ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಕೃಷಿಯಿಂದ ‘ಸುಧಾ’ರಿಸಿದ ಬದುಕು

4 ಎಕರೆ ಭೂಮಿಯಲ್ಲಿ ವೈವಿಧ್ಯಮಯ ಬೆಳೆಗಳು
Last Updated 20 ಏಪ್ರಿಲ್ 2022, 5:26 IST
ಅಕ್ಷರ ಗಾತ್ರ

ಸೊರಬ: ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಗುಂಜನೂರು ಗ್ರಾಮದಲ್ಲಿ ಸುಧಾ ಜಗದೀಶಗೌಡ ದಂಪತಿ ಸಮಗ್ರ ಕೃಷಿಯಲ್ಲಿ ವಿಶೇಷ ಪ್ರಯೋಗ ನಡೆಸಿ ಆರ್ಥಿಕವಾಗಿ ಸುಭದ್ರ ಜೀವನ ನಡೆಸುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ಅಧಿಕ ಬಂಡವಾಳ ಹೂಡಿ ನಷ್ಟ ಅನುಭವಿಸುತ್ತಿರುವ ಬಹುತೇಕ ಕೃಷಿ ಕುಟುಂಬಗಳು ನಿರಾಸೆಗೊಂಡು ಮುಂದಿನ ಪೀಳಿಗೆ ಕೃಷಿ ಕಡೆ ಮುಖ ಮಾಡುವುದೇ ಬೇಡ ಎನ್ನುವಷ್ಟರ ಮಟ್ಟಿಗೆ ತಾತ್ಸಾರ ಭಾವನೆ ಹೊಂದಿದ್ದಾರೆ. ಇದರಿಂದಾಗಿ ಯುವಕರು ನಗರದತ್ತ ಮುಖಮಾಡಿ ಅಲ್ಲಿಯೂ ಸರಿಯಾದ ನೆಲೆಯಿಲ್ಲದೆ ಅತಂತ್ರರಾಗಿದ್ದಾರೆ. ಆದರೆ ಗುಂಜನೂರಿನ ಸುಧಾ ಜಗದೀಶಗೌಡ ದಂಪತಿ ಅವಿಭಕ್ತ ಕುಟಂಬದಿಂದ ಹೊರಬಂದು 7 ವರ್ಷಗಳ ನಂತರ ತಮ್ಮ ಪಾಲಿನ 4 ಎಕರೆ ಜಮೀನು ದೊರೆತ ಮೇಲೆ ಛಲದಿಂದ ಸಮಗ್ರ ಕೃಷಿ ಪದ್ಧತಿ ಜೊತೆಗೆ ಹೈನುಗಾರಿಕೆ ಅಳವಡಿಸಿಕೊಂಡಿದ್ದು, ಮಾನಸಿಕ ನೆಮ್ಮದಿ ಕಂಡುಕೊಂಡಿದ್ದಾರೆ.

2 ಎಕರೆ ಜಮೀನಿನಲ್ಲಿ ಮೂಲಂಗಿ, ಸಬ್ಬಸಗಿ, ಪಾಲಕ್, ಕೊತಂಬರಿ, ಮೆಂಥ್ಯ, ಕೋಸು, ಕ್ಯಾರೆಟ್, ಹಿರೇಬಳ್ಳಿ, ಸವತೆಬಳ್ಳಿ ಸೇರಿ ಮಡಿ ಹಾಗೂ ಪಟ್ಟೆ ಮಾಡಿ ಆರ್ಥಿಕ ಲಾಭ ಗಳಿಸಿದ್ದಾರೆ. ಜೊತೆಗೆ ಅಡಿಕೆ ಮಧ್ಯೆ ದಾಲ್ಚಿನ್ನಿ, ಗೋಡಂಬಿ, ಕಿತ್ತಳೆ, ಮೂಸಂಬಿ, ಬಾರೆ, ಮಾವು, ಪೇರಲೆ, ಕಬ್ಬು, ಸಪೋಟ, ನಿಂಬೆ, ಪಪ್ಪಾಯಿ ಹಲಸು, ಹುಣಸೆ ಸೇರಿ ಎಲ್ಲ ಬಗೆಯ ಗಿಡಗಳನ್ನು ಬೆಳೆಸಿದ್ದಾರೆ.

ಕೂಲಿಯಾಳುಗಳ ಮೇಲೆ ಅವಲಂಬಿತರಾಗದೇ ಎಲ್ಲ ಕೆಲಸಗಳನ್ನು ತಾವೇ ಮಾಡುತ್ತಾರೆ. ತಮ್ಮೊಂದಿಗೆ ಶಾಲೆಗೆ ಹೋಗುತ್ತಿರುವ ಪುತ್ರರಿಬ್ಬರೂ ಕೃಷಿ ಚಟುವಟಿಕೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಬಹುತೇಕ ರೈತರು ಕೃಷಿಯಲ್ಲಿ ಅಧಿಕ ಬಂಡವಾಳ ಹೂಡಿ ಕೈಸುಟ್ಟುಕೊಳ್ಳುತ್ತಿರುವಾಗ ಸುಧಾ ದಂಪತಿ ಸರಿಯಾದ ಸಮಯ ನಿಷ್ಠೆ, ಪ್ರಾಮಾಣಿಕತೆಯಿಂದ ಯೋಗ್ಯ ಬೆಳೆ ಮಾಡುವ ಕನಸು ಇದ್ದರೆ ಯಾವುದೇ ಕಾರಣಕ್ಕೂ ಭೂಮಿ ರೈತನನ್ನು ಬಡವನಾಗಲು ಬಿಡುವುದಿಲ್ಲ ಎನ್ನುವ ಅಭಿಪ್ರಾಯ ಹೊಂದಿ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಅಡಿಕೆ ದೀರ್ಘಾವಧಿ ಬೆಳೆಯಾಗಿದ್ದರೂ ಬಾಳೆಯನ್ನು ಅಡಿಕೆ ಮಧ್ಯೆ ಮಿಶ್ರ ಬೆಳೆಯಾಗಿ ಬೆಳೆದಿದ್ದರಿಂದ ಒಂದು ವರ್ಷದ ಅವಧಿಯಲ್ಲಿ ಲಕ್ಷಾಂತರ ರೂಪಾಯಿ ಸಂಪಾದಿಸಿದ್ದಾರೆ.

ಅಡಿಕೆ ಹಾಗೂ ಬಾಳೆಗೆ ರಾಸಾಯನಿಕ ಗೊಬ್ಬರ ಅಳವಡಿಸದೇ ಸಂಪೂರ್ಣ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಹಸುಗಳ ಮೂತ್ರ ಮಿಶ್ರಿತ ಸಗಣಿ, ಬೆಲ್ಲ ಹಾಗೂ ಗೊಬ್ಬರದ ಎಲೆಗಳನ್ನು ಕೊಳೆ ಹಾಕಿ ಬುಡಕ್ಕೆ ಹಾಕುವುದರಿಂದ ಗಿಡಗಳು ಫಲಭರಿತವಾಗಿ ಕಾಣುತ್ತಿವೆ. ಆರಂಭದಲ್ಲಿ ಅಡಿಕೆ ಸಸಿ ನಡುವೆ ಏಲಕ್ಕೆ ಬಾಳೆ ನೆಟ್ಟು ಒಂದೂವರೆ ವರ್ಷದಲ್ಲಿ ಉತ್ತಮ ಇಳುವರಿ ಬರುವ ನಿರೀಕ್ಷೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT