ಬುಧವಾರ, ಜುಲೈ 28, 2021
26 °C
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಆಕ್ರೋಶ

ಕಾಯ್ದೆ ಜಾರಿಗೆ ಬಂದರೆ ರೈತ ಕುಲವೇ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು, ರೈತರಲ್ಲದವರು ಭೂಮಿ ಖರೀದಿಸಲು ಅವಕಾಶ ನೀಡಿದರೆ ರೈತ ಕುಲವೇ ನಾಶವಾಗಲಿದೆ. ಆಹಾರ ಭದ್ರತೆಗೆ ಅಪಾಯವಾಗಲಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಆಕ್ರೋಶ ವ್ಯಕ್ತಪಡಿಸಿದರು.

 ರೈತರಲ್ಲದವರು ಕೃಷಿ ಭೂಮಿ ಖರೀದಿಸಲು ಈ ಹಿಂದೆ ಇದ್ದ 25 ಲಕ್ಷ ರು. ಆದಾಯ ಮಿತಿ ತೆಗೆದು ಹಾಕಲಾಗಿದೆ. ಉಳುವವನೇ ಭೂ ಒಡೆಯ ಕಾಯ್ದೆಗೆ ಈ ನೀತಿ ತದ್ವಿರುದ್ಧವಾಗಿದೆ. ಸರ್ಕಾರ ತಕ್ಷಣ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಈ ಹಿಂದೆ ಸಾಮಾಜಿಕ ಪರಿಕಲ್ಪನೆಯಲ್ಲಿ ಉಳುವವನಿಗೆ ಭೂಮಿ ಕೊಡಲು, ಒಬ್ಬ ರೈತ ಜಮೀನು ಹೊಂದಲು ಮಿತಿ ಇರುವ ಕಾಯ್ದೆ ರೂಪಿಸಲಾಗಿತ್ತು. ಕೆಲವರು ಸಾವಿರಾರು ಎಕರೆ ಭೂಮಿ ಹೊಂದಿರುವ ಊಳಿಗಮಾನ್ಯ ಪದ್ಧತಿಗೆ ತಿಲಾಂಜಲಿ ನೀಡಿ, ಗೇಣಿದಾರರು, ಬಡವರಿಗೂ ಭೂಮಿಯ ಹಕ್ಕುನೀಡಲಾಗಿತ್ತು. ಈಗ ಎಲ್ಲ ತತ್ವಗಳಿಗೂ ತಿಲಾಂಜಲಿ ಹೇಳಲಾಗುತ್ತಿದೆ ಎಂದು ಆರೋಪಿಸಿದರು.

ಕಪ್ಪು ಹಣವಿರುವ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು, ವ್ಯಾಪಾರಸ್ಥರು, ದೊಡ್ಡ ದೊಡ್ಡ ಉದ್ದಿಮೆದಾರರು ತಮಗೆ ಇಷ್ಟವಾಗುವಷ್ಟು ಭೂಮಿ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ಕಪ್ಪು ಹಣ ಭೂಮಿಗೆ ಸುರಿಯಲು ಅವಕಾಶ ಮಾಡಿಕೊಡಲಾಗಿದೆ. ಬಂಡಾವಾಳ ಶಾಹಿಗಳು ಭೂಮಿ ಖರೀದಿಗೆ ಮುಂದಾಗುವ ಪರಿಣಾಮ ಭೂಮಿ ಬೆಲೆ ಹೆಚ್ಚಳವಾಗಲಿದೆ. ಶೇ 80ರಷ್ಟು ಭಾಗವಿರುವ ಸಣ್ಣ, ಅತಿಸಣ್ಣ ರೈತರು ನಾಶವಾಗುವರು. ಖಾಸಗಿ, ಫೈನಾನ್ಸ್ ಮತ್ತು ಬ್ಯಾಂಕ್, ಸೊಸೈಟಿ ಸಾಲಗಾರರ ಕಿರುಕುಳಕ್ಕೆ ಹೆದರಿ ಈಗಾಗಲೇ ಒಂದಷ್ಟು ಭೂಮಿ ಮಾರಿಕೊಂಡಿದ್ದಾರೆ. ಈಗ ಸಂಪೂರ್ಣ ಬೀದಿಗೆ ಬೀಳುತ್ತಾರೆ ಎಂದು ಭವಿಷ್ಯ ನುಡಿದರು.

ಈ ತಿದ್ದುಪಡಿ ಕಾಯ್ದೆ ಜಾರಿಯಾದರೆ ಕೃಷಿ ಭೂಮಿ ನಾಶವಾಗಿ ಆಹಾರದ ಅಭಾವ ತಲೆದೋರುತ್ತದೆ. ಆಹಾರ ಭದ್ರತೆ ಕಲ್ಪನೆ ನಾಶವಾಗಿ ಆಹಾರದ ಕೊರತೆ ಉಂಟಾಗಬಹುದು. ಕಾರ್ಪೊರೇಟ್‌ ಕಂಪನಿಗಳು, ರಿಯಲ್ ಎಸ್ಟೇಟ್ ಉದ್ಯಮಕ್ಕೆ ಈ ಕಾಯ್ದೆ ಅನುಕೂಲವಾಗುತ್ತದೆ. ಸರ್ಕಾರ ಹೇಳಿದಂತೆ ಯುವಕರು ನಷ್ಟದಲ್ಲಿರುವ ಕೃಷಿ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.

ಕೇಂದ್ರ, ರಾಜ್ಯ ಸರ್ಕಾರಗಳು ಕೊರೊನಾ ಸಂಕಷ್ಟ ಸಮಯದಲ್ಲಿ ರೈತ ವಿರೋಧಿಯಾದ ಭೂ ಸ್ವಾಧೀನ ಕಾಯ್ದೆ, ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ವಿದ್ಯುತ್ ಚ್ಛಕ್ತಿ ಕಾಯ್ದೆಗಳನ್ನು ಶಾಸಕಾಂಗದಲ್ಲಿ  ಚರ್ಚಿಸದೇ ಅವಸರವಾಗಿ ಸುಗ್ರೀವಾಜ್ಞೆ ಹೊರಡಿಸುತ್ತಿರುವ ಕಾರಣ ದೇಶದ ಜನರಿಗೆ ತಿಳಿಸಬೇಕು. ಇಂತಹ ಜನ ವಿರೋಧಿ ಕಾಯ್ದೆ ಕಾರಣ ಜನರು ಸರ್ಕಾರದ ವಿರುದ್ಧ ನಿಲ್ಲುತ್ತಾರೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ಎಸ್.ಶಿವಮೂರ್ತಿ, ಇ.ಟಿ.ಜಗದೀಶ್, ಟಿ.ಎಂ.ಚಂದ್ರಪ್ಪ, ಕೆ.ರಾಘವೇಂದ್ರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು