ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ಹಯ್ಯ ಲಾಲ್ ಹತ್ಯೆ: ಕೊಲೆಗಾರರಿಗೆ ಗುಂಡಿಕ್ಕಲು ಕೆ. ಎಸ್. ಈಶ್ವರಪ್ಪ ಆಗ್ರಹ

ಕಾಂಗ್ರೆಸ್ ಓಲೈಕೆ ನೀತಿಯಿಂದ ಹಿಂದೂಗಳಿಗೆ ದುಸ್ಥಿತಿ: ಕೆ.ಎಸ್.ಈಶ್ವರಪ್ಪ ಆರೋಪ
Last Updated 29 ಜೂನ್ 2022, 13:40 IST
ಅಕ್ಷರ ಗಾತ್ರ

ಶಿವಮೊಗ್ಗ: ’ರಾಜಸ್ತಾನದಲ್ಲಿ ಟೈಲರ್ ಕನ್ಹಯ್ಯ ಲಾಲ್ ಅವರನ್ನು ತಾವೇ ಕೊಂದಿರುವುದಾಗಿ ಆ ಇಬ್ಬರು ಮುಸ್ಲಿಮರು ಹೇಳಿದ್ದಾರೆ. ಅವರು ಒಪ್ಪಿಕೊಂಡ ನಂತರವೂ ತನಿಖೆಯ ಅಗತ್ಯವೇನಿದೆ. ಕೂಡಲೇ ಅವರನ್ನು ಗುಂಡಿಟ್ಟು ಕೊಲ್ಲಬೇಕು ಇಲ್ಲವೇ ನೇಣಿಗೆ ಹಾಕಬೇಕು‘ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.

‘ಆರೋಪಿಗಳು ತಮ್ಮ ಕೃತ್ಯ ಬಹಿರಂಗವಾಗಿ ಒಪ್ಪಿಕೊಂಡ ನಂತರ ಅವರಿಗೆ ಉಗ್ರ ಶಿಕ್ಷೆ ವಿಧಿಸಲು ಅವಕಾಶವಾಗುವಂತೆ ಕಾನೂನಿಗೆ ತಿದ್ದುಪಡಿ ತನ್ನಿ. ಆ ನಿಟ್ಟಿನಲ್ಲಿ ತುರ್ತಾಗಿ ಸಂಸತ್ ಅಧಿವೇಶನ ಕರೆಯಿರಿ‘ ಎಂದು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿದರು.

ರಾಜಸ್ತಾನದಲ್ಲಿ ನಡೆದಿರುವ ಕೊಲೆಗಡುಕ ಕೃತ್ಯ ಹಿಂದೂ ಸಮಾಜಕ್ಕೆ ಹಾಕಿರುವ ಸವಾಲು. ಇದು ಹಿಂದೂಗಳಿಗೆ ಮಾಡಿರುವ ಅಪಮಾನ ಎಂದು ಹೇಳಿದ ಈಶ್ವರಪ್ಪ, ಅಯೋಧ್ಯೆಯ ರೀತಿ ಕಾಶಿ, ಮಥುರಾದಲ್ಲಿ ಮುಸ್ಲಿಮರ ವಶದಲ್ಲಿರುವ ಹಿಂದೂಗಳ ಶ್ರದ್ಧಾ ಕೇಂದ್ರಗಳನ್ನು ವಾಪಸ್ ಪಡೆಯಬೇಕು. ಕಾಶಿಯಲ್ಲಿ ಸಮೀಕ್ಷೆ ಕಾರ್ಯ ಕೈಗೊಂಡಿದ್ದು, ಅದು ಮುಗಿದ ನಂತರ ಅಲ್ಲಿನ ಶ್ರದ್ಧಾ ಕೇಂದ್ರಗಳು ಹಿಂದೂ ಸಮಾಜದ ಸುಪರ್ದಿಗೆ ಬರಲಿವೆ ಎಂದರು.

ಟೈಲರ್ ಕೊಲೆ ಮಾಡಿರುವ ಆರೋಪಿಗಳು ನಂತರ ದೇಶದ ಪ್ರಧಾನಿಗೂ ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಹಿಂದೂ ಸಮಾಜದ ತಾಳ್ಮೆ ಪರೀಕ್ಷಿಸುವುದು ಬೇಡ. ಸಮಾಜ ದಂಗೆ ಏಳುವ ಮುನ್ನ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿ. ಇಂತಹ ಭಯೋತ್ಪಾದನಾ ಕೃತ್ಯಗಳನ್ನು ಮಟ್ಟ ಹಾಕಲು ಸಂಘಟಿತ ಹೋರಾಟಕ್ಕೆ ವಿಶ್ವಸಂಸ್ಥೆಯಲ್ಲಿ ಈ ವಿಚಾರ ಪ್ರಸ್ತಾಪಿಸಲಿ ಎಂದರು.

ಕಾಂಗ್ರೆಸ್‌ನ ಮುಸ್ಲಿಮರ ಓಲೈಕೆ ನೀತಿಯಿಂದಾಗಿಯೇ ಹಿಂದೂ ಸಮಾಜಕ್ಕೆ ಈ ದುಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಈಶ್ವರಪ್ಪ, ‘ಕೊಲೆಗಡುಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸದೇ ಎಐಸಿಸಿ ನಾಯಕ ರಾಹುಲ್‌ಗಾಂಧಿ ಬರೀ ಶಾಂತಿ–ಸುವ್ಯವಸ್ಥೆ ಕಾಪಾಡುವಂತೆ ರಾಜಸ್ತಾನದ ಕಾಂಗ್ರೆಸ್ ಸರ್ಕಾರಕ್ಕೆ ಹೇಳಿದ್ದಾರೆ. ಇದು ನಾಚಿಕೆಗೇಡು. ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಈ ಕೃತ್ಯವನ್ನು ಕಠಿಣ ಶಬ್ಧಗಳಲ್ಲಿ ಖಂಡಿಸಿಲ್ಲ‘ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT