ಸೋಮವಾರ, ಸೆಪ್ಟೆಂಬರ್ 27, 2021
21 °C

ಸ್ಮರಣೀಯವಾಗಲಿದೆ ಜೋಗ ಜಲಪಾತ ವೀಕ್ಷಣೆ: ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ಜೋಗ ಜಲಪಾತ ಪ್ರದೇಶದಲ್ಲಿ ₹ 180 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಂದಾಗಿ ಭವಿಷ್ಯದಲ್ಲಿ ನೋಡುಗರ ಪಾಲಿಗೆ ಜೋಗ ಜಲಪಾತ ವೀಕ್ಷಣೆ ಸ್ಮರಣೀಯವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವರ್ಚುಯಲ್ ಮೂಲಕ ಶನಿವಾರ ಚಾಲನೆ ನೀಡಿ, ತಾಲ್ಲೂಕಿನ ಇರುವಕ್ಕಿ ಗ್ರಾಮದಲ್ಲಿ ಸ್ಥಾಪನೆಗೊಂಡಿರುವ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜೋಗ ಜಲಪಾತವನ್ನು ಸರ್ವಋತು ಜಲಪಾತವನ್ನಾಗಿ ರೂಪಿಸುವ ದೃಷ್ಟಿಯಿಂದ ವರ್ಷದ ಎಲ್ಲಾ ತಿಂಗಳುಗಳಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಲಿಂಗನಮಕ್ಕಿ ಜಲಾಶಯದಿಂದ ಜೋಗ ಜಲಪಾತಕ್ಕೆ ನೀರು ಹರಿಸಲಾಗುವುದು ಎಂದರು.

787 ಎಕರೆ ವಿಸ್ತೀರ್ಣದಲ್ಲಿ ಆರಂಭಗೊಂಡಿರುವ ಇರುವಕ್ಕಿಯ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ರೈತರ ಬದುಕನ್ನು ಹಸನುಗೊಳಿಸುವ ವಿದ್ಯಾ ದೇಗುಲವಾಗಿ ರೂಪುಗೊಳ್ಳಲಿದೆ. ಈ ವಿವಿಗೆ ಕೆಳದಿಯ ಅರಸ ಶಿವಪ್ಪನಾಯಕ ಅವರ ಹೆಸರು ಇಡಲಾಗಿದೆ ಎಂದು ಘೋಷಿಸಿದರು.

ಸಂಸದ ಬಿ.ವೈ. ರಾಘವೇಂದ್ರ, ‘ಪ್ರತಿ ಶನಿವಾರ ಮತ್ತು ಭಾನುವಾರ ಜೋಗ ಜಲಪಾತಕ್ಕೆ ಲಿಂಗನಮಕ್ಕಿ ಜಲಾಶಯದಿಂದ ನೀರು ಹರಿಸುವುದರಿಂದ ವರ್ಷಕ್ಕೆ ₹ 5 ಕೋಟಿಯಷ್ಟು ವಿದ್ಯುತ್ ಉತ್ಪಾದನೆಯಲ್ಲಿ ನಷ್ಟವಾಗಬಹುದು. ಆದರೆ ಪ್ರವಾಸೋದ್ಯಮದ ಮೂಲಕ ಆಗುವ ಈ ಭಾಗದ ಬದಲಾವಣೆಯನ್ನು ಗಮನಿಸಿದರೆ ಈ ನಷ್ಟ ದೊಡ್ಡದೇನಲ್ಲ’ ಎಂದು ಪ್ರತಿಪಾದಿಸಿದರು.

ಶಾಸಕ ಎಂಎಸ್‌ಐಎಲ್ ಅಧ್ಯಕ್ಷ ಎಚ್. ಹಾಲಪ್ಪ ಹರತಾಳು, ‘₹ 77 ಕೋಟಿ ವೆಚ್ಚದಲ್ಲಿ ನಗರದ ತ್ಯಾಗರ್ತಿ ವೃತ್ತದಿಂದ ಎಲ್‌ಬಿ ಕಾಲೇಜಿನವರೆಗೆ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆ, ₹ 60 ಕೋಟಿ ವೆಚ್ಚದಲ್ಲಿ ಮಾರ್ಕೆಟ್ ರಸ್ತೆ ವಿಸ್ತರಣೆ, ₹ 1.5 ಕೋಟಿ ವೆಚ್ಚದಲ್ಲಿ ಸರ್ಕಾರಿ ನೌಕರರ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರ ಅನುದಾನ ಮಂಜೂರು ಮಾಡಿದೆ’ ಎಂದು ತಿಳಿಸಿದರು.

ಈವರೆಗೆ ಹೆಸರಿಗೆ ಮಾತ್ರ ಜೋಗ ಜಲಪಾತ ಜಗತ್‌ ಪ್ರಸಿದ್ಧ ಎನ್ನುವಂತಾಗಿತ್ತು. ಈಗ ರಾಜ್ಯ ಸರ್ಕಾರ ರೂಪಿಸುವ ಹೊಸ ಯೋಜನೆಗಳಿಂದ ನಿಜವಾದ ಅರ್ಥದಲ್ಲಿ ಜೋಗ ಜಲಪಾತ ಪ್ರಸಿದ್ಧವಾಗಲಿದೆ. ಪ್ರಸ್ತಾವಿತ ಯೋಜನೆಗಳಿಗೆ ಕೆಲವು ಪರಿಸರವಾದಿಗಳಿಂದ ಅಪಸ್ವರ ಬಂದಿದೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಿ ಪರಿಸರಕ್ಕೆ ಧಕ್ಕೆಯಾಗದಂತೆ ಕಾಮಗಾರಿ ನಡೆಸಲಾಗುವುದು ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ತುಕಾರಾಮ್, ಕಾರ್ಗಲ್-ಜೋಗ್ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಾಸಂತಿ ರಮೇಶ್, ಉಪಾಧ್ಯಕ್ಷ ಮಂಜುನಾಥ್, ಪ್ರಮುಖರಾದ ಟಿ.ಡಿ.ಮೇಘರಾಜ್, ಕೆ.ಆರ್.ಗಣೇಶ್ ಪ್ರಸಾದ್, ಎನ್.ಲಲಿತಮ್ಮ, ಚೇತನ್ ರಾಜ್ ಕಣ್ಣೂರು, ಜಿ.ಪರಮೇಶ್ವರಪ್ಪ, ಉಪವಿಭಾಗಾಧಿಕಾರಿ ಡಾ.ನಾಗರಾಜ್ ಎಲ್. ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು