ಗುರುವಾರ , ಮಾರ್ಚ್ 23, 2023
21 °C

ಕೊಚ್ಚಿಹೋಗುತ್ತಿರುವ ಕಾಂಗ್ರೆಸ್‌ಗೆ ಹುಲ್ಲುಕಡ್ಡಿಯಾದ ಹಾನಗಲ್‌: ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH Photo

ಶಿವಮೊಗ್ಗ: ಬಿಜೆಪಿ ಸುನಾಮಿಗೆ ಕೊಚ್ಚಿಹೋಗುತ್ತಿರುವ ಕಾಂಗ್ರೆಸ್‌ಗೆ ಹುಲ್ಲುಕಡ್ಡಿಯ ರೂಪದಲ್ಲಿ ಹಾನಗಲ್ ಜನ ದಯೆ ತೋರಿದ್ದಾರೆ. ಉಪ ಚುನಾವಣೆಯ ಒಂದು ಕ್ಷೇತ್ರದ ನಷ್ಟಕ್ಕೆ ಸಾರ್ವತ್ರಿಕ ಚುನಾವಣೆಯಲ್ಲಿ ಬಡ್ಡಿ ಸಮೇತ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಅವರು ಬುಧವಾರ ಸುದ್ದಿಗಾರರ ಜತೆ ಮಾತನಾಡಿದರು.

2023‌ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಧಿಕ ಸ್ಥಾನಗಳನ್ನು ಪಡೆದು ಮತ್ತೆ ಅಧಿಕಾರಕ್ಕೆ ಬರಲಿದೆ. ಹಾನಗಲ್‌ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದ ಮತಗಳು ಬಂದಿಲ್ಲ. ಅದಕ್ಕೆ ಕಾರಣ ಕಂಡು ಹಿಡಿದು ಪರಿಹಾರ ಹುಡುಕುತ್ತೇವೆ. 25 ಉಪ ಚುನಾವಣೆಯಲ್ಲಿ ಬಿಜೆಪಿ 23ರಲ್ಲಿ ಗೆದ್ದಿದೆ ಎಂದರು.

ಕಾಂಗ್ರೆಸ್‌ ಜಾತಿ ರಾಜಕಾರಣ, ಮುಸ್ಲಿಮರ ಓಲೈಕೆ, ಜಾತಿಗಳ ಮಧ್ಯೆ ಒಡಕು ಮತ್ತಿತರ ಕಾರಣಗಳಿಂದ ಕಾಂಗ್ರೆಸ್‌ ಸಿಂದಗಿಯಲ್ಲಿ ಹೀನಾಯ ಸೋಲು ಅನುಭವಿಸಿದೆ. ಕಾಂಗ್ರೆಸ್ ಸುನಾಮಿಗೆ ಮುಂಬರುವ ದಿನಗಳಲ್ಲಿ ಬಿಜೆಪಿ ಕೊಚ್ಚಿ ಹೋಗಲಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಹಾನಗಲ್ ಗೆಲುವನ್ನೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಲು ಹೊರಟಿದ್ದಾರೆ. ಮುಖ್ಯಮಂತ್ರಿ ತವರು ಕ್ಷೇತ್ರದ ಸೋಲು ಸರ್ಕಾರಕ್ಕೆ ಹಿನ್ನಡೆಯಲ್ಲ. ಹಿಂದೆ ಸಿದ್ದರಾಮಯ್ಯ, ಜೆಎಚ್‌.ಪಟೇಲರು ತಮ್ಮದೇ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಒಂದು ಕ್ಷೇತ್ರದ ಸೋಲು ಪಕ್ಷದ ಸೋಲು ಎಂದಿಗೂ ನಿರ್ಣಾಯಕವಲ್ಲ ಎಂದು ಪ್ರತಿಪಾದಿಸಿದರು.

ಜೆಡಿಎಸ್ ಹಿನ್ನಡೆ ಕುರಿತು ಪ್ರತಿಕ್ರಿಯಿಸಿದ ಅವರು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಜನಮನ್ನಣೆ ಇಲ್ಲ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಇಲ್ಲಿ ಪ್ರಾದೇಶಿಕ ಮಟ್ಟಕ್ಕೆ ಇಳಿದಿದೆ. ಪ್ರಾದೇಶಿಕ ಪಕ್ಷಗಳು ನೆಲೆ ಕಳೆದುಕೊಳ್ಳುತ್ತಿವೆ ಎಂದರು.

ಸರ್ಕಾರದ ವಿರುದ್ಧ ಆಡಳಿತ ಅಲೆ ಆರಂಭವಾಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ಮೊದಲು ಅವರ ಪಕ್ಷದ ಒಳಗಿನ ಒಳಜಗಳ ಬಗೆಹರಿಸಿಕೊಳ್ಳಲಿ ಎಂದು ಛೇಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು