ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಗ; ಮಳೆ–ಮಂಜಿನ ದೃಶ್ಯಕಾವ್ಯ

ಮಳೆ, ಮೋಡ–ಮಂಜಿನ ಜುಗಲ್‌ಬಂದಿ
Last Updated 16 ಜುಲೈ 2022, 4:07 IST
ಅಕ್ಷರ ಗಾತ್ರ

ಶಿವಮೊಗ್ಗ: ಜೋಗ ಜಲಪಾತದ ಪರಿಸರದಲ್ಲಿ ಈಗ ಮಳೆಯ ಹಬ್ಬದ ನಿತ್ಯೋತ್ಸವ. ಮಲೆನಾಡಿನ ಮುಂಗಾರಿನ ಸಂಭ್ರಮಕ್ಕೆ ಈ ವಿಶ್ವವಿಖ್ಯಾತ ತಾಣ ತೆರೆದುಕೊಂಡಿದೆ. ನಿತ್ಯ ವರ್ಷಧಾರೆಯ ನಡುವೆ ಮೈದುಂಬುವ ಜಲಪಾತವನ್ನು ವೀಕ್ಷಿಸಲು ನಾಡಿನ ವಿವಿಧೆಡೆಯಿಂದ ಸಾವಿರಾರು ಮಂದಿ ನಿತ್ಯ ಜೋಗಕ್ಕೆ ಬರುತ್ತಿದ್ದಾರೆ.

ವಾರಾಂತ್ಯದ ಶನಿವಾರ–ಭಾನುವಾರವಂತೂ ಈಗ ಪ್ರವಾಸಿಗರ ಜಾತ್ರೆಯೇ ನೆರೆದಿರುತ್ತದೆ. ಗಾಂಭೀರ್ಯ, ಒನಪು, ವಯ್ಯಾರದೊಂದಿಗೆ ನಾಲ್ಕು ಕವಲುಗಳಾಗಿ ಧುಮ್ಮಿಕ್ಕುವ ಜಲಧಾರೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ದಿನವಿಡೀ ಮಳೆ, ಮೋಡ–ಮಂಜಿನ ಜುಗಲ್‌ಬಂದಿಗೆ ಸಾಕ್ಷಿಯಾಗುತ್ತಿದ್ದಾರೆ.

ಕಾಯುವುದೇ ಕಾಯಕ: ಮಳೆಯ ನಡುವೆ ಆಗಾಗ ಹರಡಿಕೊಳ್ಳುವ ಮಂಜು ಜೋಗದ ಗುಂಡಿಯ ದೃಶ್ಯವನ್ನು ಮಸುಕಾಗಿಸುತ್ತದೆ. ಸೂರ್ಯನ ಕಿರಣಗಳು ಒಡಮೂಡಿ ಜಲಧಾರೆ ಕಾಣುವವರೆಗೂ ನಿಂತು ಕಾಯುತ್ತಾ ಥಂಡಿ ಹಾಗೂ ಮಳೆಗೆ ಮೈಯೊಡ್ಡಿಕೊಳ್ಳುವ ಪುಳಕವೇ ವಿಶೇಷ. ಜೋಗದ ದೃಶ್ಯಕಾವ್ಯವನ್ನು ಒಮ್ಮೆ ಬಾಂಬೆ ಪ್ರವಾಸಿ ಮಂದಿರ ಭಾಗದಿಂದ ಕಣ್ತುಂಬಿಕೊಳ್ಳುವ ಪ್ರವಾಸಿಗರು ಮತ್ತೊಮ್ಮೆ ಜಲಪಾತದ ಮುಂದೆ ಬಂದು ಸವಿಯುತ್ತಿದ್ದಾರೆ. ವಿಡಿಯೊ, ಫೋಟೊ ತೆಗೆದು, ಸೆಲ್ಫಿಗೆ ಫೋಸ್ ನೀಡಿ ಸಂಭ್ರಮಿಸುವ ಪರಿಯೇ ಅನನ್ಯ.

ಜಲಪಾತ ವೀಕ್ಷಣೆ ಮಾಡಲು ಬರುವವರಿಗೆ ಸುಟ್ಟ ಮೆಕ್ಕೆಜೋಳದ ತೆನೆ ಹಾಗೂ ಅನಾನಸ್ ಹಣ್ಣಿನ ಸಿಹಿ ಸ್ವಾಗತಿಸುತ್ತಿದೆ. ಜೊತೆಗೆ ಕಾಫಿಯ ಘಮಲು ಸಾಥ್ ನೀಡುತ್ತಿದೆ.

‘ಇಲ್ಲಿ ಒಳ್ಳೆಯ ವಾತಾವರಣ ಇದೆ. ಈ ಮನಮೋಹಕ ದೃಶ್ಯ ಕಣ್ತುಂಬಿಕೊಳ್ಳಲು ನಾವು ಅದೃಷ್ಟ ಮಾಡಿದ್ದೇವೆ. ವರ್ಷಧಾರೆಯ ನಡುವೆ ಇದು ರಸದೌತಣ. ಇದಕ್ಕೆ ಸಾಕ್ಷಿಯಾಗುತ್ತಿರುವುದು ನಮಗೆ ಹೆಮ್ಮೆಯ ಸಂಗತಿ’ ಎಂದು ಕುಟುಂಬ ಸಮೇತರಾಗಿ ಶುಕ್ರವಾರ ಜೋಗ ಜಲಪಾತ ವೀಕ್ಷಣೆಗೆ
ಬಂದಿದ್ದ ಹುಬ್ಬಳ್ಳಿಯ ಬಿ.ವಿ.ಮ್ಯಾಗೇರಿ ದಂಪತಿ ಹೇಳಿದರು.

ಜೋಗದ ಗುಂಡಿಯೊಳಗೆ ಇಳಿದು ನೀರಿನ ಆವೇಗಕ್ಕೆ ಮೈಯೊಡ್ಡುವ ಪ್ರವಾಸಿಗರ ಆಸೆಗೆ ಅಲ್ಲಿನ ಜೋಗ ನಿರ್ವಹಣಾ ಪ್ರಾಧಿಕಾರ ಕೈಗೊಂಡಿರುವ ಕಾಮಗಾರಿ ಅಡ್ಡಿಯಾಗಿದೆ. ಜಲಪಾತದ ಕೆಳಭಾಗಕ್ಕೆ ಯಾರೂ ಹೋಗದಂತೆ ಗೇಟ್‌ಗಳನ್ನು ಬಂದ್ ಮಾಡಲಾಗಿದೆ.

ಪ್ರವಾಸಿ ಬಸ್‌ಗಳ ಸಾಲು: ಜೋಗಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳ ವಿಶೇಷ ಟ್ರಿಪ್‌ಗಳನ್ನು ದಾವಣಗೆರೆ, ಶಿರಸಿ, ಹರಿಹರ, ಚಿತ್ರದುರ್ಗದಿಂದ ವ್ಯವಸ್ಥೆ ಮಾಡಿದೆ. ಹೀಗಾಗಿ ಮಳೆಗಾಲದ ಸಂಭ್ರಮ ಕಣ್ತುಂಬಿಕೊಳ್ಳಲು ಬರುವವರ ಸಂಖ್ಯೆಯೂ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT