ಶುಕ್ರವಾರ, ಸೆಪ್ಟೆಂಬರ್ 17, 2021
22 °C
ಜೋಗದ ರಾಣಿ ಜಲಪಾತದ ನೆತ್ತಿಯ ಮೇಲೆ ಕುಳಿತ ಟೆಕ್ಕಿ

ಕೊರೊನಾದಿಂದ ಉದ್ಯೋಗ ನಷ್ಟ: ಆತ್ಮಹತ್ಯೆಗೆ ಯತ್ನಿಸಿದ ಟೆಕ್ಕಿಯ ಮನವೊಲಿಸಿದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಗಲ್: ಕೊರೊನಾದಿಂದ ಉದ್ಯೋಗ ಕಳೆದುಕೊಂಡು ಜೋಗದ ರಾಣಿ ಜಲಪಾತದ ನೆತ್ತಿಯ ಮೇಲೆ ಕುಳಿತು ಬುಧವಾರ ಆತ್ಮಹತ್ಯೆಗೆ ಪ್ರಯತ್ನಿಸಿದ ಬೆಂಗಳೂರಿನ ಟೆಕ್ಕಿಯ ಮನವೊಲಿಸಿದ ಜೋಗ ಪೊಲೀಸರು ಅವರನ್ನು ರಕ್ಷಣೆ ಮಾಡಿದ್ದಾರೆ.

ಬುಧವಾರ ಬೆಳಿಗ್ಗೆ 11ಕ್ಕೆ ಜೋಗ ಜಲಪಾತಕ್ಕೆ ಬಂದ ಬೆಂಗಳೂರು ಸಿ.ವಿ. ರಾಮನ್ ನಗರದ ಬ್ಯಾಗ್ಮನಿ ಟೆಕ್‌ಪಾರ್ಕ್‌ನ ಟೆಕ್ಕಿ ಚೇತನ್ ಕುಮಾರ್ ಸೀತಾಕಟ್ಟೆ ಸೇತುವೆಯ ಕೆಳಭಾಗದಿಂದ ಪ್ರಾಧಿಕಾರದ ಭದ್ರತಾ ಪಡೆಯ ಕಣ್ತಪ್ಪಿಸಿ ರಾಣಿ ಜಲಪಾತದ ನೆತ್ತಿಯ ಬಳಿಗೆ ನುಸುಳಿಕೊಂಡು ಹೋಗಿದ್ದಾರೆ. ಮೊಬೈಲ್, ಲಗೇಜ್ ಬ್ಯಾಗ್ ಎಲ್ಲವನ್ನೂ 960 ಅಡಿ ಆಳದ ಪ್ರಪಾತಕ್ಕೆ ಎಸೆದು, ಇನ್ನೇನು ಒಂದು ಹೆಜ್ಜೆ ಇಟ್ಟರೆ ಪ್ರಪಾತಕ್ಕೆ ಬೀಳುವ ಅಪಾಯಕಾರಿ ಪ್ರದೇಶದ ಬಂಡೆಯ ಮೇಲೆ ಸುಮ್ಮನೆ ಕುಳಿತು ಬಿಟ್ಟಿದ್ದಾರೆ.

ಜಲಪಾತ ಏರಿ ಕುಳಿತಿರುವುದನ್ನುವಿಸ್ಡಂ ಭದ್ರತಾ ಪಡೆಯ ಮೇಲ್ವಿಚಾರಕ ಸಂತೋಷ್ ಗಮನಿಸಿ, ಮೇಲಾಧಿಕಾರಿ ನಿ. ಸರ್ಜಂಟ್ ನಿಸಾರ್ ಅವರಿಗೆ ಮಾಹಿತಿ ನೀಡಿದರು. 

ಮಧ್ಯಾಹ್ನ 2ರ ಹೊತ್ತಿಗೆ ಸಾಗರ ಡಿವೈಎಸ್‌ಪಿ ವಿನಾಯಕ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸ್‌, ವಿಪತ್ತು ಕಾರ್ಯನಿರ್ವಹಣಾ ಪಡೆ ಮತ್ತು ಅಗ್ನಿಶಾಮಕ ಪಡೆ ಸಿಬ್ಬಂದಿ ಚೇತನ್ ಕುಮಾರ್ ಅವರನ್ನು ದೂರದಿಂದಲೇ ಮಾತನಾಡಿಸಿ ಹಿಂದೆ ಬರುವಂತೆ ಮನವೊಲಿಸಿದರು. ಮದ್ಯಾಹ್ನ 3ರ ಹೊತ್ತಿಗೆ ಚೇತನ್ ಕುಮಾರ್ ಹಿಂದಿರುಗಿ ಬಂದರು.

ಕೊರೊನಾ ಸಂಕಷ್ಟದಿಂದ ಉದ್ಯೋಗ ಕಳೆದುಕೊಂಡು, ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಮುಂದಾಗಿರುವುದಾಗಿ ಚೇತನ್‌ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೋಗ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು, ಅಗ್ನಿಶಾಮಕ ದಳ, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು