ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಹಾರ ಮೊತ್ತ ಪಾವತಿಸಿ: ವಿಮಾ ಕಂಪೆನಿಗೆ ಆದೇಶ

-
Published 16 ಜನವರಿ 2024, 15:23 IST
Last Updated 16 ಜನವರಿ 2024, 15:23 IST
ಅಕ್ಷರ ಗಾತ್ರ

ಶಿವಮೊಗ್ಗ: ಸೇವಾ ನ್ಯೂನತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಅರ್ಜಿದಾರರಿಗೆ ವಿಮಾ ಮೊತ್ತ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಅರ್ಜಿದಾರರಾದ ಸಿ.ಡಿ ರವಿರಾಜ್ ಅವರು ಎಚ್‍ಡಿಎಫ್‍ಸಿ-ಇಆರ್‌ಜಿಒ ಜನರಲ್ ಇನ್ಶೂರೆನ್ಸ್ ಕಂಪೆನಿ ವಿರುದ್ದ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರು ಬಿಎಎಂಎಸ್ ವೈದ್ಯರಾಗಿದ್ದು, ಎಚ್‍ಡಿಎಫ್‍ಸಿ-ಇಆರ್‌ಜಿಒ ಜನರಲ್ ಇನ್ಶೂರೆನ್ಸ್ ಕಂಪೆನಿ ₹6 ಲಕ್ಷ ಪರಿಹಾರ ಮೊತ್ತವನ್ನು ಒಳಗೊಂಡ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು 2021ರಲ್ಲಿ ಪಡೆದಿದ್ದರು.

ಅರ್ಜಿದಾರರು 2021ರ ಆಗಸ್ಟ್‌ 2ರಂದು ಕೊರೊನಾ ಸೋಂಕಿಗೆ ಒಳಗಾಗಿ ಹಲವು ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಒಟ್ಟು ₹4,08,564 ವೆಚ್ಚವಾಗಿತ್ತು. ಅರ್ಜಿದಾರರು ವಿಮಾ ಕಂಪೆನಿಗೆ ವೈದ್ಯಕೀಯ ವೆಚ್ಚದ ಮರುಪಾವತಿ ಅರ್ಜಿ ಸಲ್ಲಿಸಿದಾಗ, ವಿಮಾ ಪರಿಹಾರ ನೀಡಲು ನಿರಾಕರಿಸಿದ್ದರು. ನಕಲಿ ದಾಖಲೆ ಸೃಷ್ಟಿಸಿ ತಪ್ಪಾಗಿ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ಕಾರಣ ನೀಡಿದ್ದರು. ಅಲ್ಲದೇ, ವಿಮಾ ಪಾಲಿಸಿಯನ್ನೂ ರದ್ದುಪಡಿಸಿದ್ದರು.

ಗ್ರಾಹಕರ ಆಯೋಗವು ಪ್ರಕರಣವನ್ನು ಪಕ್ಷಗಾರರು ಹಾಜರುಪಡಿಸಿದ ವೈದ್ಯಕೀಯ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿತು. ವಿಮಾ ಕಂಪೆನಿಯ ನಿರಾಕರಣೆಯು ಸೇವಾ ನ್ಯೂನತೆಯಿಂದ ಕೂಡಿದೆ ಎಂದು ತೀರ್ಮಾನಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸಿತು. 

ವಿಮಾ ಕಂಪೆನಿಯು ಈ ಆದೇಶವಾದ 45 ದಿನಗಳೊಳಗಾಗಿ ಅರ್ಜಿದಾರರು ಪಡೆದಿದ್ದ ಪಾಲಿಸಿ ಪುನರುಜ್ಜೀವಗೊಳಿಸಬೇಕು ಹಾಗೂ ವಿಮಾ ಪರಿಹಾರ ಮೊತ್ತ ₹4,08,165 ಅನ್ನು ವಾರ್ಷಿಕ ಬಡ್ಡಿ ಶೇ 9 ಸಮೇತ ಪಾವತಿಸತಕ್ಕದ್ದು ಮತ್ತು ಮಾನಸಿಕ ಹಾನಿಗೆ ಪರಿಹಾರವಾಗಿ ₹25,000, ವ್ಯಾಜ್ಯದ ಖರ್ಚು ವೆಚ್ಚಗಳ ಬಾಬ್ತು ₹10,000 ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟೆ, ಬಿ.ಡಿ.ಯೋಗಾನಂದ ಭಾಂಡ್ಯ ಅವರ ಪೀಠವು ಇತ್ತೀಚೆಗೆ ಆದೇಶಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT