ಶನಿವಾರ, ಮೇ 28, 2022
31 °C
ನವಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಗೋ.ರಮೇಶ್ ಗೌಡ ಆರೋಪ

‘ಹುಣಸೋಡು ಸ್ಫೋಟ: ಸಿಗದ ಪರಿಹಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಹುಣಸೋಡು ಸ್ಫೋಟ ಪ್ರಕರಣ ನಡೆದು ಒಂದು ವರ್ಷ ಕಳೆದರೂ ಇನ್ನೂ ಹಾನಿ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ನವಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಗೋ.ರಮೇಶ್ ಗೌಡ ಆರೋಪಿಸಿದರು.

ಹುಣಸೋಡಿನಲ್ಲಿ ಜಿಲೆಟಿನ್ ಕಡ್ಡಿ ಸ್ಫೋಟದಿಂದ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸುತ್ತಮುತ್ತಲಿನ ಗ್ರಾಮಗಳಾದ ಗೆಜ್ಜೇನಹಳ್ಳಿ, ಹನುಮಂತ ನಗರ, ಹುಣಸೋಡು, ಅಬ್ಬಲಗೆರೆ, ಬಸವನಗಂಗೂರು, ಚನ್ನಮುಂಭಾಪುರ, ಬೊಮ್ಮನಕಟ್ಟೆ, ಕಲ್ಲಗಂಗೂರು ಸೇರಿ ಅನೇಕ ಗ್ರಾಮಗಳ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಕೆಲ ಮನೆಗಳ ಚಾವಣಿಗೆ ಹಾನಿಯಾಗಿತ್ತು. ಜಿಲ್ಲಾಡಳಿತದಿಂದ ಹಾನಿ ಸಂತ್ರಸ್ತರಿಗೆ ಪರಿಹಾರ ಭರವಸೆ ನೀಡಲಾಗಿತ್ತು. ಆದರೆ ವರ್ಷ ಕಳೆದರೂ ಇನ್ನೂ ಭರವಸೆ ಈಡೇರಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘850 ಸಂತ್ರಸ್ತರು ಪ್ರತ್ಯೇಕವಾಗಿ ಸ್ಫೋಟದಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದು, ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ಗಳು ಸರಿಯಾಗಿ ಸ್ಥಳ ಪರಿಶೀಲನೆ ನಡೆಸದೇ ಶೇ 10ರಷ್ಟು ಹಾನಿಯಾಗಿದೆ ಎಂದು ವರದಿ ನೀಡಿದ್ದಾರೆ. ಪ್ರತಿಯೊಬ್ಬ ಸಂತ್ರಸ್ತರಿಗೂ ಯಾವುದೇ ಆನ್ಯಾಯ ಮಾಡದೆ ಪರಿಹಾರ ನೀಡಲಾಗುವುದು ಎಂದಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಈಗ ನನ್ನಿಂದ ಪರಿಹಾರ ನೀಡಲು ಸಾಧ್ಯವಿಲ್ಲ ಎಂಬ ಜಾರಿಕೆಯ ಉತ್ತರ ನೀಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಫೋಟ ಪ್ರಕರಣದಲ್ಲಿ ಹಾನಿಗೊಳಗಾದ ಮನೆಗಳ ಮಾಲೀಕರಿಗೆ ಜಿಲ್ಲಾಡಳಿತ ತಕ್ಷಣವೇ ಪರಿಹಾರ ನೀಡಬೇಕು. ಹುಣಸೋಡು ಸುತ್ತಮುತ್ತ ಕಾರ್ಯನಿರ್ವಹಿಸುತ್ತಿರುವ ಕ್ರಶರ್, ಕ್ವಾರಿಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಮುಖರಾದ ನಿಂಗರಾಜ್, ರಾಜಮ್ಮ, ಸಂತೋಷ್, ದೇವೇಂದ್ರಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು