ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಂಸಿ | ಸಾವಯವ ಕೃಷಿ; ಮಾದರಿಯಾದ ನಿವೃತ್ತ ನೌಕರ

ಸಿದ್ಧಾಪುರ: ಎರಡು ಎಕರೆ ಜಮೀನಿನಲ್ಲಿ ವಿವಿಧ ಬೆಳೆ
ವರುಣ್ ಕುಮಾರ್ ಡಿ.ಬಿಲ್ಗುಣಿ
Published : 14 ಆಗಸ್ಟ್ 2024, 6:49 IST
Last Updated : 14 ಆಗಸ್ಟ್ 2024, 6:49 IST
ಫಾಲೋ ಮಾಡಿ
Comments

ಕುಂಸಿ: ಸಮೀಪದ ಆಯನೂರು– ಕೋಹಳ್ಳಿ ಗ್ರಾಮದ ನಿವೃತ್ತ ನೌಕರರೊಬ್ಬರು ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ಕೈಗೊಂಡು ಬಹುಬೆಳೆ ಬೆಳೆಯುವ ಮೂಲಕ ಯಶಸ್ಸು ಕಂಡು ಇತತರಿಗೆ ಮಾದರಿಯಾಗಿದ್ದಾರೆ.

ಕೋಹಳ್ಳಿ ಗ್ರಾಮದ ಮಂಜುನಾಥ್ ಎಂ. ಮೈಸೂರು ಮಿನರಲ್ಸ್ ಲಿಮಿಟೆಡ್ ಕಂಪನಿಯ ನೌಕರರಾಗಿ ಕೆಲಸ ಮಾಡಿ 2016ರಲ್ಲಿ ನಿವೃತ್ತಿ ಹೊಂದಿದರು. ನಂತರ ಕೃಷಿಯಲ್ಲಿ ಸಂಪೂರ್ಣ ತೊಡಗಿಕೊಂಡು ಸಾವಯವ ಪದ್ಧತಿಯಲ್ಲಿ ವಿವಿಧ ಬೆಳೆ ಬೆಳೆಯುತ್ತ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ.

ತಮ್ಮ ಎರಡು ಎಕರೆ ಜಮೀನಿನನಲ್ಲಿ ಅಡಿಕೆ ಜೊತೆಗೆ ಮೊದಮೊದಲು ಬಾಳೆ, ಹೆಸರು, ಹುರುಳಿ ಬೆಳೆಗಳನ್ನು ಬೆಳೆದರು. ರಾಸಾಯನಿಕಗಳಿಂದ ಭೂಮಿಯ ಫಲವತ್ತತೆ ಕ್ಷೀಣಗೊಳ್ಳುತ್ತದೆ ಎಂಬುದನ್ನರಿತ ಅವರು ಸಾವಯವ ಪದ್ಧತಿಯ ಹಂಗು ಬೆಳೆಸಿದರು. ಈಗ ಉತ್ತಮ ಲಾಭ ಪಡೆಯುತ್ತಿದ್ದು, ಇತರರಿಗೆ ಸಾವಯವ ಕೃಷಿಯ ಬಗ್ಗೆ ಮಾಹಿತಿ ಹಂಚುತ್ತಿದ್ದಾರೆ.

ಜಮೀನಿನಲ್ಲಿ ಅಡಿಕೆ ಬೆಳೆದು ಅಡಿಕೆ ಮರಕ್ಕೆ ತೊಂದರೆ ಆಗದಂತೆ ವೆಲ್ವೆಟ್ ಬಿನ್ಸ್ ಬಳ್ಳಿಯನ್ನು ಹಬ್ಬಿಸಿರುವ ಅವರು ಈ ಬಳ್ಳಿಯ ಹಸಿರು ಎಲೆಗಳನ್ನು ಹಸುಗಳಿಗೆ ಆಹಾರವಾಗಿ ಕೊಡುತ್ತಾರೆ. ‘ಈ ಎಲೆಗಳನ್ನು ತಿನ್ನುವುದರಿಂದ ಹಸುಗಳು ಸದೃಢವಾಗಿ ಮತ್ತು ಆರೋಗ್ಯಯುತವಾಗಿ ಇರುತ್ತವೆ’ ಎನ್ನುವುದು ಮಂಜುನಾಥ್ ಅವರ ಅನುಭವದ ಮಾತು.

ಉಪಬೆಳೆಗಳು: ಇದರ ಜೊತೆಗೆ ಉಪಬೆಳೆಗಳಾಗಿ ನಿಂಬು, ವಿವಿಧ ರೀತಿಯ ಪೇರಲೆ, ಮಾವಿನ ಮರ, ಸೀತಾಫಲ, ಸೇಬು, ಪಪ್ಪಾಯಿ, ಮೂಸಂಬಿ, ಹಲಸು, ನುಗ್ಗೆ ಮರಗಳು ಮತ್ತು ಹೂವಿನ ಗಿಡಗಳನ್ನು ಹಾಕಿದ್ದಾರೆ. ಜಮೀನಿನ ಸುತ್ತಲೂ ತೆಂಗು, ತೇಗ, ಸಿಲ್ವರ್ ಮರಗಳನ್ನು ಬೆಳೆಸಿದ್ದಾರೆ.

ಈ ಎಲ್ಲ ಬೆಳೆಗಳಿಗೆ ಯಾವುದೇ ರಾಸಾಯನಿಕ ಔಷಧಗಳನ್ನು ನೀಡದೆ ಸಾವಯವ ಪದ್ಧತಿಯ ಜೀವಾಮೃತ ಮತ್ತು ಗೋ ಕೃಪಾಮೃತವನ್ನು ಅವರೇ ತಯಾರಿಸಿ ಗಿಡಗಳಿಗೆ ನೀಡುತ್ತಾರೆ. ‘ಬೆಳೆಗಳ ಸಂರಕ್ಷಣೆಗೆ ಎರೆಹುಳು ಗೊಬ್ಬರ ತುಂಬಾ ಮುಖ್ಯ’ ಎನ್ನುವ ಅವರು ತಮ್ಮ ಜಮೀನಿನಲ್ಲಿಯೇ ಎರೆಹುಳು ಗೊಬ್ಬರದ ತೊಟ್ಟಿಯನ್ನು ನಿರ್ಮಿಸಿಕೊಂಡಿದ್ದಾರೆ. ಇದಲ್ಲದೇ ಜೇನು ಸಾಕಾಣಿಕೆ ಮಾಡುತ್ತಿದ್ದಾರೆ. ಜತೆಗೆ ದೇಸಿ ಹಸುಗಳನ್ನು ಸಾಕಿದ್ದಾರೆ.

ಉತ್ತಮ ಆದಾಯ: ಈ ಎಲ್ಲ ಬೆಳೆಗಳಿಂದ ಪ್ರತಿ ವರ್ಷ ಉತ್ತಮ ಆದಾಯ ಗಳಿಸುತ್ತಿದ್ದಾರೆ. ನೀರಿನ ಕೊರತೆ ಬಾರದಂತೆ ಜಮೀನಿನನಲ್ಲಿ ಎರಡು ಕೊಳವೆಬಾವಿಯನ್ನು ಕೊರೆಯಿಸಿದ್ದಾರೆ. ಅವರ ಈ ಕೃಷಿ ಪ್ರಗತಿಯನ್ನು ಕಂಡ ಜನರು ಅವರ ಬಳಿ ಬಂದು ಸಲಹೆ ಪಡೆಯುತ್ತಿದ್ದಾರೆ.

ಅವರ ಯಶಸ್ವಿ ಕೃಷಿ ಕಾಯಕಕ್ಕೆ ಪತ್ನಿ ಹೇಮಾಕ್ಷಮ್ಮ ಹಾಗೂ ಪುತ್ರ ಸಂತೋಷ್ ಮತ್ತು ಹರೀಶ್ ಕೈಜೋಡಿಸಿದ್ದಾರೆ.

ಜಮೀನಿನಲ್ಲಿ ಬೆಳೆದ ಬೆಳೆಗಳಿಗೆ ಹಾಕಲು ಎರೆಹುಳು ಗೊಬ್ಬರದ ತೊಟ್ಟಿಯನ್ನು ನಿರ್ಮಿಸಿಕೊಂಡಿರುವ ಮಂಜುನಾಥ.ಎಂ
ಜಮೀನಿನಲ್ಲಿ ಬೆಳೆದ ಬೆಳೆಗಳಿಗೆ ಹಾಕಲು ಎರೆಹುಳು ಗೊಬ್ಬರದ ತೊಟ್ಟಿಯನ್ನು ನಿರ್ಮಿಸಿಕೊಂಡಿರುವ ಮಂಜುನಾಥ.ಎಂ
ಬೆಳೆಗಳಿಗೆ ಪೌಷ್ಟಿಕಾಂಶ ನೀಡಲು ತಾವೇ ತಯಾರಿಸುತ್ತಿರುವ ಸಾವಯವ ಜೀವಾಮೃತ
ಬೆಳೆಗಳಿಗೆ ಪೌಷ್ಟಿಕಾಂಶ ನೀಡಲು ತಾವೇ ತಯಾರಿಸುತ್ತಿರುವ ಸಾವಯವ ಜೀವಾಮೃತ

‘ಮಿಶ್ರಬೆಳೆ ಲಾಭದಾಯಕ’

‘ಸಾವಯವ ಪದ್ಧತಿಯಿಂದ ಬೆಳೆ ಬೆಳೆಯುವುದರಿಂದ ಭೂಮಿಯ ಫಲವತ್ತತೆ ಹಾಳಾಗುವುದಿಲ್ಲ. ಜತೆಗೆ ಜನರಿಗೆ ವಿಷಮುಕ್ತ ಬೆಳೆಯನ್ನು ಕೊಡಬಹುದು. ಆರಂಭದಲ್ಲಿ ಸಾವಯವ ಕೃಷಿಯಿಂದ ಜಮೀನಿನಲ್ಲಿ ಲಾಭ ಕಡಿಮೆ ಕಂಡರೂ ನಂತರದ ದಿನಗಳಲ್ಲಿ ಬೆಳೆ ಹಾಳಾಗದೆ ಧೀರ್ಘ ಕಾಲ ಇರುತ್ತದೆ. ಹೆಚ್ಚಿನ ಲಾಭ ಕಾಣಬಹುದು’ ಎನ್ನುತ್ತಾರೆ ಮಂಜುನಾಥ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT