ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಾಪುರ ಗ್ರಾಮಕ್ಕಿಲ್ಲ ಮೂಲಸೌಕರ್ಯ

Last Updated 21 ಏಪ್ರಿಲ್ 2022, 5:06 IST
ಅಕ್ಷರ ಗಾತ್ರ

ಹೊಳೆಹೊನ್ನೂರು: ಭದ್ರಾವತಿ ತಾಲ್ಲೂಕಿನ ಚನ್ನಗಿರಿ ರಸ್ತೆಯಲ್ಲಿ ಕೊನೆಯ ಗ್ರಾಮವಾಗಿರುವ ಕಲ್ಲಾಪುರ ಗ್ರಾಮವು ಮೂಲಸೌಕರ್ಯದಿಂದ ವಂಚಿತವಾಗಿದೆ.

1200 ಜನಸಂಖ್ಯೆ ಹೊಂದಿರುವ ಈ ಗ್ರಾಮವು ಸಮೀಪದ 6 ಕಿ.ಮೀ. ದೂರದ ಅರಕೆರೆ ಗ್ರಾಮ ಪಂಚಾಯಿತಿಗೆ ಸೇರಿದೆ. ಆದರೆ ಅಭಿವೃದ್ಧಿ ಮರೀಚಿಕೆಯಾಗಿದೆ.

ರಸ್ತೆಗಳು, ‌ಚರಂಡಿ, ವಿದ್ಯುತ್, ಶಾಲೆ ದುರಸ್ತಿ, ಶೌಚಾಲಯ ಸೇರಿ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದು, ಗ್ರಾಮಾಡಳಿತವಾಗಲಿ, ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಈ ಬಗ್ಗೆ ಗಮನಹರಿಸಿಲ್ಲ ಎಂಬುದು ಗ್ರಾಮಸ್ಥರ ಆರೋಪ.

40 ಮನೆಗಳಿಗೆ ವಿದ್ಯುತ್ ಸಮಸ್ಯೆ:

300 ಮನೆಗಳಿವೆ . 40 ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ನಿತ್ಯ ರಾತ್ರಿ ಸೀಮೆಎಣ್ಣೆ ದೀಪದ ಬೆಳಕಿನಲ್ಲೇ ಕಾಲಕಳೆಯಬೇಕು.

ರಸ್ತೆ ಸಂಪರ್ಕವಿಲ್ಲದೇ ಎಲ್ಲೆಂದರಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮಾಡಳಿತ ಇದರ ಬಗ್ಗೆ ಚಕಾರವೆತ್ತದೆ ತಮಗೂ ಅದಕ್ಕೂ ಸಂಬಂಧವಿಲ್ಲವಂತೆ ವರ್ತಿಸುತ್ತಿದೆ. ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.

ಈ ಗ್ರಾಮದಲ್ಲಿ ಒಂದೇಒಂದೂ ಚರಂಡಿ ನಿರ್ಮಾಣವಾಗಿಲ್ಲ. ಹಲವಾರು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.ಕೇಂದ್ರ ಸರ್ಕಾರ ನರೇಗಾ ಯೋಜನೆಯಡಿ ಸಾವಿರಾರು ಕೋಟಿ ಖರ್ಚು ಮಾಡುತ್ತಿದ್ದರೂ ಚರಂಡಿ ನಿರ್ಮಾಣಕ್ಕೆ ಮುಂದಾಗದೇ ಇರುವುದು ಆಶ್ಚರ್ಯ ಎಂಬುದು ಗ್ರಾಮಸ್ಥರ ದೂರು.

ಈ ಗ್ರಾಮ ಗುಡ್ಡದ ಮೇಲಿದ್ದು, ಚರಂಡಿ ಇಲ್ಲದ ಪರಿಣಾಮ ಮನೆಗಳಿಗೆ ನೀರು ನುಗ್ಗುತ್ತಿದೆ. ಡಕ್ ಮೋರಿ ನಿರ್ಮಾಣ ಅವಶ್ಯಕತೆ ಇದ್ದು, ಇದಕ್ಕೊಂದು ಶಾಶ್ವತ ಯೋಜನೆಯೊಂದನ್ನು ಜಿಲ್ಲಾಡಳಿತ ರೂಪಿಸಬೇಕು ಎಂದು ಒತ್ತಾಯಿಸುತ್ತಾರೆ ಸರೋಜಮ್ಮ.

ಬಯಲು ಮುಕ್ತ ಶೌಚ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಕೋಟಿ ಕೋಟಿ ಅನುದಾನ ನೀಡಿದರೂ ಈ ಗ್ರಾಮದಲ್ಲಿ ಸುಮಾರು 48 ಮನೆಗಳಿಗೆ ಇನ್ನೂ ಶೌಚಾಲಯಗಳು ನಿರ್ಮಾಣವಾಗದೇ ಇರುವುದು ವಿಪರ್ಯಾಸ. ಶೌಚಾಲಯ ಇಲ್ಲದವರು ಪ್ರತಿನಿತ್ಯ ಜನಪ್ರತಿನಿಧಿಗಳ ಮನೆಗೆ ಬಂದು ತಮ್ಮ ಅಳಲು ತೋಡಿಕೊಂಡರೂ ಯಾವುದೇ ಪ್ರಯೋಜವಾಗಿಲ್ಲ. ಅಲ್ಲದೇ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಹಲವಾರು ಬಾರಿ ಚರ್ಚೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಯಾವುದೋ ಒಂದು ಕುಂಟು ನೆಪ ಹೇಳಿ ಕಳುಹಿಸುತ್ತಾರೆ ಎಂದು ದೂರುತ್ತಾರೆ ಅವರು.

ಸರ್ಕಾರಿ ಆಸ್ಪತ್ರೆ ಬಲು ದೂರ:

ಕಲ್ಲಾಪುರ ಗ್ರಾಮಕ್ಕೆ ಸರ್ಕಾರಿ ಆಸ್ಪತ್ರೆಯ ಸೌಲಭ್ಯ ಇಲ್ಲ. 8 ಕಿ.ಮೀ. ದೂರದ ಅರಬಿಳಚಿ ಗ್ರಾಮದ ಆಸ್ಪತ್ರೆಗೇ ಬರಬೇಕು. ರಾತ್ರಿ ಪಾಳೆಯದಲ್ಲಿ ವೈದ್ಯರು ಇಲ್ಲದ ಪರಿಣಾಮ ರಾತ್ರಿ ವೇಳೆಯಲ್ಲಿ ಚಿಕಿತ್ಸೆಗೆ ಭದ್ರಾವತಿ ಅಥವಾ ಚನ್ನಗಿರಿಗೆ ಸುಮಾರು 20 ಕಿ.ಮೀ. ಕ್ರಮಿಸಬೇಕಾದ ಸ್ಥಿತಿ ಇಲ್ಲಿನ ಜನರದ್ದು. ಗರ್ಭಿಣಿಯರ ಸ್ಥಿತಿ ಹೇಳತೀರದು. ವೈದ್ಯರು ಸೂಚಿಸಿದ ದಿನಾಂಕಕ್ಕಿಂತ ಮುಂಚಿತವಾಗಿಯೇ ಅಸ್ಪತ್ರೆಗಳಲ್ಲಿ ದಾಖಲಾಗುವ ಪರಿಸ್ಥಿತಿ ಇದೆ.

‘ದಾವಣಗೆರೆ ಜಿಲ್ಲೆಗೆ ಸೇರಿಸಿ’:

ಈ ಗ್ರಾಮವು ಭದ್ರಾವತಿ ತಾಲ್ಲೂಕಿನ ಕೊನೆಯ ಗ್ರಾಮವಾಗಿರುವುದರಿಂದ ಅಭಿವೃದ್ದಿಯೂ ಮರೀಚಿಕೆಯಾಗಿದೆ. ಹೆಚ್ಚಿನ ಅನುದಾನ ನೀಡುವಲ್ಲಿ ಚನ್ನಗಿರಿ ತಾಲ್ಲೂಕು ಆಡಳಿತ ಹಾಗೂ ಗ್ರಾಮಾಡಳಿತ ಹೆಚ್ಚಿನ ಸಹಕಾರಿಯಾಗಿದೆ. ಗ್ರಾಮವನ್ನು ದಾವಣಗೆರೆ ಜಿಲ್ಲೆಗೆ ಸೇರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ

ಆಶಾ ಕಾರ್ಯಕರ್ತೆಯರಿಲ್ಲ:

ಎಲ್ಲಾ ಗ್ರಾಮಗಳಿಗೆ ಸರ್ಕಾರ ಕಳೆದ ಕೆಲವು ವರ್ಷಗಳಿಂದ ಆಶಾ ಕಾರ್ಯಕರ್ತರನ್ನು ನಿಯೋಜಿಸಿದೆ. ಆದರೆ ಈ ಗ್ರಾಮಕ್ಕೆ ಇದುವರೆಗೂ ಆಶಾ ಕಾರ್ಯಕರ್ತರನ್ನು ನಿಯೋಜನೆ ಮಾಡಿಲ್ಲ. ಸರ್ಕಾರದ ಸೌಲಭ್ಯಗಳ ಮಾಹಿತಿ ಗ್ರಾಮಸ್ಥರಿಗೆ ಸಿಗುವುದೇ ಇಲ್ಲ.

ಅರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಯಾವುದೇ ಕೆಲಸ ನಿರ್ವಹಿಸುತ್ತಿಲ್ಲ. ಚರಂಡಿ, ರಸ್ತೆ, ವಿದ್ಯುತ್ ಸೇರಿ ಹಲವಾರು ಕಾಮಗಾರಿಗಳಿದ್ದರೂ ಯಾವುದೇ ಕಾರ್ಯ ಆಗದೆ ಅಲೆದಾಡಿಸುತ್ತಿದ್ದಾರೆ.
–ಶ್ರೀನಿವಾಸ್, ಗ್ರಾಮಸ್ಥ ಕಲ್ಲಾಪುರ

43 ವರ್ಷಗಳಿಂದ ಇಲ್ಲಿ ವಾಸವಾಗಿದ್ದೇನೆ. ಈ ಹಿಂದೆ ಗ್ರಾಮದ ಸ್ಥಿತಿ ಹೇಗಿತ್ತೂ, ಈಗಲೂ ಹಾಗೆಯೇ ಇದೆ. ಕಲ್ಲಾಪುರ ಗ್ರಾಮಕ್ಕೆ ಯಾವುದೇ ಅನುದಾನ ನೀಡದೇ ಗ್ರಾಮ ಪಂಚಾಯಿತಿ ತಾರತಮ್ಯ ಮಾಡುರುತ್ತಿದೆ.
–ರಂಗಪ್ಪ, ಮಾಜಿ ಸದಸ್ಯ, ಕಲ್ಲಾಪುರ ಗ್ರಾ.ಪಂ.

ಮಳೆ ಬಂದರೆ ಚರಂಡಿ ವ್ಯವಸ್ಥೆ ಇಲ್ಲದೇ ಮನೆಯೂಳಗೆ ನೀರು ನುಗ್ಗುತ್ತಿದೆ. ತಾಲ್ಲೂಕು ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ.
–ರೋಜಾ, ಗ್ರಾಮಸ್ಥೆ. ಕಲ್ಲಾಪುರ

ಶಾಲೆಯಲ್ಲಿ ಬೆಂಜ್ ವ್ಯವಸ್ಥೆಯಿಲ್ಲ. ಶಾಲೆಯ ನಿರ್ಮಾಣ ಮಾಡಿ ಬಹಳ ವರ್ಷಗಳೇ ಕಳೆದಿದೆ. ನಮ್ಮ ಶಾಲೆಯನ್ನು ಹೈಟೆಕ್ ಮಾಡಬೇಕು.
–ಶಶಿಕುಮಾರ್, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT