ಶುಕ್ರವಾರ, ಡಿಸೆಂಬರ್ 3, 2021
20 °C

ಸುಳ್ಳಿನ ಭ್ರಮಾಲೋಕ ಸೃಷ್ಟಿಸಿದ ಬಿಜೆಪಿ: ಸಿದ್ದರಾಮಯ್ಯ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನವಟ್ಟಿ: ‘ನಿತ್ಯ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ನರೇಂದ್ರ ಮೋದಿ ಸರ್ಕಾರ ತೆರಿಗೆ ಕಡಿಮೆ ಮಾಡುತ್ತಿಲ್ಲ. ತೆರಿಗೆಯ ಹಣದಲ್ಲಿ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲಾಗುತ್ತದೆ. ಹೀಗಿದ್ದೂ ಕಾಂಗ್ರೆಸ್ ಮಾಡಿರುವ ಸಾಲ ತೀರಿಸುತ್ತಿದ್ದೇವೆ ಎಂದು ಬಿಜೆಪಿ ನಾಯಕರು ಸುಳ್ಳಿನ ಭ್ರಮಾಲೋಕವನ್ನೇ ಸೃಷ್ಟಿಸಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಆನವಟ್ಟಿ ಸಮೀಪದ ಕುಬಟೂರು ಗ್ರಾಮದ ಬಂಗಾರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಹಾನಗಲ್ ಮತ್ತು ಸಿಂದಗಿ  ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಇಲ್ಲಿ ಜೆಡಿಎಸ್ ಪ್ರತಿಸ್ಪರ್ಧಿಯಲ್ಲ. ಬಿಜೆಪಿಗೆ ಅನುಕೂಲ ಮಾಡಿಕೊಳ್ಳಲು ಜೆಡಿಎಸ್‌ನಿಂದ ಮುಸ್ಲಿಂ ಅಭ್ಯರ್ಥಿ ಹಾಕಿದ್ದಾರೆ. ಆದರೆ, ಮತದಾರ ಕಾಂಗ್ರೆಸ್‌ನ ಕಡೆ ಒಲವು ತೋರುತ್ತಿರುವುದರಿಂದ ಅಂತಿಮವಾಗಿ ಗೆಲುವು ನಮ್ಮದೇ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿಂದುಳಿದವರು, ಅಲ್ಪಸಂಖ್ಯಾತರು, ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಕಾಂಗ್ರೆಸ್‌ನಿಂದ ನ್ಯಾಯ ಸಿಕ್ಕಿದೆ. ಸಂವಿಧಾನಕ್ಕೆ ಗೌರವ ನೀಡುವ ಪಕ್ಷ ಕಾಂಗ್ರೆಸ್. ಬಿಜೆಪಿ ಸಂವಿಧಾನಕ್ಕೆ ಮನ್ನಣೆ ನೀಡದ ‌ಕೋಮವಾದಿ ಪಕ್ಷ ಎಂದು ಕುಟುಕಿದರು.

ಮೋದಿಯ ಅಚ್ಚೇದಿನ್ ಎಲ್ಲಿದೆ?: 7 ವರ್ಷಗಳಲ್ಲಿ ಬೆಲೆ ಹಾಗೂ ತೆರಿಗೆಯಲ್ಲಿ ಭಾರಿ ವ್ಯತ್ಯಾಸವಾಗಿದೆ. 2014ರಲ್ಲಿ ಪೆಟ್ರೋಲ್ ₹ 69, ಡೀಸೆಲ್ ₹ 47 ಇತ್ತು. ಈಗ ಕ್ರಮವಾಗಿ ₹ 112, ₹ 100 ಆಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್ ತೈಲದ ಬೆಲೆ 2014ರಲ್ಲಿ ₹ 120 ಇತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ₹ 46ರಿಂದ ₹ 80ರವರೆಗೆ ವ್ಯತ್ಯಾಸವಾಗಿದೆ. 7 ವರ್ಷಗಳಲ್ಲಿ ₹ 23 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಲಾಗಿದೆ. ವಾಜಪೇಯಿ ಸರ್ಕಾರ ಇದ್ದಾಗಲೂ ಬಾಂಡ್‌ಗಳ ಮೂಲಕ ಸಾಲ ಪಡೆಯಲಾಗಿತ್ತು. ಆದರೂ ಜನರಿಗೆ ಸುಳ್ಳು ಹೇಳಿ ಬಿಜೆಪಿ ಬೆಲೆ ಏರಿಕೆಯ ಸಮರ್ಥನೆ ಮಾಡುತ್ತಿದೆ. ಬೆಲೆ ಏರಿಕೆಯಿಂದ ಮತದಾರರು ಕಾಂಗ್ರೆಸ್‌ ಅನ್ನು ಬೆಂಬಲಿಸಲಿದ್ದಾ‌ರೆ ಎಂದರು.

ಮಧು ಬಂಗಾರಪ್ಪ ಭವಿಷ್ಯದ ನಾಯಕ: ‘ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಸೇರ್ಪಡೆಯಾಗಿರುವುದು ರೈಟ್ ಪರ್ಸನ್ ರೈಟ್ ಪಾರ್ಟಿಗೆ ಸೇರಿದಂತಾಗಿದೆ. ಪಕ್ಷಕ್ಕೆ  ಪ್ರಾಮಾಣಿಕವಾಗಿ ದುಡಿದರೆ ಕಾಂಗ್ರೆಸ್‌ಗೆ ಬಂದ ಎಲ್ಲಾ ನಾಯಕರಿಗೂ ಸ್ಥಾನಮಾನ ಸಿಗುತ್ತದೆ. ಮಧು ಬಂಗಾರಪ್ಪ ಭವಿಷ್ಯದ ನಾಯಕ. ನಾನು ಕಾಂಗ್ರೆಸ್ ಸೇರಿದಾಗ ಯಾವ ಹುದ್ದೆ ನೀಡುವರು ಎಂದು ಕಾರ್ಯಕರ್ತರು ಹಾಗೂ ಮಾಧ್ಯಮದವರು ಪ್ರಶ್ನಿಸುತ್ತಿದ್ದರು. ಪಕ್ಷ ನನಗೆ ಮುಖ್ಯಮಂತ್ರಿ ಸ್ಥಾನವನ್ನೇ ನೀಡಲಿಲ್ಲವೇ? ಮಧು ಬಂಗಾರಪ್ಪಗೂ ಭವಿಷ್ಯ ಇದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಧು ಸೇರ್ಪಡೆ ಆಗಿರುವುದರಿಂದ ಬಂಗಾರಪ್ಪ ಅಭಿಮಾನಿಗಳು ಕಾಂಗ್ರೆಸ್ ಬೆಂಬಲಿಸಲಿದ್ದಾರೆ. ಮುಂದೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ಇದು ಮಹತ್ವ ಪಾತ್ರ ವಹಿಸಲಿದೆ. ರಾಜ್ಯ ಪ್ರವಾಸ ಮಾಡಿ ಸಂಘಟನೆ ಮಾಡುವ ಜವಾಬ್ದಾರಿಯನ್ನು ಮಧು ಬಂಗಾರಪ್ಪ ಅವರಿಗೆ ವಹಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ, ಕೆಪಿಸಿಸಿ ಕಾರ್ಯದರ್ಶಿ ಡಾ.ರಾಜನಂದಿನಿ ಕಾಗೋಡು, ಮುಖಂಡರಾದ ಭೀಮಣ್ಣ ನಾಯ್ಕ್, ಮಹಾದೇವಪ್ಪ, ಕಲಗೋಡು ರತ್ನಾಕರ, ಆರ್.ಶ್ರೀಧರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಸಿ. ಪಾಟೀಲ್, ಗಣಪತಿ, ಅಣ್ಣಪ್ಪ ಹಾಲಘಟ್ಟ, ಎನ್.ರಮೇಶ್, ಮಂಜುನಾಥ ಕುಬಟೂರು, ರತ್ನಾಕರ ಚಂದ್ರಗುತ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು