾಗಿದ್ದು, ಮಾರುಕಟ್ಟೆಯಲ್ಲಿ ಅದರ ಬೆಲೆ ಕೆ.ಜಿ.ಗೆ ₹ 2,500 ಇದೆ. ದಿನಕ್ಕೆ ₹ 5 ಸಾವಿರ ಆದಾಯ ಗಳಿಸುತ್ತಿದ್ದಾರೆ.

ಪ್ರಗತಿಪರ ಜೇನು ಕೃಷಿಗಾಗಿ ಸರ್ಕಾರ ಮಧುವನ ಯೋಜನೆಯಡಿ ₹ 75 ಸಾವಿರ ಪ್ರೋತ್ಸಾಹಧನ ನೀಡಿದೆ. ಶಿವಮೊಗ್ಗದ ತೋಟಗಾರಿಕಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ ಆಸಕ್ತ ರೈತರಿಗೆ ಜೇನು ಕೃಷಿ ಬಗ್ಗೆ ತರಬೇತಿ ನೀಡುತ್ತಿರುವ ವಿಘ್ನೇಶ್ ಜೇನು ಹುಳು ಮಾರಾಟದಿಂದ ಪ್ರತಿ ವರ್ಷ ₹ 1.50 ಲಕ್ಷ ಹಾಗೂ ತುಪ್ಪದಿಂದ ₹ 2 ಲಕ್ಷ ಹಾಗೂ ಮೇಣದಿಂದ ₹ 50 ಸಾವಿರ ಆದಾಯ ಗಳಿಸುತ್ತಿದ್ದಾರೆ.

‘ಜೇನುನೊಣಗಳ ಪರಾಗಸ್ಪರ್ಶದಿಂದ ತೆಂಗು, ಮಾವು, ಅಡಿಕೆ ಹಿಂಗಾರಕ್ಕೆ ಅಂಟಿ
ಕೊಂಡಿರುವ ಕೀಟಗಳ ಬಾಧೆ ಕಡಿಮೆಯಾಗಿ ಬೆಳೆ ಸಮೃದ್ಧಿಗೊಳ್ಳುವ ಜೊತೆಗೆ ಅಧಿಕ ಇಳುವರಿ ಕಾಣಬಹುದಾಗಿದೆ. ಒಂದು ಪೆಟ್ಟಿಗೆಯಲ್ಲಿರುವ ಜೇನು ಕುಟುಂಬವನ್ನು ಅಕ್ಟೋಬರ್ ಹಾಗೂ ಡಿಸೆಂಬರ್ ಅವಧಿಯಲ್ಲಿ 6 ಕುಟುಂಬವಾಗಿ ವಿಭಜನೆ ಮಾಡಬಹುದಾಗಿದೆ. ಇದರಿಂದ ಹೆಚ್ಚು ಬಂಡವಾಳವಿಲ್ಲದೆ ಅಧಿಕ ಲಾಭವನ್ನು ನಿರೀಕ್ಷಿಸಬಹುದಾಗಿದೆ’ ಎನ್ನುವ ಸಲಹೆ ವಿಘ್ನೇಶ್‌
ಅವರದ್ದು.

ತಂದೆಯೇ ಕಾಯಕ ಪ್ರೇರಣೆ: ತಂದೆ ಕಮಲಾಕರ ಭಟ್ ಅವರ ಕೃಷಿ
ನಿಷ್ಠೆಯ ಬದುಕು ಪುತ್ರನಿಗೆ ಪ್ರೇರಣೆಯಾಗಿದೆ. ಕಮಲಾಕರ್‌ ಅವರು ತಮ್ಮ ತಂದೆಯ ಕೇವಲ 21 ಗುಂಟೆ ಅಡಿಕೆ ತೋಟಕ್ಕೆ ಮಾಲೀಕರಾಗಿದ್ದರು. ಈ ಜಮೀನಿನಲ್ಲಿ ಬರುವ ಆದಾಯದಿಂದ ಹೆಂಡತಿ, ಮಕ್ಕಳನ್ನು ಸಾಕಲು ಕಷ್ಟ ಎನಿಸಿದಾಗ ಎದೆಗುಂದದೆ ಎತ್ತಿನ ಗಾಡಿ ಬಾಡಿಗೆಗೆ ಹೊಡೆದು, ಬೇರೆಯವರ
ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.

1983ರಲ್ಲೇ ಬೈಕ್ ಖರೀದಿಸಿದ್ದ ಇವರು 1999ರಲ್ಲಿ ಕಾರು ಖರೀದಿಸಿ ತಲಕಾಲಕೊಪ್ಪದ ಅಡಿಕೆ ಶ್ರೀಮಂತರಿಗಿಂತಲೂ ಮೊದಲೇ ಕಾರು ಖರೀದಿಸಿ ಆಧುನಿಕ ಜೀವನ ಸಾಗಿಸಿದವರು.

‘ಆಳಾಗಿ ದುಡಿ ಅರಸನಾಗಿ ಉಣ್ಣು’ ಎಂಬ ಗಾದೆಗೆ ತಕ್ಕಂತೆ ತಮ್ಮ 70ರ ಇಳಿ ವಯಸ್ಸಿನಲ್ಲೂ ಕಮಲಾಕರ ಭಟ್ ಮಳೆ, ಬಿಸಿಲು ಎನ್ನದೆ ಸೊಂಟದಲ್ಲಿ ಕತ್ತಿ ಕಟ್ಟಿಕೊಂಡು ತೋಟದಲ್ಲಿ ಕೆಲಸ ಮಾಡುತ್ತ ಪುತ್ರ ನಿರ್ವಹಿಸುತ್ತಿರುವ ಜೇನು ಕೃಷಿಗೆ ಸಾಥ್ ನೀಡುತ್ತಾರೆ. ತಂದೆ ಕೃಷಿ ಬಗ್ಗೆ ಹೊಂದಿರುವ ಕಾಳಜಿ, ಬದ್ಧತೆಯನ್ನು ಅಳವಡಿಸಿಕೊಂಡಿರುವ ಅವರ ಪುತ್ರ ವಿಘ್ನೇಶ್ ಅವರಂತೆಯೇ ಶ್ರಮಜೀವಿ.

ವಿಘ್ನೇಶ್‌ ಅವರ ಸಂಪರ್ಕ ಸಂಖ್ಯೆ: 81058 61477

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು