ಶನಿವಾರ, ಸೆಪ್ಟೆಂಬರ್ 18, 2021
23 °C
ಅಧಿಕಾರಿಗಳ ಕಿರುಕುಳದಿಂದ ಹೈರಾಣಾದ ‘ಚರಕ’ l ಅನುದಾನ ಹಿಂತಿರುಗಿಸಲು ಮುಂದಾದ ಸಂಸ್ಥೆ

ಅಧಿಕಾರಶಾಹಿ ಅಡಕತ್ತರಿಯಲ್ಲಿ ‘ಪವಿತ್ರ ವಸ್ತ್ರ’ ಯೋಜನೆ

ಎಂ.ರಾಘವೇಂದ್ರ Updated:

ಅಕ್ಷರ ಗಾತ್ರ : | |

Prajavani

ಸಾಗರ: ಅಧಿಕಾರಿಗಳ ಅಸಹಕಾರ, ನಿರ್ಲಕ್ಷ್ಯ ಧೋರಣೆಯಿಂದ ಸರ್ಕಾರದ ಯೋಜನೆಯೊಂದು ಹೇಗೆ ವಿಫಲಗೊಳ್ಳುತ್ತದೆ ಎನ್ನುವುದಕ್ಕೆ ತಾಜಾ ಉದಾಹರಣೆ ಇದು. ಅಧಿಕಾರಿಗಳ ಕಿರುಕುಳದಿಂದ ಬೇಸರಗೊಂಡ ಸಾಗರ ತಾಲ್ಲೂಕಿನ ಹೆಗ್ಗೋಡಿನ ಚರಕ ಸಂಸ್ಥೆ ತನಗೆ ಮಂಜೂರಾಗಿದ್ದ ‘ಪವಿತ್ರ ವಸ್ತ್ರ’ ಯೋಜನೆ ಹಣವನ್ನು ಪ್ರತಿಭಟನಾ ರೂಪದಲ್ಲಿ ಸರ್ಕಾರಕ್ಕೆ ಮರಳಿಸಲು ಮುಂದಾಗಿದೆ.

ಪ್ರತಿ ತಿಂಗಳು 30 ಸಾವಿರ ಮೀಟರ್‌ನಷ್ಟು ಕೈಮಗ್ಗದ ಬಟ್ಟೆ ಉತ್ಪಾದಿಸುವ ಮೂಲಕ ಭಾರತದಲ್ಲೇ ಹೆಚ್ಚು ಉತ್ಪಾದನೆ ಮಾಡುವ ಕೈಮಗ್ಗ ಘಟಕಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಚರಕ ಸಂಸ್ಥೆ. 2009ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಇಲ್ಲಿ ನೈಸರ್ಗಿಕ ಬಣ್ಣಗಾರಿಕೆ, ಸಂಶೋಧನಾ ಅಭಿವೃದ್ಧಿ ತರಬೇತಿ ಕೇಂದ್ರವನ್ನು ಆರಂಭಿಸಲು ಮುಂದಾಯಿತು. ಆದರೆ ಈ ಸಂಬಂಧ ಆದೇಶ ಹೊರಬೀಳಲು 10 ವರ್ಷಗಳು ಬೇಕಾಯಿತು.

2019ನೇ ಸಾಲಿನಲ್ಲಿ ಸರ್ಕಾರ ತರಬೇತಿ ಕೇಂದ್ರ ಸ್ಥಾಪನೆಗೆ ₹ 33 ಲಕ್ಷ ಬಿಡುಗಡೆ ಮಾಡಿತು. ಸರ್ಕಾರ, ಖಾಸಗಿ ಸಹಭಾಗಿತ್ವದಲ್ಲಿನ ಈ ಯೋಜನೆಗೆ ಚರಕ ಸಂಸ್ಥೆ ₹ 57 ಲಕ್ಷ ವಿನಿಯೋಗಿಸಿತ್ತು. ಸರ್ಕಾರದಿಂದ ಬಿಡುಗಡೆಯಾದ ₹ 33 ಲಕ್ಷ ಫಲಾನುಭವಿ ಸಂಸ್ಥೆಗೆ ತಲುಪಲೇ ಇಲ್ಲ. ಏಕೆಂದರೆ ಈ ಹಣವನ್ನು ಕೈಮಗ್ಗ ಇಲಾಖೆ ಮತ್ತು ಚರಕ ಸಂಸ್ಥೆಯ ಜಂಟಿ ಖಾತೆಗೆ ಜಮಾ ಮಾಡಲಾಗಿತ್ತು. ಹಣ ಬಿಡುಗಡೆಗೆ ಇಲಾಖೆ ಕೇಳಿದ ನೂರೆಂಟು ದಾಖಲೆಗಳನ್ನು ಒದಗಿಸಿದರೂ ಚರಕ ಸಂಸ್ಥೆಗೆ ಯೋಜನೆಯ ಹಣ
ಪಡೆಯಲು ಸಾಧ್ಯವಾಗಲೇ ಇಲ್ಲ.

2020ನೇ ಸಾಲಿನಲ್ಲಿ ಚರಕ ಸಂಸ್ಥೆಯ ಪ್ರಮುಖರಾದ ಪ್ರಸನ್ನ ಅವರು ಅಧಿಕಾರಿಗಳ ಈ ಧೋರಣೆ ಖಂಡಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ವಿಷಯ ತಿಳಿದ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಸನ್ನ ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಸಮಸ್ಯೆ ಕುರಿತು ಚರ್ಚಿಸಿದರು.

ಈ ಚರ್ಚೆಯ ಫಲವಾಗಿ ಹುಟ್ಟಿದ್ದೇ ‘ಪವಿತ್ರ ವಸ್ತ್ರ’ ಯೋಜನೆ. ಕರ್ನಾಟಕದಲ್ಲಿ ಸುಮಾರು 2 ಸಾವಿರ ಮಠಗಳಿದ್ದು, ಪ್ರತಿ ಮಠಕ್ಕೂ ಒಂದು ವರ್ಷಕ್ಕೆ 250 ಮೀಟರ್‌ನಷ್ಟು ಖಾವಿ ಬಟ್ಟೆಯ ಅಗತ್ಯವಿದೆ. ಕೈಮಗ್ಗದ ಖಾವಿ ಬಟ್ಟೆ ಲಭ್ಯವಿಲ್ಲದ ಕಾರಣ ಮಠದವರು ಸಿಂಥೆಟಿಕ್ ಬಟ್ಟೆ ಬಳಸುತ್ತಿದ್ದಾರೆ. ಮಠಗಳಿಗೆ ಕೈಮಗ್ಗದ ಖಾವಿ ಬಟ್ಟೆ ಪೂರೈಸುವಂತಾದರೆ ರಾಜ್ಯದ ಎಲ್ಲಾ ನೇಕಾರರಿಗೆ ಕೈತುಂಬ ಕೆಲಸ ಸಿಗುತ್ತದೆ ಎಂದು ಪ್ರಸನ್ನ ಅವರು ನೀಡಿದ ಮಾಹಿತಿಯನ್ನು ಆಧರಿಸಿ ಯಡಿಯೂರಪ್ಪ ಅವರು ಯೋಜನೆಗೆ ಅಸ್ತು ಎಂದಿದ್ದರು.

ಚರಕದ ತರಬೇತಿ ಕೇಂದ್ರದ ಮೂಲಕವೇ ‘ಪವಿತ್ರ ವಸ್ತ್ರ’ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ ಆದೇಶಿಸಿತ್ತು.
ಆದರೆ ಹೀಗೆ ಆದೇಶಿಸುವಾಗ ‘ಕೈಮಗ್ಗ ಇಲಾಖೆಯ ಸಹಯೋಗ’ ಎಂಬ ಪದ ಬಳಸಿದ್ದು ಯೋಜನೆ ಅನುಷ್ಠಾನಕ್ಕೆ ಮಾರಕವಾಗಿ ಪರಿಣಮಿಸಿದೆ.

ಈ ಯೋಜನೆಗೆ ಸರ್ಕಾರದಿಂದ ಬಿಡುಗಡೆಯಾದ ಹಣವನ್ನು ತಮ್ಮ ಖಾತೆಯಲ್ಲಿ ಇರಿಸಿಕೊಂಡಿರುವ ಕೈಮಗ್ಗ ಇಲಾಖೆ ಅಧಿಕಾರಿಗಳು ಪ್ರತಿಯೊಂದು ವಸ್ತುವಿನ ಖರೀದಿಗೂ ಇ-ಟೆಂಡರ್ ಪ್ರಕ್ರಿಯೆ ನಡೆಸಬೇಕು ಎಂಬ ಪ್ರಾಯೋಗಿಕವಾಗಿ ಸಾಧ್ಯವಿಲ್ಲದ ಷರತ್ತನ್ನು ಮುಂದಿಟ್ಟಿದ್ದಾರೆ. ಈ ಕಾರಣ ಸಣ್ಣಪುಟ್ಟ ಮಗ್ಗ ಖರೀದಿಗೆ, ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ, ಅವರಿಗೆ ವೇತನ ಪಾವತಿ ಸೇರಿ ಪ್ರತಿಯೊಂದಕ್ಕೂ ಇಲಾಖೆಯ ಅಧಿಕಾರಿಗಳನ್ನು ಅವಲಂಬಿಸುವಂತಾಗಿದೆ.

ಯೋಜನೆ ಮಂಜೂರಾತಿಗೆ ಮುನ್ನವೇ ಎಲ್ಲಾ ಅಗತ್ಯ ದಾಖಲೆಗಳನ್ನು ಪೂರೈಸಿದ್ದರೂ ನಂತರವೂ ದಾಖಲೆಗಳನ್ನು ಕೇಳಿ ಅಧಿಕಾರಿಗಳು ಹಣ ಬಿಡುಗಡೆಗೆ ಸತಾಯಿಸುತ್ತಿದ್ದಾರೆ ಎಂಬುದು ಚರಕ ಸಂಸ್ಥೆಯ ದೂರು.

ಎರಡು ವರ್ಷಗಳಿಂದ ಇಲಾಖೆಯೊಂದಿಗೆ ಗುದ್ದಾಟ ನಡೆಸಿದ ಚರಕ ಸಂಸ್ಥೆಯವರು ರೋಸಿಹೋಗಿ ಈಗ ಮಂಜೂರಾದ ಹಣವನ್ನೇ ಸರ್ಕಾರಕ್ಕೆ ಮರಳಿಸಲು ಮುಂದಾಗಿದ್ದಾರೆ. ಇದರಿಂದಾಗಿ ಪವಿತ್ರ ವಸ್ತ್ರ ಯೋಜನೆ ನನೆಗುದಿಗೆ ಬೀಳುವಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.