ಸೋಮವಾರ, ಸೆಪ್ಟೆಂಬರ್ 20, 2021
28 °C
ತಾಲ್ಲೂಕಿನಲ್ಲಿ ಮಳೆಯಿಂದ ₹ 39 ಕೋಟಿ ನಷ್ಟ

ಅತಿವೃಷ್ಟಿ ಪೀಡಿತ ಪಟ್ಟಿಯಲ್ಲಿಲ್ಲ ಹೊಸನಗರ

ರವಿ ನಾಗರಕೊಡಿಗೆ Updated:

ಅಕ್ಷರ ಗಾತ್ರ : | |

Prajavani

ಹೊಸನಗರ: ಮಲೆನಾಡ ನಡುಮನೆಯಂತಿರುವ ಹೊಸನಗರ ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ನಷ್ಟವುಂಟಾಗಿದೆ. ಆದರೆ ಸರ್ಕಾರ ಮಾತ್ರ ಹೊಸನಗರ ತಾಲ್ಲೂಕಿನ ಬಗ್ಗೆ ಮಲತಾಯಿ ಧೋರಣೆ ಅನುಸರಿಸಿದೆ. ಸರ್ಕಾರ ಬಿಡುಗಡೆ ಮಾಡಿದ ಅತಿವೃಷ್ಟಿ ಪೀಡಿತ ತಾಲ್ಲೂಕಿನ ಪಟ್ಟಿಯಲ್ಲಿ ಹೊಸನಗರದ ಹೆಸರು ಇಲ್ಲ. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ತಾಲ್ಲೂಕಿನಲ್ಲಿ ಜುಲೈನಲ್ಲಿ ಭಾರಿ ಮಳೆ ಸುರಿದಿದೆ. ಜನರು ಮನೆಯಿಂದ ಹೊರಬರಲಾಗದೆ ಕುಳಿತಿದ್ದರು. ಮಳೆ ರಭಸಕ್ಕೆ ಸಾರ್ವಜನಿಕ ಆಸ್ತಿ ಪಾಸ್ತಿ ಸೇರಿ ರೈತರ ಹೊಲಗದ್ದೆ ಕೊಚ್ಚಿಹೋಗಿವೆ. ರಸ್ತೆ, ಸೇತುವೆ ಸಂಪರ್ಕ ಕಡಿತವಾಗಿದೆ. ಇಲ್ಲಿನ ಜನರ ಬಾಳು ನರಕಸದೃಶವಾಗಿದೆ. ಆದರೆ ಅನಾಹುತ ನಡೆದ ನಂತರ ಬರುವ ಅಧಿಕಾರಿಗಳು, ಜನಪ್ರತಿನಿಧಿಗಳು ಪರಿಹಾರದ ಭರವಸೆ ನೀಡಿ ಈಗ ಪಟ್ಟಿಯಲ್ಲಿ ಹೆಸರೇ ಇಲ್ಲದಂತೆ ಮಾಡಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.

ಜಿಲ್ಲಾಡಳಿತ ಅತಿವೃಷ್ಟಿ ಪೀಡಿತ ಪಟ್ಟಿ ತಯಾರಿಸಿದೆ. ಇದರಲ್ಲಿ ಅತಿ ಹೆಚ್ಚು ಮಳೆ ಬೀಳುವ ಹೊಸನಗರ, ತೀರ್ಥಹಳ್ಳಿ ಹೆಸರು ಇಲ್ಲ. ಇದು ಅಧಿಕಾರಿಗಳ ಬೇಜವ್ದಾರಿತನಕ್ಕೆ ಸಾಕ್ಷಿ. ತಾಲ್ಲೂಕು ಆಡಳಿತ ₹39 ಕೋಟಿ ಹಾನಿ ಬಗ್ಗೆ ವರದಿಯನ್ನು ಸರ್ಕಾರಕ್ಕೆ ನೀಡಿತ್ತು. ಈಗ ಪಟ್ಟಿಯಲ್ಲಿ ಹೆಸರೇ ಇಲ್ಲ. ಇದ್ಯಾವ ನ್ಯಾಯ ಎಂದು ಪ್ರಶ್ನಿಸುತ್ತಾರೆ ತಾಲ್ಲೂಕಿನ ಸಂತ್ರಸ್ತರು.

‘ಕಳೆದ ವರ್ಷದ ಮಳೆ ಹಾನಿ ಪರಿಹಾರ ಇನ್ನೂ ಬಂದಿಲ್ಲ. ಈ ಬಾರಿಯೂ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಆದರೆ ಅತಿವೃಷ್ಟಿ ಪೀಡಿತ ತಾಲ್ಲೂಕಿನ ಪಟ್ಟಿಯಲ್ಲಿ ನಮ್ಮ ತಾಲ್ಲೂಕಿನ ಹೆಸರು ಇಲ್ಲದಿರುವುದು ಆತಂಕ ತಂದಿದೆ. ‍ಪರಿಹಾರ ಸಿಕ್ಕರೆ ಹೇಗೋ ಬದುಕು ಸಾಗಿಸಬಹುದು. ಈಗ ಬದುಕಿನ ಚಿಂತೆ ಕಾಡುತ್ತಿದೆ’ ಎಂದು ಅಳಲು ತೋಡಿಕೊಂಡರು ಯಡಿಯೂರಿನ ಶಿವಪ್ಪ ಗೌಡ ಹಾಗೂ ನಿಟ್ಟೂರಿನ ಮಹಾಬಲ.

ಹಾನಿ ಪ್ರಮಾಣ ₹ 39.33 ಕೋಟಿ:ತಾಲ್ಲೂಕಿನ ನಗರ, ಹುಂಚಾ ಹೋಬಳಿಯಲ್ಲಿ ಭಾರಿ ಮಳೆ ಸುರಿದು ಸಾಕಷ್ಟು ಅನಾಹುತವಾಗಿದೆ. ಕಸಬಾ, ಕೆರೆಹಳ್ಳಿ ಹೋಬಳಿಯಲ್ಲೂ ಅಪಾರ ನಷ್ಟವಾಗಿದೆ. ಜಾನುವಾರು ಜೀವ ಹಾನಿ, ಕೊಟ್ಟಿಗೆ ಹಾನಿ, ಮನೆ ಹಾನಿ, ಬೆಳೆ ಹಾನಿ, ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡಗಳ, ರಸ್ತೆ, ಸೇತುವೆಗಳ ಹಾನಿ ಬಗ್ಗೆ ವರದಿ ತಯಾರಿಸಿದ ತಾಲ್ಲೂಕು ಆಡಳಿತ ₹ 39.33 ಕೋಟಿ ಹಾನಿಯಾಗಿದೆ ಎಂದು ವರದಿ ಸಲ್ಲಿಸಿದೆ. ಆದರೆ ಪಟ್ಟಿಯಲ್ಲಿ ಮಾತ್ರ ಹೆಸರಿಲ್ಲ.

ಸಚಿವರು ಬಂದರು: ಹೊಸನಗರ ತಾಲ್ಲೂಕಿನ ಮಳೆಹಾನಿ ಕುರಿತಂತೆ ಜಿಲ್ಲಾಧಿಕಾರಿಗಳೇ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ ಹಾನಿ ‍ಪರಿಶೀಲಿಸಿ ಪರಿಹಾರ ಭರವಸೆ ನೀಡಿದ್ದರು. ಕೆರೆಹಳ್ಳಿ ಮತ್ತು ಕಸಬಾ ಹೋಬಳಿಯಲ್ಲಿ ಶಾಸಕ ಹಾಲಪ್ಪ ಹರತಾಳು ಕೂಡ ಮಳೆಹಾನಿ ಪರಿಶೀಲಿಸಿದ್ದರು. 

ಅಂಡಗದೋದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಿಂದ ಪ್ರವಾಹ ಪರಿಸ್ಥಿತಿ ಕಂಡುಬಂದಿದ್ದು, 6 ಕುಟುಂಬಗಳು ನೆಲೆ ಕಳೆದುಕೊಂಡಿದ್ದವು. ಸರ್ಕಾರಿ ಶಾಲೆಯಲ್ಲಿ ಗಂಜಿಕೇಂದ್ರ ತೆರೆಯಲಾಗಿತ್ತು. ಇಲ್ಲಿಗೂ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಭೇಟಿ ನೀಡಿದ್ದರು. ಆದರೂ ಜಿಲ್ಲೆಯ ಅತಿವೃಷ್ಟಿ ಪಟ್ಟಿಯಲ್ಲಿ ಹೊಸನಗರ ಕಣ್ಮರೆ ಆಗಿದ್ದು ಹೇಗೆ ಎಂಬುದು ಕಾಂಗ್ರೆಸ್ ಮುಖಂಡ ಬಿ.ಜಿ. ಚಂದ್ರಮೌಳಿ ಗೌಡ ಅವರ ಪ್ರಶ್ನೆ.

ಮೂವರ ಸಾವು: ಹೊಸನಗರ ತಾಲ್ಲೂಕಿನಲ್ಲಿ ಸುರಿದ ವ್ಯಾಪಕ ಮಳೆಗೆ ಮೂವರು ಮೃತಪಟ್ಟಿದ್ದರು. ಎರಡು ಕುಟುಂಬಗಳಿಗೆ ₹ 5ಲಕ್ಷ ಪರಿಹಾರ ನೀಡಲಾಗಿದೆ. ಒಂದು ಶವ ನದಿಯಲ್ಲಿ ಪತ್ತೆಯಾದ ಕಾರಣ ಪೊಲೀಸ್ ತನಿಖೆ ಮತ್ತು ಮರಣೋತ್ತರ ಪರೀಕ್ಷೆ ವರದಿ ಬಾಕಿ ಇದ್ದು ಪರಿಹಾರ
ವಿತರಣೆಯಾಗಿಲ್ಲ.

ಮಳೆ ಮಾಪಕ ಇಲ್ಲ: ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಮಳೆ ವರದಿ ಮಾಡಲು ಮಳೆ ಮಾಪಕ ಇರಬೇಕು ಎಂಬುದು ಕಾನೂನು. ಆದರೆ ಇಲ್ಲಿ ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ಮಳೆ ಮಾಪಕ ಇಲ್ಲ. ಇನ್ನೂ ಹಲವಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಮಳೆ ಮಾಪಕ ಕೆಟ್ಟು ಕುಳಿತಿವೆ. ಈ ಬಗ್ಗೆ ತಾಲ್ಲೂಕು ಆಡಳಿತ ತಲೆ ಕೆಡಿಸಿಕೊಂಡಿಲ್ಲ ಎಂಬುದು ಜನರ ದೂರು.

ತಾಲ್ಲೂಕಿನಲ್ಲಿ ವ್ಯಾಪಕ ಮಳೆ ಸುರಿದರೂ ಅತಿವೃಷ್ಟಿ ಪಟ್ಟಿಗೆ ಬರುವುದಿಲ್ಲ ಎಂದರೆ ಇದು ಅಧಿಕಾರಿಗಳ ನಿರ್ಲಕ್ಷ್ಯ. ಇಲ್ಲಿನ ರೈತರಿಗೆ ಪರಿಹಾರ ಬಾರದಾಗಿದೆ. ಈ ಬಗ್ಗೆ ರೈತರನ್ನು ಸಂಘಟಿಸಿ ಹೋರಾಟ ಮಾಡುವುದು ಅನಿವಾರ್ಯ.
ಬಿ.ಜಿ. ಚಂದ್ರಮೌಳಿ ಗೌಡ, ಕಾಂಗ್ರೆಸ್ ಮುಖಂಡ

ಅತಿವೃಷ್ಟಿ ಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ಹೊಸನಗರ, ತೀರ್ಥಹಳ್ಳಿ ತಾಲ್ಲೂಕು ಬಿಟ್ಟು ಹೋಗಿರುವ ಬಗ್ಗೆ ಮಾಹಿತಿ ಪಡೆಯಲಾಗಿದೆ. ಪಟ್ಟಿ ಅವೈಜ್ಞಾನಿಕವಾಗಿದೆ. ಬಿಟ್ಟುಹೋದ ತಾಲ್ಲೂಕುಗಳನ್ನು ಸೇರಿಸುವಲ್ಲಿ ಕ್ರಮ ಕೈಗೊಳ್ಳಲಾಗುವುದು.

- ಆರಗ ಜ್ಞಾನೇಂದ್ರ, ಗೃಹ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.