ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಭಾಗದಲ್ಲೂ ಡಯಾಲಿಸಿಸ್ ರೋಗಿಗಳ ಹೆಚ್ಚಳ

ನಂಜಪ್ಪ ಆಸ್ಪತ್ರೆ 3ಕೆ ರನ್, ವಿಶ್ವ ಕಿಡ್ನಿ ದಿನಾಚರಣೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ವೈಶಾಲಿ ಕಳವಳ
Last Updated 16 ಮಾರ್ಚ್ 2021, 3:40 IST
ಅಕ್ಷರ ಗಾತ್ರ

ಶಿವಮೊಗ್ಗ: ಡಯಾಲಿಸಿಸ್ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ ಕಳವಳ ವ್ಯಕ್ತಪಡಿಸಿದರು.

ನಗರದ ನಂಜಪ್ಪ ಆಸ್ಪತ್ರೆಯಲ್ಲಿ ವಿಶ್ವ ಕಿಡ್ನಿ ದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಯಾಲಿಸಿಸ್ ಘಟಕದ ನೂತನ ಸಿಆರ್‌ಆರ್‌ಟಿ ಯಂತ್ರ ಉದ್ಘಾಟಿಸಿ ಅವರು ಮಾತನಾಡಿದರು.

‘ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ರೋಗಗಳು ಗ್ರಾಮೀಣ ಪ್ರದೇಶದ ಜನರಿಗೂ ವ್ಯಾಪಿಸುತ್ತಿರುವುದು ಗಂಭೀರ ವಿಷಯ. ರೈತ ಸಮುದಾಯ ಸಹ ತಮ್ಮ ದೈನಂದಿನ ಜೀವನ ಹಾಗೂ ಸೇವಿಸುವ ಆಹಾರ ಕುರಿತು ಮರು ಚಿಂತಿಸುವ ಅಗತ್ಯವಿದೆ’ ಎಂದರು.

‘ಪ್ರತಿಯೊಬ್ಬ ಮನುಷ್ಯನಿಗೂ ಒತ್ತಡ ರಹಿತ ಜೀವನದ ಅಗತ್ಯವಿದೆ. ಪ್ರಸ್ತುತ ಪ್ರತಿಯೊಬ್ಬರೂ ಒತ್ತಡದ ಜೀವನ ನಿರ್ವಹಿಸುವ ಸ್ಥಿತಿ ಇದೆ. ಜೀವನ ಶೈಲಿ ಬದಲಾವಣೆ ಪರಿಣಾಮ ರೋಗಗಳು ಚಿಕ್ಕ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿವೆ. ಮೆದುಳು, ಹೃದಯ ಮತ್ತು ಕಿಡ್ನಿಗೆ ಹೆಚ್ಚಿನ ಒತ್ತಡ ಬೀಳದಂತೆ ನಮ್ಮ ಜೀವನ ಶೈಲಿ ಬದಲಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಗ್ರಾಮೀಣ ರೈತ ಸಮುದಾಯ ಹೆಚ್ಚಿನ ಇಳುವರಿ, ಆರ್ಥಿಕ ಅಭಿವೃದ್ಧಿಗಾಗಿ ಅಧಿಕ ಪ್ರಮಾಣದ ರಸಗೊಬ್ಬರ, ಕ್ರಿಮಿನಾಶಕ ಬಳಸುತ್ತಿದೆ. ಇದು ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತಿದೆ. ಗ್ರಾಮೀಣ ಜನರಿಗೂ ಕಿಡ್ನಿ, ಹೃದಯ ಸಂಬಂಧಿ ಕಾಯಿಲೆಗಳು ಬರಲು ಕಾರಣವಾಗಿದೆ ಎನ್ನುವುದು ಸಂಶೋಧನೆಯಿಂದ ಬಹಿರಂಗಗೊಂಡಿದೆ. ಹಾಗಾಗಿ, ರಸಗೊಬ್ಬರ, ಕ್ರಿಮಿನಾಶಕ ಬಳಕೆಗೆ ಕಡಿವಾಣ ಹಾಕಬೇಕು’ ಎಂದರು.

ಆಸ್ಪತ್ರೆಯ ಮೂತ್ರಪಿಂಡ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಅನುಪಮಾ ವೈ.ಜೆ ಮಾತನಾಡಿ, ‘25 ವರ್ಷಗಳಿಂದ ನಂಜಪ್ಪ ಆಸ್ಪತ್ರೆ ಡಯಾಲಿಸಿಸ್ ವ್ಯವಸ್ಥೆ ಕಲ್ಪಿಸಿದೆ. ಕೇವಲ ಎರಡು ಯಂತ್ರಗಳೊಂದಿಗೆ ಡಯಾಲಿಸಿಸ್ ಘಟಕ ಪ್ರಾರಂಭಿಸಲಾಗಿತ್ತು. ಇಂದು 14 ಯಂತ್ರಗಳಿವೆ. ಜಿಲ್ಲೆಯ ಸುತ್ತಮುತ್ತಲಿನ ಜನರಿಗೆ ಅನುಕೂಲ ಮಾಡಿಕೊಡಲು ಆಸ್ಪತ್ರೆ ಆಡಳಿತ ಮಂಡಳಿ ನಿರಂತರ ಸೇವೆ ನೀಡುತ್ತಾ ಬಂದಿದೆ. ಇದುವರೆಗೂ 1 ಲಕ್ಷ ರೋಗಿಗಳಿಗೆ ಡಯಾಲಿಸಿಸ್ಚಿಕಿತ್ಸೆ ನೀಡಿದೆ’ ಎಂದು ವಿವರಿಸಿದರು.

‘ಡಯಾಲಿಸಿಸ್ ಚಿಕಿತ್ಸೆಗೆ ಒಳಪಡುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಾ ಬಂದಿದೆ. ಇಂತಹ ಬೆಳವಣಿಗೆ ತಡೆಗಟ್ಟುವ ಸಾಮಾಜಿಕ ಕಳಕಳಿ ಎಲ್ಲರ ಜವಾಬ್ದಾರಿ. ಅದಕ್ಕಾಗಿ ಆಸ್ಪತ್ರೆ ವತಿಯಿಂದ ಡಯಾಲಿಸಿಸ್ ರೋಗ ಕುರಿತು ಗ್ರಾಮೀಣ ಪ್ರದೇಶದಲ್ಲಿ ಸಮೀಕ್ಷೆ ನಡೆಸಲಾಗಿದೆ. ಕಿಡ್ನಿ ರೋಗದಿಂದ ಬಳಲುತ್ತಿರುವ ಸಂಖ್ಯೆ ಶೇ 6.3ರಷ್ಟಿದೆ. ಅಧಿಕ ರಕ್ತದೊತ್ತಡ ಶೇ 33, ಸ್ಥೂಲಕಾಯ ಶೇ 14 ಎಂಬ ಮಾಹಿತಿ ದೊರಕಿದೆ. ಹಿಂದೆ ಇಂತಹ ಪ್ರಮಾಣ ಮೆಟ್ರೊ ನಗರಗಳಲ್ಲಿ ಕಂಡು ಬರುತ್ತಿತ್ತು. ಈಗ ಗ್ರಾಮೀಣ ಪ್ರದೇಶಗಳಿಗೂ ಹಬ್ಬಿರುವುದು ಆತಂಕಕಾರಿ ವಿಷಯ’ ಎಂದರು.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಂಜಪ್ಪ ಆಸ್ಪತ್ರೆಯ ಮೂತ್ರಪಿಂಡ ಶಾಸ್ತ್ರ ವಿಭಾಗ ಕೈಗೊಂಡ ಕಿಡ್ನಿ ರೋಗದ ಸಮೀಕ್ಷೆ ವಿವರಗಳನ್ನು ಒಳಗೊಂಡ ವರದಿಯನ್ನು ಡಾ.ಅನುಪಮಾ ಜಿಲ್ಲಾಡಳಿತಕ್ಕೆ ನೀಡಿದರು.

d

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT