ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ, ಜೆಡಿಎಸ್ ಜನರ ಕ್ಷಮೆ ಕೇಳಲಿ: ಕಿಮ್ಮನೆ ಆಗ್ರಹ

Last Updated 18 ಡಿಸೆಂಬರ್ 2020, 11:15 IST
ಅಕ್ಷರ ಗಾತ್ರ

ಶಿವಮೊಗ್ಗ: ವಿಧಾನ ಪರಿಷತ್‌ನಲ್ಲಿ ನಡೆದ ಅಹಿತಕರ ಘಟನೆಗಳಿಗೆ ಬಿಜೆಪಿ, ಜೆಡಿಎಸ್‌ ನೇರ ಕಾರಣ. ಹಾಗಾಗಿ, ಎರಡೂ ಪಕ್ಷಗಳು ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ ಆಗ್ರಹಿಸಿದರು.

ಸಂಸದೀಯ ಪ್ರಜಾಪ್ರಭುತ್ವ ಇತಿಹಾಸದ ಕಪ್ಪು ಅಧ್ಯಾಯ. ಘಟನೆಗೆ ಬಿಜೆಪಿ ಕಾರಣವಾಗಿದ್ದರೂ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ವಿಧಾನ ಪರಿಷತ್ ಸಭಾಪತಿ ಅವರನ್ನು ಕಲಾಪಕ್ಕೆ ಬಾರದಂತೆ ತಡೆದಿದ್ದಾರೆ. ಬಾಗಿಲು ಮುಚ್ಚಿದ್ದಾರೆ. ಅವರ ಅನುಮತಿ ಇಲ್ಲದೇ ಉಪ ಸಭಾಪತಿಗಳನ್ನು ಪೀಠದ ಮೇಲೆ ಕೂರಿಸಿ, ಕಲಾಪ ನಡೆಸಲು ಹೊರಟ ಬಿಜೆಪಿ ಸದಸ್ಯರ ವರ್ತನೆ ಖಂಡನೀಯ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಕಾನೂನು ಸಚಿವ ಮಾಧುಸ್ವಾಮಿ ಅವರೇ ಸಭಾಪತಿ ಪೀಠದಲ್ಲಿ ಉಪ ಸಭಾಪತಿ ಅವರನ್ನು ಅಕ್ರಮವಾಗಿ ಕೂರಿಸಿದ್ದಾರೆ. ಮಾರ್ಷಲ್‌ಗಳಿಗೆ ಧಮುಕಿ ಹಾಕಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಅವರ ಪಾತ್ರವೂ ಇದೆ. ಈ ಇಬ್ಬರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸಭಾಪತಿ ಸ್ಥಾನ ಪಡೆಯಲು ಬಿಜೆಪಿ ಜತೆ ಜೆಡಿಎಸ್‌ ಕೈಜೋಡಿಸಿದೆ. ಅವರಿಗೆ ಬಹುಮತ ಇದ್ದಮೇಲೆ ತಾಳ್ಮೆಯಿಂದ ಕಾಯಬೇಕಿತ್ತು. ಬದಲಿಗೆ ನೀತಿ ನಿಯಮ ಗಾಳಿಗೆ ತೂರಿ, ಅರಾಜಕತೆ ಸೃಷ್ಟಿಸುವ ಅಗತ್ಯವಿರಲಿಲ್ಲ ಎಂದು ದೂರಿದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಜಾತಿ, ಧರ್ಮದ ಮೇಲೆ ಮತ ಕೇಳುತ್ತಿದೆ. ಕಾಂಗ್ರೆಸ್ ಸಾಧನೆಗಳ ಮೇಲೆ ಮತ ಯಾಚನೆ ಮಾಡುತ್ತಿದೆ. ಬಿಜೆಪಿಯ ಈ ನಡೆ ಭವಿಷ್ಯದಲ್ಲಿ ದೇಶದ ಐಕ್ಯತೆ ಮತ್ತು ಏಕಾಗ್ರತೆಗೆ ಧಕ್ಕೆ ತರಲಿದೆ. ಬಿಜೆಪಿ ಮುಖಂಡರು ಪ್ರಚೋದನಾಕಾರಿ ಹೇಳಿಕೆ ನೀಡುತ್ತಾ ದೇಶದ ಮಾನಸಿಕ ಸ್ಥಿತಿ ಹಾಳುಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಸುಂದರೇಶ್, ವಿಧಾನ ಪರಿಷತ್ ಸದಸ್ಯ ಆರ್‌.ಪ್ರಸನ್ನಕುಮಾರ್, ಪ್ರದಾನ ಕಾರ್ಯದರ್ಶಿ ಯು.ಶಿವಾನಂದ, ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT