ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಮಿಶ್ರ ಕೃಷಿಯಲ್ಲಿ ಲಾಭ ಕಂಡುಕೊಂಡ ಕೃಷ್ಣಪ್ಪ

7 ಎಕರೆ ಜಮೀನಿನಲ್ಲಿ ತರಹೇವಾರಿ ಬೆಳೆ
Last Updated 17 ಆಗಸ್ಟ್ 2022, 4:16 IST
ಅಕ್ಷರ ಗಾತ್ರ

ಕುಂಸಿ: ಆಯ್ಕೆ ಮಾಡಿಕೊಳ್ಳುವ ಕ್ಷೇತ್ರದಲ್ಲಿ ಕಠಿಣ ಶ್ರಮ, ಆಸಕ್ತಿ ವಹಿಸಿದರೆ ಉತ್ತಮ ಹಂತಕ್ಕೆ ತಲುಪಬಹುದು ಎಂಬುದಕ್ಕೆ ಶಿವಮೊಗ್ಗ ತಾಲ್ಲೂಕಿನ ಚಿನ್ಮನೆ ಸಮೀಪದ ಚಿಕ್ಕಮತ್ಲಿಯ ಕೃಷ್ಣಪ್ಪ ನಿದರ್ಶನವಾಗಿದ್ದಾರೆ.

ಕೃಷ್ಣಪ್ಪ ಓದಿದ್ದು ಐದನೇ ತರಗತಿಯವರೆಗೆ ವ್ಯಾಸಂಗ ಮಾಡಿ ಕೃಷಿಯ ಬಗ್ಗೆ ಆಸಕ್ತಿ ಹೊಂದಿದ್ದ ಕೃಷ್ಣಪ್ಪ ಭೂಮಿತಾಯಿಯನ್ನೇ ತಮ್ಮ ಬದುಕಾಗಿಸಿಕೊಂಡರು. ಕುಟುಂಬದಿಂದ ಬಂದ ಜಮೀನಿನಲ್ಲಿ ತರಹೇವಾರಿ ಬೆಳೆಗಳನ್ನು ಬೆಳೆದು ಲಾಭದ ಹಾದಿಯಲ್ಲಿ ಸಾಗುತ್ತಿದ್ದಾರೆ.

ಕೃಷ್ಣಪ್ಪ ಮೂಲತಃ ಬಿಲ್ಗುಣಿ ಗ್ರಾಮದವರು. ಕೃಷಿಯಲ್ಲಿ ಜೀವನ ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿ ತನ್ನ ಜಮೀನು ಇದ್ದ ಚಿಕ್ಕಮತ್ಲಿ ಊರಿಗೆ ಬಂದು ತಮ್ಮ ಜಮೀನಿನಲ್ಲಿಯೇ ಮನೆಯನ್ನು ನಿರ್ಮಿಸಿಕೊಂಡಿದ್ದಾರೆ. ತಮ್ಮ ಏಳು ಎಕರೆ ಜಮೀನಿನಲ್ಲಿ ಐದು ಎಕರೆ ಅಡಿಕೆ ತೋಟವನ್ನು ಕಟ್ಟಿಕೊಂಡಿದ್ದು, ಉಪಬೆಳೆಗಳಾಗಿ ಕಾಳುಮೆಣಸು ಬಳ್ಳಿ, ಕಾಫಿ ಗಿಡಗಳನ್ನು ಹಾಗೂ ತೆಂಗಿನ ಮರಗಳನ್ನು ಬೆಳೆಸಿದ್ದಾರೆ.

ಉಳಿದ ಎರಡು ಎಕರೆ ಜಮೀನಿನಲ್ಲಿ ಸೊಪ್ಪು, ಮೂಲಂಗಿ, ಬೀನ್ಸ್ ಮುಂತಾದ ತರಕಾರಿಗಳು, ಪೇರಲ, ಸಪೋಟ ಹಣ್ಣಿನ ಮರಗಳು ಶುಂಠಿ, ನುಗ್ಗೆ, ಏಲಕ್ಕಿ ಮತ್ತು ಹೂವಿನ ಗಿಡಗಳನ್ನು ಬೆಳೆಸಿದ್ದಾರೆ. ಇವರ ಜಮೀನಿನಲ್ಲಿಯೇ ಕೆರೆಯನ್ನು ನಿರ್ಮಿಸಿಕೊಂಡಿದ್ದು, ತರಹೇವಾರಿ ಮೀನುಗಳನ್ನು ಸಾಕಿ ಸುತ್ತಮುತ್ತಲಿನ ಹಳ್ಳಿಯ ಜನರ ಗಮನ ಸೆಳೆದಿದ್ದಾರೆ. ಇವರ ಹೆಸರು ಕೃಷ್ಣಪ್ಪ ಆದರೂ ಸುತ್ತ ಹಳ್ಳಿಗಳ ಜನರಿಗೆ ಇವರು ಅಪ್ಪಯ್ಯ ಎಂದೇ ಪರಿಚಿತ.

ಬೆಳೆದ ಎಲ್ಲಾ ಬೆಳೆಗಳು ಕೃಷ್ಣಪ್ಪ ಅವರ ಕೈ ಹಿಡಿದಿದ್ದರಿಂದ ವರ್ಷಪೂರ್ತಿ ಆದಾಯ ಕಂಡುಕೊಂಡಿದ್ದು, ಅವರ ಶ್ರಮಕ್ಕೆ ಸಾರ್ಥಕತೆ ಸಿಕ್ಕಿದೆ. ವರ್ಷಕ್ಕೆ ₹ 8ಲಕ್ಷದಿಂದ ₹10 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ. ಅಡಿಕೆಯನ್ನು ಇವರೇ ಬೇಯಿಸಿ ಮಾರುಕಟ್ಟೆಗೆ ಬಿಡುವುದರಿಂದ ಉತ್ತಮ ಆದಾಯ ಬರುತ್ತಿದೆ.

ಪತ್ನಿ ಇಂದ್ರಮ್ಮ, ಮಕ್ಕಳಾದ ವಿದ್ಯಾ, ಸಿಂಧು ಹಾಗೂ ಬಿಂದು, ಮನು ಹಾಗೂ ಸೊಸೆ ರಾಜೇಶ್ವರಿ ಅವರು ಕೃಷ್ಣಪ್ಪ ಅವರ ಶ್ರಮಕ್ಕೆ ಹೆಗಲಾಗಿ ನಿಂತಿದ್ದಾರೆ. ತೋಟದಲ್ಲಿಯೇ ಮನೆ ಇರುವುದರಿಂದ ಇವರು ಕಾಲಕಾಲಕ್ಕೆ ನೀರು, ಗೊಬ್ಬರ, ಜೀವಾಮೃತ ಔಷಧಗಳನ್ನು ನೀಡಿ ಬೆಳೆಗಳನ್ನು ಪೋಷಿಸುತ್ತಿದ್ದಾರೆ.

ಮುಂದಿನ ಯೋಜನೆಗಳು:ಅಡಿಕೆ ಬೆಳೆಗೆ ವೀಳ್ಯೆದೆಲೆ ಹಾಗೂ ಜಮೀನಿನ ಸುತ್ತಲೂ ಸಾಗುವಾನಿ ಗಿಡಗಳನ್ನು ನೆಡಲು ಸಿದ್ಧತೆ ನಡೆಸಿದ್ದಾರೆ. ನೀರಿನ ಕೊರತೆ ಬಾರದಂತೆ ಮುಂಜಾಗೃತೆ ಕ್ರಮವಾಗಿ ಎರಡು ಬೋರ್‌ವೆಲ್‌ಗಳನ್ನು ಕೊರೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT