ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಮರ್ಪಕ ವಿದ್ಯುತ್ ಪೂರೈಕೆ: ಮೆಸ್ಕಾಂ ಕಚೇರಿಗೆ ಮುತ್ತಿಗೆ; ಕಿಟಕಿ ಗಾಜು ಪುಡಿ

ಆನಂದಪುರ ಸುತ್ತಮುತ್ತಲ ಗ್ರಾಮಗಳ ರೈತರಿಂದ ಖಂಡನೆ
Last Updated 9 ಮಾರ್ಚ್ 2022, 6:59 IST
ಅಕ್ಷರ ಗಾತ್ರ

ಆನಂದಪುರ: ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಬರೂರು, ತ್ಯಾಗರ್ತಿ, ಹಿರೆಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಮಲಂದೂರಿನಲ್ಲಿರುವ ವಿದ್ಯುತ್ ವಿತರಣಾ ಘಟಕಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

‘15 ವರ್ಷಗಳಿಂದ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದರೂ ಅಧಿಕಾರಿಗಳು ಹಾಗೂ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಈಡೀ ರಾಜ್ಯಕ್ಕೆ ವಿದ್ಯುತ್ ದೊರೆತಿರುವುದು ನಮ್ಮಿಂದ. ಆದರೆ ಭೂಮಿ ನೀಡಿದ ಶರಾವತಿ ಸಂತ್ರಸ್ತರಿಗೆ ಸಮರ್ಪಕ ವಿದ್ಯುತ್ ನೀಡದೇ ರೈತರ ಜೊತೆ ಚೆಲ್ಲಾಟ ಆಡುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಡುಗೆ ಮಾಡುವ ಮೂಲಕ ಪ್ರತಿಭಟನೆ: ಕಳೆದ ವರ್ಷ ಇದೇ ಸ್ಥಳದಲ್ಲಿ ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಸಮಸ್ಯೆ ಬಗೆಹರಿಸಿಲ್ಲ ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸಮಸ್ಯೆ ಬಗೆಹರಿಯುವವರೆಗೆ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಸ್ಥಳದಲ್ಲೇ ಅಡುಗೆ ಮಾಡಿ ಊಟ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಿದರು.

‘ದಿನಕ್ಕೆ 4 ಗಂಟೆ ವಿದ್ಯುತ್ ನೀಡುತ್ತೇವೆ ಎಂದು ಹೇಳುತ್ತಾರೆ. ಆದರೆ ಸರಿಯಾದ ಸಮಯಕ್ಕೆ ನೀಡುವುದಿಲ್ಲ. ಜೊತೆಗೆ ಆ ಸಮಯದಲ್ಲೂ ಪದೇ ಪದೇ ವಿದ್ಯುತ್ ಕಡಿತಗೊಳಿಸುತ್ತಾರೆ. ಇದರಿಂದ ಪಂಪ್‌ಸೆಟ್‌ಗಳಿಗೂ ಹಾನಿಯಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಸಹ ಉಂಟಾಗುತ್ತಿದೆ. ಮನೆಯಲ್ಲಿ ಮಿಕ್ಸಿ, ಟಿ.ವಿ ಓಡುವುದಿಲ್ಲ. ಮಕ್ಕಳಿಗೂ ಓದಲು ತೊಂದರೆ ಆಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 25 ಕಿ.ಮೀ ದೂರದ ಬರೂರು, ತ್ಯಾಗರ್ತಿ, ಹಿರೆಬಿಲಗುಂಜಿಯಿಂದ ಬಂದ ರೈತರು ವಿದ್ಯುತ್ ವಿತರಣಾ ಘಟಕದ ಕಚೇರಿಯ ಕಿಟಕಿಯ ಗ್ಲಾಸ್ ಒಡೆದು ಪುಡಿ ಮಾಡಿದರು.

ಸ್ಥಳಕ್ಕೆ ಭೇಟಿ ನೀಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಜಯಂತ್, ‘ಮೆಸ್ಕಾಂ ನಡವಳಿಕೆ ರೈತ ವಿರೋಧಿಯಾಗಿದೆ. ನೀರಿಲ್ಲದೇ ರೈತರ ಬೆಳೆ ಹಾಳಾದರೂ ಮೆಸ್ಕಾಂ ಕಣ್ಣೆತ್ತಿ ನೋಡುತ್ತಿಲ್ಲ. ಸಚಿವರು ದಿನಕ್ಕೆ 7 ಗಂಟೆ ರೈತರಿಗೆ ತ್ರೀ ಫೇಸ್ ವಿದ್ಯುತ್ ನೀಡುತ್ತಿದ್ದೇವೆ ಎಂದು ಘೋಷಣೆ ಮಾಡುತ್ತಾರೆ. ಆದರೆ ಅದು ಅನುಷ್ಠಾನಕ್ಕೆ ಬಂದಿಲ್ಲ. ವಿಧಾನಸಭೆಯಲ್ಲೂ ಸಚಿವರು ಈ ರೀತಿ ಸುಳ್ಳು ಹೇಳುತ್ತ ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೌಲ್ಯ ಹೇಗೆ ಬರುತ್ತದೆ’ ಎಂದು ಪ್ರಶ್ನಿಸಿದರು.

ಬರೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಖಂಡೋಜಪ್ಪ ಮಾತನಾಡಿ, ‘11 ವರ್ಷಗಳಿಂದ ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ನಾವು ಮನವಿ ಸಲ್ಲಿಸುತ್ತ ಬಂದಿದ್ದೇವೆ. ಆದರೆ ಅಧಿಕಾರಿಗಳು ನಮ್ಮ ಮನವಿಗೆ ಕಿಂಚಿತ್ತೂ ಸ್ಪಂದಿಸುತ್ತಿಲ್ಲ. ನಾನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷನಾಗಿದ್ದು, ನಮ್ಮ ಭಾಗಕ್ಕೆ ಕುಡಿಯುವ ನೀರು ಕೊಡಲು ವಿದ್ಯುತ್ ಸಮಸ್ಯೆಯಿಂದಾಗಿ ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರಿಗೆ ವಿದ್ಯುತ್ ಕೊಡದ ಮೆಸ್ಕಾಂ ಇನ್ನು ಪಂಪ್‌ಸೆಟ್‌ಗಳಿಗೆ ಹೇಗೆ ವಿದ್ಯುತ್ ಕೊಡುತ್ತದೆ. ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ’ ಎಂದು ಎಚ್ಚರಿಕೆ
ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, ‘ಮೆಸ್ಕಾಂ ಅಧಿಕಾರಿಗಳು ರೈತರ ಬದುಕಿನ ಜೊತೆ ಚೆಲ್ಲಾಟ ಆಡುವುದನ್ನು ನಿಲ್ಲಿಸಬೇಕು. ವಿದ್ಯುತ್‌ಗಾಗಿ ದಿನಗಟ್ಟಲೆ ಕಾಯುವ ದುಃಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯ ಶಿವಮೂರ್ತಿ ಮಾತನಾಡಿ, ‘ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ಕುಡಿಯುವ ನೀರಿಗಾಗಿ ಹಾಹಾಕಾರದ ಸ್ಥಿತಿ ನಿರ್ಮಾಣವಾಗಿದೆ. ಸಮರ್ಪಕ ವಿದ್ಯುತ್ ಕೊಡದೇ ಇರುವುದರಿಂದ ಬೆಳೆಗಳು ಸಂಪೂರ್ಣ ಹಾಳಾಗಿವೆ’ ಎಂದು ದೂರಿದರು.

ಅಧಿಕಾರಿ ಭರವಸೆ; ಪ್ರತಿಭಟನೆ ಸ್ಥಗಿತ

ಪ್ರತಿಭಟನಾ ಸ್ಥಳಕ್ಕೆ ಬಂದ ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ಕೃಷ್ಣಮೂರ್ತಿ ಮಾತನಾಡಿ, ‘ಸದ್ಯದ ಮಟ್ಟಿಗೆ ಮುಳ್ಕೆರೆ ಗ್ರಾಮಕ್ಕೆ ಉಳವಿ ವಿತರಣಾ ಕೇಂದ್ರದಿಂದ ಹಾಗೂ ಇನ್ನುಳಿದ ಗ್ರಾಮಗಳಿಗೆ ಶಿಕಾರಿಪುರದ ತಾಂಡಾ ವಿತರಣಾ ಘಟಕದಿಂದ ವಿದ್ಯುತ್ ಪೂರೈಸಲಾಗುವುದು. ತ್ಯಾಗರ್ತಿ ಭಾಗಕ್ಕೆ ಹೊಸ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು’ ಎಂದು ಭರವಸೆ ನೀಡಿದ ಪರಿಣಾಮವಾಗಿ ರೈತರು ಪ್ರತಿಭಟನೆ ಕೊನೆಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT