ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ವೇದಿಕೆ ಎದುರು ಮಹಿಳೆಯರ ಮೇಲುಗೈ

ಗ್ಯಾರಂಟಿ ಯೋಜನೆಯ ಜಿಲ್ಲಾ ಮಟ್ಟದ ಸಮಾವೇಶ
Published 24 ಫೆಬ್ರುವರಿ 2024, 13:08 IST
Last Updated 24 ಫೆಬ್ರುವರಿ 2024, 13:08 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಸರ್ಕಾರದ ಐದು ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಜಿಲ್ಲಾಮಟ್ಟದ ಸಮಾವೇಶಕ್ಕೆ ಇಲ್ಲಿನ ಅಲ್ಲಮಪ್ರಭು ಉದ್ಯಾನ (ಫ್ರೀಡಂ ಪಾರ್ಕ್) ಶನಿವಾರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ನಿರ್ಮಿತಿ ಕೇಂದ್ರ ಸಹಯೋಗದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ 50,000  ಆಸನಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಫಲಾನುಭವಿಗಳು ಪಾಲ್ಗೊಂಡಿದ್ದರು.

ಗ್ರಾಮಾಂತರ ಭಾಗದಿಂದ ಫಲಾನುಭವಿಗಳನ್ನು ಕರೆತರಲು 500ಕ್ಕೂ ಹೆಚ್ಚು ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಮಾವೇಶಕ್ಕೆ 10,000-15,000 ಮಹಿಳಾ ಫಲಾನುಭವಿಗಳು ಭಾಗವಹಿಸಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, 30,000ಕ್ಕೂ ಹೆಚ್ಚು ಸಂಖ್ಯೆಯ ಮಹಿಳಾ ಫಲಾನುಭವಿಗಳು ಸಮಾವೇಶದ ವೇದಿಕೆ ಹಂಚಿಕೊಂಡರು.

ಫ್ರೀಡಂ ಪಾರ್ಕ್ ಆವರಣದಲ್ಲಿ 50ಕ್ಕೂ ಹೆಚ್ಚು ಉಪಾಹಾರದ ಕೌಂಟರ್ ತೆರೆಯಲಾಗಿತ್ತು. ಆವರಣದ ವಿವಿಧ ಸ್ಥಳಗಳಲ್ಲಿ, ಜನರ ದಾಹ ನೀಗಿಸಲು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 11.30ಕ್ಕೆ ಆರಂಭವಾದ ಕಾರ್ಯಕ್ರಮಕ್ಕೆ ಜನರು 10ಗಂಟೆಯೊಳಗೆ ಬಂದು ಸೇರಿದ್ದರು. ಹೀಗಾಗಿ ಮಧ್ಯಾಹ್ನ 1 ಗಂಟೆ ಆಗುವ ಮುನ್ನವೇ ಉಪಾಹಾರದ ಕೌಂಟರ್‌ಗಳತ್ತ ಜನರು ಮುಗಿಬಿದ್ದರು. ಗ್ಯಾರೆಂಟಿ ಯೋಜನೆ ಫಲಾನುಭವಿಗಳ ಸಮಸ್ಯೆ ಪರಿಹರಿಸಲು ಹಾಗೂ ದಾಖಲೆ ತಿದ್ದುಪಡಿಗೆ ಸ್ಥಳದಲ್ಲಿ 10 ಕೌಂಟರ್‌ಗಳನ್ನು ತರೆಯಲಾಗಿತ್ತು.

ಸಂಚಾರ ದಟ್ಟಣೆ ಹಾಗೂ ವ್ಯವಸ್ಥೆ ನಿರ್ವಹಣೆಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಜಿಲ್ಲೆಗೆ ನೂತನ 10 ಬಸ್: ಪ್ರಯಾಣಿಕರ ಸುಗಮ ಸಂಚಾರಕ್ಕೆ ಕೆಎಸ್‌ಆರ್‌ಟಿಸಿ ನೂತನ ಮಾದರಿಯ ಕೆಂಪು ಬಸ್‌ಗಳನ್ನು ಪರಿಚಯಿಸಿದ್ದು, ಜಿಲ್ಲಾ ವಿಭಾಗಕ್ಕೆ 10 ಬಸ್‌ಗಳು ಸೇರ್ಪಡೆಗೊಂಡಿವೆ.

ಶಿವಮೊಗ್ಗದಿಂದ ಚಿತ್ರದುರ್ಗ, ಬೆಂಗಳೂರು, ಸಾಗರ, ಸೊರಬಕ್ಕೆ ನೂತನ ಬಸ್‌ಗಳು ಸಂಚರಿಸಲಿವೆ. ಜಿಲ್ಲಾ ಕೇಂದ್ರ ವಿಭಾಗಕ್ಕೆ 6 ಬಸ್, ಸಾಗರಕ್ಕೆ 2, ಶಿಕಾರಿಪುರ ವಿಭಾಗದಲ್ಲಿ 2 ಬಸ್ ಸೇವೆ ಒದಗಿಸಲಿವೆ ಎಂದು ಅಧಿಕಾರಿಗಳು ತಿಳಿಸಿದರು.

ಜಿಲ್ಲಾ ಕೇಂದ್ರಗಳ ಮಧ್ಯೆ ಸಂಚರಿಸುವ ಬಸ್‌ಗಳ ಸ್ವರೂಪವನ್ನು ಬದಲಾಯಿಸಲಾಗಿದೆ. ಹಲವು ವಿಶೇಷತೆಗಳಿವೆ. ಹಳೆಯ ಕೆಂಪು ಬಸ್‌ಗಳು 3.2 ಮೀಟರ್‌ ಎತ್ತರ ಇದ್ದರೆ, ನೂತನ ಮಾದರಿಯ ಬಸ್‌ಗಳು 3.4 ಮೀಟರ್‌ ಎತ್ತರ, ಬಕೆಟ್‌ ವಿನ್ಯಾಸದ 52 ಆಸನಗಳನ್ನು ಒಳಗೊಂಡಿವೆ. ಹಿಂದಿನ ಹಾಗೂ ಮುಂದಿನ ಗಾಜುಗಳು ವಿಶಾಲವಾಗಿದ್ದು, ಪ್ರಯಾಣಿಕರು ಬಳಸುವ ಕಿಟಕಿಯ ಗಾತ್ರವನ್ನೂ ಹೆಚ್ಚಿಸಲಾಗಿದೆ. ಎಲ್‌ಇಡಿ ದೀಪ, ಸೆನ್ಸರ್‌ ಅಳವಡಿಸಿದ ಬಾಗಿಲುಗಳು, ವಿಶಾಲ ಲಗೇಜ್‌ ಕ್ಯಾರಿಯರ್‌ ಅಳವಡಿಸಲಾಗಿದೆ. 

ಶಿವಮೊಗ್ಗದ ಫ್ರೀಡಂ ಪಾರ್ಕ್ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಿದ್ದ ಮಹಿಳಾ ಫಲಾನುಭವಿಗಳು
ಶಿವಮೊಗ್ಗದ ಫ್ರೀಡಂ ಪಾರ್ಕ್ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಿದ್ದ ಮಹಿಳಾ ಫಲಾನುಭವಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT