ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಗಲ್-ಜೋಗ: ಮತ್ತೊಮ್ಮೆ ರಾಜಕೀಯ ಪ್ರಾಬಲ್ಯ ಮೆರೆದ ಬಿಜೆಪಿ

Last Updated 15 ನವೆಂಬರ್ 2019, 6:30 IST
ಅಕ್ಷರ ಗಾತ್ರ

ಸಾಗರ (ಶಿವಮೊಗ್ಗ ಜಿಲ್ಲೆ): ತಾಲ್ಲೂಕಿನ ಕಾರ್ಗಲ್-ಜೋಗಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 11 ಸ್ಥಾನಗಳ ಪೈಕಿ 9 ಸ್ಥಾನಗಳನ್ನು ಗೆಲ್ಲುವ ಮೂಲಕ ತಾಲ್ಲೂಕಿನಲ್ಲಿ ಬಿಜೆಪಿ ತನ್ನ ರಾಜಕೀಯ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಹಾಗೆ ನೋಡಿದರೆ ಈ ಹಿಂದಿನ ವರ್ಷಗಳಲ್ಲಿ ಕಾರ್ಗಲ್ –ಜೋಗ ಭಾಗದಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ಬೆಂಬಲ ವ್ಯಕ್ತವಾಗಿರಲಿಲ್ಲ. ಪ್ರತಿಬಾರಿ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಾಗ ಈ ಭಾಗದಲ್ಲಿ ಕಾಂಗ್ರೆಸ್ ಗೆ ಮುನ್ನಡೆ ದೊರಕುತ್ತಿತ್ತು. ಹೀಗಾಗಿ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಮುನ್ನಡೆ ಕಾಯ್ದುಕೊಳ್ಳಬಹುದು ಎಂಬ ಕಾಂಗ್ರೆಸ್ ನ ನಿರೀಕ್ಷೆ ತಲೆಕೆಳಗಾಗಿದೆ.

ಈ ಮೊದಲು ಅಧಿಸೂಚಿತ ಪ್ರದೇಶವಾಗಿದ್ದ ಕಾರ್ಗಲ್ –ಜೋಗ್ ಪಟ್ಟಣ ಪಂಚಾಯಿತಿಯಾಗಿ 2003-04ನೇ ಸಾಲಿನಲ್ಲಿ ಪರಿವರ್ತನೆಗೊಂಡಿತ್ತು. 2004ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಜೆಡಿಎಸ್ ಬಹುಮತದೊಂದಿಗೆ ಅಧಿಕಾರ ಹಿಡಿದಿತ್ತು. 2009 ಹಾಗೂ 2014ರಲ್ಲಿ ಪಕ್ಷೇತರರ ನೆರವಿನಿಂದ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಬಿಜೆಪಿ ಇದೇ ಮೊದಲ ಬಾರಿಗೆ ಅಧಿಕಾರದ ಗದ್ದುಗೆಗೆ ಏರಿದೆ.

ಸಂಘಟನಾತ್ಮಕವಾಗಿ ಬಿಜೆಪಿ ತಾಲ್ಲೂಕಿನಲ್ಲಿ ಬಲಗೊಂಡಿರುವುದು ಈ ಫಲಿತಾಂಶ ಸ್ಪಷ್ಟಗೊಳಿಸಿದೆ. ಸಾಗರದ ನಗರಸಭೆ ಚುನಾವಣೆಯ ಸೋಲಿನಿಂದ ಪಾಠ ಕಲಿಯಬೇಕಿದ್ದ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಒತ್ತು ಕೊಡದೆ ಇರುವುದು ಅದರ ಹಿನ್ನಡೆಗೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.

ಇಲ್ಲಿನ ಚುನಾವಣೆ ಸಂದರ್ಭದಲ್ಲಿ ಶಾಸಕ ಎಚ್.ಹಾಲಪ್ಪ ಹರತಾಳು ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಅನೇಕ ದಿನಗಳಿಂದ ಕಾರ್ಗಲ್-ಜೋಗ್ ಭಾಗದಲ್ಲೆ ಬೀಡು ಬಿಟ್ಟಿದ್ದರು. ಒಮ್ಮೆ ಸಂಸದ ಬಿ.ವೈ.ರಾಘವೇಂದ್ರ ಕೂಡ ಪ್ರಚಾರಕ್ಕೆ ಬಂದಿದ್ದರು.

ಸಾಗರ ನಗರಸಭೆ ಬಿಜೆಪಿಯ ಸದಸ್ಯರುಗಳಿಗೆ ಇಲ್ಲಿನ ಪ್ರತಿಯೊಂದು ವಾರ್ಡ್ ಗಳ ಜವಾಬ್ಧಾರಿಯನ್ನು ವಹಿಸಲಾಗಿತ್ತು. ಪ್ರತಿವಾರ್ಡ್‌ಗಳ ಸ್ಥಿತಿಗತಿಗಳನ್ನು ಅವಲೋಕಿಸಿ ವರದಿ ನೀಡಲು ಹಲವರು ಶ್ರಮಿಸಿದ್ದರು.

ಇತ್ತ ಕಾಂಗ್ರೆಸ್ ನ ಪರವಾಗಿ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಅವರು ಒಂದೆರಡು ಸಭೆ ಮಾಡಿದ್ದನ್ನು ಬಿಟ್ಟರೆ ಅವರ ವಯಸ್ಸಿನ ಕಾರಣಕ್ಕೆ ಹೆಚ್ಚು ಓಡಾಡಲು ಸಾಧ್ಯವಾಗಿಲ್ಲ. ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಒಮ್ಮೆಯೂ ಇಲ್ಲಿಗೆ ಭೇಟಿ ನೀಡದೆ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಪಕ್ಷದೊಳಗಿನ ಗುಂಪುಗಾರಿಕೆ, ಆಂತರಿಕ ಕಲಹ, ಒಬ್ಬರ ಕಾಲನ್ನು ಮತ್ತೊಬ್ಬರನ್ನು ಎಳೆಯುವುದು, ಸಂಘಟನೆಗೆ ನೀಡಬೇಕಾದ ಒತ್ತು ನೀಡದೆ ಇರುವುದು ಹೀಗೆ ಹತ್ತು ಹಲವು ಕಾರಣಗಳು ಕಾಂಗ್ರೆಸ್ ನ್ನು ಸೋಲಿನ ಪ್ರಪಾತಕ್ಕೆ ತಳ್ಳಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಪಟ್ಟಣ ಪಂಚಾಯಿತಿ ಅಸ್ತಿತ್ವಕ್ಕೆ ಬಂದ ಮೊದಲ ಅವಧಿಯಲ್ಲಿ ಅಧಿಕಾರಕ್ಕೆ ಏರಿದ ಜೆಡಿಎಸ್ ಈ ಬಾರಿ ನಾಲ್ಕು ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಇಳಿಸಿದ್ದರೂ ಒಂದೂ ಸ್ಥಾನವನ್ನು ಗೆಲ್ಲಲು ಸಾಧ್ಯವಾಗದ ಸ್ಥಿತಿಗೆ ತಲುಪಿದೆ.

ಜೋಗ-ಕಾರ್ಗಲ್ ನಿವಾಸಿಗಳ ಮನೆಗಳಿಗೆ ಹಕ್ಕುಪತ್ರ ವಿತರಣೆ, ಸಮರ್ಪಕ ಕುಡಿಯುವ ನೀರಿನ ಪೂರೈಕೆ, ಮರಳು ಸಾಗಾಣಿಕೆ, ಹೋಂ ಸ್ಟೇಗಳ ಸಮಸ್ಯೆ ನಿವಾರಣೆ, ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ಅನೇಕ ಕೆಲಸಗಳು ಆಗುತ್ತದೆ ಎಂಬ ನಿರೀಕ್ಷೆಯನ್ನು ನಿಜ ಮಾಡುವ ಜವಾಬ್ಧಾರಿ ನೂತನವಾಗಿ ಆಯ್ಕೆಯಾಗಿರುವ ಸದಸ್ಯರ ಮೇಲೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT