ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ನಾಯಕರ ತಪ್ಪು ನಿರ್ಧಾರಕ್ಕೆ ಉತ್ತರ ಕೊಡುವ ಚುನಾವಣೆ: ರಘುಪತಿ ಭಟ್

Published 29 ಮೇ 2024, 14:38 IST
Last Updated 29 ಮೇ 2024, 14:38 IST
ಅಕ್ಷರ ಗಾತ್ರ

ಶಿಕಾರಿಪುರ: ‘ವಿಧಾನ ಪರಿಷತ್ ಚುನಾವಣೆ ಜಾತಿ ರಾಜಕಾರಣ ಹಾಗೂ ಬಿಜೆಪಿ ನಾಯಕರ ತಪ್ಪು ನಿರ್ಧಾರಗಳಿಗೆ ಉತ್ತರ ಕೊಡುವ ಚುನಾವಣೆಯಾಗಿದೆ’ ಎಂದು ನೈರುತ್ಯ ಪದವೀಧರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ರಘುಪತಿ ಭಟ್ ಅಭಿಪ್ರಾಯಪಟ್ಟರು.

ಪಟ್ಟಣ ಸಮೀಪದ ಆದಿಶಕ್ತಿ ದೇವಿ ಸಮುದಾಯ ಭವನದಲ್ಲಿ ಬುಧವಾರ ನಡೆದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ನಾನು ಮೂರು ಬಾರಿ ಉಡುಪಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ನಾನು ಜಾತಿ ರಾಜಕಾರಣ ಮಾಡದೇ ಹಿಂದೂತ್ವದ ಧ್ವನಿಯಾಗಿ ಹಾಗೂ ಬಿಜೆಪಿ ಪಕ್ಷ ನಿಷ್ಠನಾಗಿ ಕೆಲಸ ಮಾಡಿದ್ದೇನೆ. ಆದರೆ ಜಾತಿ ರಾಜಕಾರಣದಿಂದ ನನಗೆ ಟಿಕೆಟ್ ತಪ್ಪಿದೆ. ಸ್ವತಂತ್ರ ಅಭ್ಯರ್ಥಿಯಾಗಿ ಯಾರನ್ನೂ ಸೋಲಿಸಲು ನಾನು ಬಂದಿಲ್ಲ, ಗೆಲ್ಲಲು ಬಂದಿದ್ದೇನೆ. ನಮ್ಮ ನಾಯಕರಾದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ಚರಪ್ಪ ನೇತೃತ್ವದಲ್ಲಿ ರಾಷ್ಟ್ರ ಭಕ್ತರ ಬಳಗ ಮಲೆನಾಡಿನಲ್ಲಿ ನನ್ನ ಬೆಂಬಲಕ್ಕೆ ನಿಂತಿದ್ದು ಸಂತಸ ತಂದಿದೆ. ಗೆಲುವು ಸಾಧಿಸಿ ಮಲೆನಾಡಿನ ಜನರ ಸಮಸ್ಯೆ ಬಗೆಹರಿಸಲು ಕೆಲಸ ಮಾಡುತ್ತೇನೆ. ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಿ’ ಎಂದು ಮನವಿ ಮಾಡಿದರು.

‘ರಘುಪತಿ ಭಟ್ ಒಬ್ಬ ವ್ಯಕ್ತಿ ಅಲ್ಲ, ಹಿಂದೂಗಳ ಶಕ್ತಿಯಾಗಿದ್ದು, ನಾವೆಲ್ಲರೂ ಸೇರಿ ಅವರನ್ನು ಗೆಲ್ಲಿಸಬೇಕು. ಬಿ.ಎಸ್‌.ಯಡಿಯೂರಪ್ಪ ಹಾಗೂ ಅವರ ಮಕ್ಕಳು ಗೆದ್ದು ಅಧಿಕಾರ ಅನುಭವಿಸಿದರೂ ತಾಲ್ಲೂಕಿನ ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆ ಬಗೆಹರಿಸಿಲ್ಲ. ನಾನು ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಇದ್ದು, ಜನರ ಸಮಸ್ಯೆ ಬಗೆಹರಿಸಲು ಮುಂದಾಗುತ್ತೇನೆ’ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಭರವಸೆ ನೀಡಿದರು.

ಪ್ರಧಾನಿ ನರೇಂದ್ರಮೋದಿ ಅವರು ಕಾಂಗ್ರೆಸ್‌ನ ಇಂದಿರಾಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಕುಟುಂಬ ರಾಜಕಾರಣದ ವಿರುದ್ಧ ಮಾತನಾಡುತ್ತಾರೆ. ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಿಲ್ಲ. ರಾಜ್ಯದಲ್ಲಿ ಅಪ್ಪ ಮಕ್ಕಳ ರಾಜ್ಯಭಾರ ಆಗಿದೆ. ಬಿಜೆಪಿ ಹಿಂದುತ್ವ ಪ್ರತಿಪಾದಕರಾದ ತಂದೆ ಈಶ್ವರಪ್ಪ ಹಾಗೂ ರಘುಪತಿ ಭಟ್ ಮಾಡಿದ ತಪ್ಪೇನು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ. ಕಾಂತೇಶ್ ಪ್ರಶ್ನಿಸಿದರು.

ರಾಷ್ಟ್ರ ಭಕ್ತ ಬಳಗದ ಮುಖಂಡರಾದ ಈಸೂರು ಸಂತೋಷ್, ಗಂಗ್ಯಾನಾಯ್ಕ, ಬಿ.ಯಲ್ಲಪ್ಪ ಗೊದ್ದನಕೊಪ್ಪ, ಕುಮಾರನಾಯ್ಕ, ಹುಚ್ರಾಯಪ್ಪ, ಶಿವರಾಜ್, ಚೌಡಪ್ಪ, ಮಂಜ್ಯಾನಾಯ್ಕ, ಕೊಟ್ಟ ಹಾಲೇಶ್, ಗೊಗ್ಗ ಅನಿಲ್ ಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT