ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಳೆಹೊನ್ನೂರು | ಕಾರ್ಖಾನೆಯ ದುರ್ವಾಸನೆ: ಬೇಸತ್ತ ನಿವಾಸಿಗಳು

Published : 21 ಆಗಸ್ಟ್ 2024, 6:51 IST
Last Updated : 21 ಆಗಸ್ಟ್ 2024, 6:51 IST
ಫಾಲೋ ಮಾಡಿ
Comments

ಹೊಳೆಹೊನ್ನೂರು: ಪಟ್ಟಣದ ರಬ್ಬಾನಿ ಆಗ್ರೋ ಇಂಡಸ್ಟ್ರೀಸ್‌ (ಕುಚಲಕ್ಕಿ ಕಾರ್ಖಾನೆ) ಹೊರಸೂಸುವ ದುರ್ವಾಸನೆ ಹಾಗೂ ಕಲುಷಿತ ನೀರಿನಿಂದಾಗಿ ಪಟ್ಟಣದ ವೀರಭದ್ರೇಶ್ವರ ಕಾಲೊನಿಯ ನಿವಾಸಿಗಳ ಬದುಕು ದುಸ್ತರವಾಗಿದೆ.

ಕೆಲವು ವರ್ಷಗಳ ಹಿಂದೆ ರಬ್ಬಾನಿ ಆಗ್ರೋ ಇಂಡಸ್ಟ್ರೀಸ್ ಹಿಂಭಾಗ ಲೇಔಟ್ ನಿರ್ಮಾಣ ಮಾಡಲಾಯಿತು. ಸಾಕಷ್ಟು ಹಣ ನೀಡಿ ನಿವೇಶನ ಪಡೆದ ಜನ ಸ್ವಂತ ಸೂರು ಕಟ್ಟಿಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎಂದುಕೊಂಡಿದ್ದರು. ಆದರೆ, ಈಗ ‘ಇಲ್ಲಿ ಯಾಕಾದರೂ ಮನೆ ಕಟ್ಟಿಕೊಂಡೆವೋ?’ ಎಂದು ಪಶ್ಚಾತಾಪ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಮಿಲ್‌ನಿಂದ ಬರುವ ಹೊಗೆಯ ಮಾಲಿನ್ಯದಿಂದ ಮನೆಗಳಲ್ಲಿ ಉಸಿರಾಡುವುದು ಕಷ್ಟವಾಗಿದೆ. ಮನೆಗಳ ಮೇಲೆ ನಿತ್ಯ ಕಪ್ಪು ದೂಳು ಬೀಳುತ್ತದೆ. ದುರ್ವಾಸನೆಯಿಂದ ಗಂಟಲು ಕಟ್ಟುವುದು, ಉಸಿರಾಟದ ತೊಂದರೆಯಿಂದಾಗಿ ನಿವಾಸಿಗಳು ವಾರಕ್ಕೆ ಎರಡು ಬಾರಿ ಆಸ್ಪತ್ರೆ ಎಡತಾಕುವ ಪರಿಸ್ಥಿತಿ ಉಂಟಾಗಿದೆ. 

‘ಈಗಾಗಲೇ ಹಲವಾರು ಬಾರಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ಯಾವೊಬ್ಬ ಅಧಿಕಾರಿಯೂ ಇತ್ತ ತಲೆ ಹಾಕಿಲ್ಲ. ನಿವಾಸಿಗಳ ಕಷ್ಟ ಹೇಳ ತೀರದಂತಾಗಿದೆ. ಈ ಮಿಲ್‌ನಲ್ಲಿ ಕುಚಲಕ್ಕಿ ತಯಾರಿಸಲಾಗುತ್ತದೆ. ಭತ್ತವನ್ನು ನೆನೆಸಿ, ಬೇಯಿಸಿದ ನೀರನ್ನು ಕಾರ್ಖಾನೆ ಹಿಂದೆ ಸಂಗ್ರಹಿಸಲಾಗುತ್ತದೆ. ಇದರಿಂದ ದರ್ವಾಸನೆ ಬರುತ್ತದೆ. ಅಕ್ಕಿ ಬೇಯಿಸಿದ ನೀರು ಹೊರಗಡೆ ಬಿಟ್ಟರೆ ಕೆಲವರಿಗೆ ವಾಂತಿ ಬರುತ್ತದೆ’ ಎನ್ನುತಾರೆ ಸ್ಥಳೀಯ ನಿವಾಸಿ ಶ್ವೇತಾ.

ಕಾರ್ಖಾನೆಯಿಂದ ಹೊರ ಬರುತ್ತಿರುವ ತ್ಯಾಜ್ಯ ನೀರು ಕಾಲುವೆಗಳ ಮೂಲಕ ಹರಿಯುತ್ತಿದ್ದು, ನೇರವಾಗಿ ರೈತರ ಜಮೀನುಗಳಿಗೆ ಹೋಗುತ್ತಿತ್ತು. ಜಮೀನಿನಲ್ಲಿ ಕೆಲಸ ಮಾಡುವ ರೈತರಿಗೆ ಚರ್ಮ ರೋಗಗಳು ಶುರುವಾಗಿದ್ದರಿಂದ ರೈತರು ಆ ನೀರು ಜಮೀನಿಗೆ ಹರಿಯಲು ಬಿಡದೆ ಅಲ್ಲೆಯೇ ನಿಲ್ಲಿಸಿದ್ದಾರೆ. ನಿಂತ ನೀರು ವೀರಭದ್ರೇಶ್ವರ ಕಾಲೊನಿ ನಿವಾಸಿಗಳಿಗೆ ದರ್ವಾಸನೆ ಬೀರುತ್ತಿದೆ. ಆರೋಗ್ಯ, ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳದೇ ಇರುವುದು ವಿಪರ್ಯಾಸ.

‘ಲೇಔಟ್ ಮಾಡಿದ್ದು ಬಿಟ್ಟರೆ ಸರಿಯಾದ ಚರಂಡಿ ವ್ಯವಸ್ಥೆ, ರಸ್ತೆ, ಸ್ವಚ್ಛತೆ ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಪಟ್ಟಣ ಪಂಚಾಯಿತಿ ವಿಫಲವಾಗಿದೆ. ಸ್ವಚ್ಛತೆ ಇಲ್ಲದ ಪರಿಣಾಮ ಮನೆಗಳಲ್ಲಿ ಹಗಲು ಹೊತ್ತಿನಲ್ಲೇ ಸೊಳ್ಳೆಗಳ ಕಾಟ ಜಾಸ್ತಿ ಇದ್ದು, ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅಲ್ಲಿನ ನಿವಾಸಿಗಳು ದೂರುತ್ತಾರೆ. 

ತಕ್ಷಣವೇ ಆರೋಗ್ಯ ಇಲಾಖೆ ಹಾಗೂ ವಾಯುಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿ ಕ್ರಮ ಕೈಗೊಳ್ಳಬೇಕು ಎಂಬುದು ವೀರಭದ್ರೇಶ್ವರ ಕಾಲೊನಿ ನಿವಾಸಿಗಗಳ ಒಕ್ಕೊರಲ ಧ್ವನಿಯಾಗಿದೆ.

ಹೊಳೆಹೊನ್ನೂರಿನ ರಬ್ಬಾನಿ ಆಗ್ರೋ ಇಂಡಸ್ಟ್ರೀಸ್‌ ಹಾಗೂ ಸುತ್ತಮುತ್ತಲಿನ ಮನೆಗಳು
ಹೊಳೆಹೊನ್ನೂರಿನ ರಬ್ಬಾನಿ ಆಗ್ರೋ ಇಂಡಸ್ಟ್ರೀಸ್‌ ಹಾಗೂ ಸುತ್ತಮುತ್ತಲಿನ ಮನೆಗಳು
ಹೊಳೆಹೊನ್ನೂರಿನ ರಬ್ಬಾನಿ ಆಗ್ರೋ ಇಂಡಸ್ಟ್ರೀಸ್‌ನಿಂದ ತ್ಯಾಜ್ಯ ನೀರನ್ನು ನೇರವಾಗಿ ನಾಲೆಗೆ ಹರಿಸುತ್ತಿರುವುದು
ಹೊಳೆಹೊನ್ನೂರಿನ ರಬ್ಬಾನಿ ಆಗ್ರೋ ಇಂಡಸ್ಟ್ರೀಸ್‌ನಿಂದ ತ್ಯಾಜ್ಯ ನೀರನ್ನು ನೇರವಾಗಿ ನಾಲೆಗೆ ಹರಿಸುತ್ತಿರುವುದು
ಈ ದುರ್ವಾಸನೆಯಿಂದ ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ತಕ್ಷಣವೇ ಕಾರ್ಖಾನೆ ಸ್ಥಳಾಂತರ ಮಾಡಬೇಕು. ವಾಯು ಮಾಲಿನ್ಯವನ್ನು ತಡೆಗಟ್ಟುವ ಕೆಲಸವಾಬೇಕಾಗಿದೆ.
ಎಚ್.ಎಸ್.ಶ್ರೀನಿವಾಸ್ ನಿವೃತ್ತ ಸಹಾಯಕ ಪಶು ವೈದ್ಯಾಧಿಕಾರಿ (ಸ್ಥಳೀಯ ನಿವಾಸಿ)
ಕಾರ್ಖಾನೆಯಿಂದ ಬರುವ ತ್ಯಾಜ್ಯ ನೀರು ಕೆಟ್ಟ ವಾಸನೆ ಬರುತ್ತಿದ್ದು ಇಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ತಕ್ಷಣವೇ ನಿಲ್ಲಿಸಬೇಕು. ಮೂಲ ಸೌಲಭ್ಯಳನ್ನು ಒದಗಿಸಬೇಕು.
- ವನಿತಾ ಸ್ಥಳೀಯ ನಿವಾಸಿ
ಕುಡಿಯುವ ನೀರು ಸ್ವಚ್ಛತೆ ಬಗ್ಗೆ ಗಮನ ಹರಿಸಲಾಗುವುದು. ಮುಂದಿನ ದಿನಗಳಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ನಿವಾಸಿಗಳ ಹಾಗೂ ಕಾಲೊನಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.
ಮಂಜುನಾಥ ಪಾಟೀಲ್ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ
ಭತ್ತ ಬೇಯಿಸಿದ ನೀರನ್ನು ನಮ್ಮಲ್ಲಿ ನಾಲ್ಕು ಹಂತದಲ್ಲಿ ಫಿಲ್ಟರ್ ಮಾಡಿ ಹೊರಗಡೆ ಬಿಡಲಾಗುತ್ತದೆ. ಕಾರ್ಖಾನೆಯಿಂದ ಹೊಗೆ ಏನು ಹೋಗುತ್ತಿಲ್ಲ. ಯಾರಿಗೂ ತೊಂದರೆಯಾಗುತ್ತಿಲ್ಲ.
ಫಾಜಿಲ್ ಸಾಬ್ ರಬ್ಬಾನಿ ಆಗ್ರೋ ಇಂಡಸ್ಟ್ರೀಸ್‌ ರೈಸ್ ಮಿಲ್ ವ್ಯವಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT