ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ಜಿಲ್ಲೆಯಲ್ಲಿ ಜೋರು ಮಳೆ

Last Updated 19 ಜುಲೈ 2021, 3:54 IST
ಅಕ್ಷರ ಗಾತ್ರ

ಶಿವಮೊಗ್ಗ: ಎರಡು ದಿನಗಳಿಂದ ಕಡಿಮೆಯಾಗಿದ್ದ ಮಳೆ ಶಿವಮೊಗ್ಗ ಜಿಲ್ಲೆಯದಾದ್ಯಂತ ಶನಿವಾರ ರಾತ್ರಿ ಹಾಗೂ ಭಾನುವಾರ ದಿನವಿಡೀ ಬಿಡುವಿಲ್ಲದೆ ಸುರಿಯಿತು. ಇದರಿಂದ ಜನರು ಮನೆಯಿಂದ ಹೊರ ಬರಲು ಸಾಧ್ಯವಾಗದೇ ಆಸ್ಪತ್ರೆ, ಹೊಲ ಗದ್ದೆಗಳಿಗೆ ಹೋಗಲು ಪರದಾಡಿದರು.

ತೀರ್ಥಹಳ್ಳಿ, ಹೊಸನಗರ, ಸಾಗರದಲ್ಲಿ ಧಾರಾಕಾರ ಮಳೆಯಾಗಿದ್ದು, ಶಿಕಾರಿಪುರ, ಭದ್ರಾವತಿ, ಸೊರಬ, ಶಿವಮೊಗ್ಗ ತಾಲ್ಲೂಕಿನಲ್ಲಿ ಜೋರು ಮಳೆಯಾಗಿದೆ.

ಭಾರಿ ಮಳೆಯಿಂದಾಗಿ ಶಿವಮೊಗ್ಗ ನಗರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಆತಂಕ ಉಂಟಾಗಿದೆ. ಸ್ಮಾರ್ಟ್‌ ಸಿಟಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಚರಂಡಿಗಳನ್ನು ಬಂದ್ ಮಾಡಲಾಗಿದೆ. ಹಾಗಾಗಿ ನಗರದ ಕೆಲವು ಕಡೆ ರಸ್ತೆಯಲ್ಲಿ ನೀರು ನಿಂತಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಇನ್ನು, ನಿರಂತರ ಮಳೆಯಿಂದಾಗಿ ಕೆಲವು ಕಡೆ ತೋಟ, ಗದ್ದೆಗಳಲ್ಲಿ ನೀರು ನಿಂತಿದೆ. ಇತ್ತೀಚೆಗೆ ಭತ್ತ, ಶುಂಠಿ, ಜೋಳದ ಬಿತ್ತನೆ ಮಾಡಲಾಗಿದೆ. ಈಗ ಗದ್ದೆಯಲ್ಲಿ ನೀರು ನಿಂತಿದ್ದು, ಬೆಳಹಾನಿಯಾಗುವ ಆತಂಕ ಎದುರಾಗಿದೆ.

ಧರೆಗುರುಳಿದ ಮರ: ಭಾನುವಾರ ಸುರಿದ ಭಾರಿ ಮಳೆಗೆ ಶಿವಮೊಗ್ಗ ನಗರದ ವಿನೋಬ ನಗರದ ಪೊಲೀಸ್‌ ಚೌಕಿ ಬಳಿ ಮರವೊಂದು ರಸ್ತೆ ಮೇಲೆ ಬಿದ್ದಿದ್ದು, ಇದರಿಂದ ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.

ಜೋಗದ ಸಿರಿ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು

ಕಾರ್ಗಲ್: ಲಾಕ್‌ಡೌನ್ ತೆರವಾದ ಬೆನ್ನಲ್ಲೇ ಜೋಗ ಜಲಪಾತ ವೀಕ್ಷಿಸಲು ಪ್ರವಾಸಿಗರ ದಂಡು ಲಗ್ಗೆಯಿಟ್ಟಿದ್ದು, ಭಾನುವಾರ ಜೋಗಕ್ಕೆ ಜನಸಾಗರವೇ ಹರಿದುಬಂದಿದೆ.

ಭಾನುವಾರ 10 ಸಾವಿರ ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದು, 1500ಕ್ಕೂ ಹೆಚ್ಚು ಪ್ರವಾಸಿ ವಾಹನಗಳು ಬಂದಿದ್ದರಿಂದ ಜೋಗ ನಿರ್ವಹಣಾ ಪ್ರಾಧಿಕಾರಕ್ಕೆ ಪ್ರವೇಶ ಶುಲ್ಕದ ಮೂಲಕ
₹ 1.67 ಲಕ್ಷ ಸಂಗ್ರಹವಾಗಿದೆ ಎಂದು ಪ್ರಾಧಿಕಾರದ ಮೂಲ ಗಳು ತಿಳಿಸಿವೆ. ಪ್ರವಾಸಿ ವಾಹನಗಳು ಎಲ್ಲೆಂದರಲ್ಲಿ ನಿಲುಗಡೆ ಮಾಡಿದ ಕಾರಣ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಕೊರೊನಾ ಮಾರ್ಗಸೂಚಿಗಳನ್ನು ಪ್ರವಾಸಿಗರು ಗಾಳಿಗೆ ತೂರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT