ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ: ಮುಳುಗಡೆ ಸಂತ್ರಸ್ತರ ಬಾಳಲ್ಲಿ ಕಾಣದ ‘ಬೆಳಕು’

ತೀರ್ಥಹಳ್ಳಿ– ಹೊಸನಗರ ಗಡಿ ಗ್ರಾಮಗಳ ಜನರ ಸಂಕಷ್ಟ
Last Updated 16 ಏಪ್ರಿಲ್ 2022, 6:56 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ನಾಡಿಗೆ ಬೆಳಕು ನೀಡಲು ತ್ಯಾಗ ಮಾಡಿದ ವರಾಹಿ, ಚಕ್ರ-ಸಾವೇಹಕ್ಲು ಮುಳುಗಡೆ ಗ್ರಾಮಸ್ಥರು ಇಂದಿಗೂ ಕತ್ತಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ನೀರಿನ ಮಟ್ಟ ಏರಿಕೆಯಾದಂತೆ ಹತ್ತಿರವಿದ್ದ ಗ್ರಾಮಗಳು ಬಹುದೂರಕ್ಕೆ ಸಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಲ್ಲಿನ ಜನರ ಬೇಡಿಕೆಗೆ ಸ್ಪಂದನ ಸಿಕ್ಕಿಲ್ಲ.

ತಾಲ್ಲೂಕಿನಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುರುಳಿ, ಹೆಗ್ಗದ್ದೆ, ಮೇಲಿನಮನೆ, ತೆಮ್ಮೆಮನೆ, ಕಟ್ಟಿನಮಡಿಕೆ, ಶುಂಠಿಹಕ್ಲು, ಕುಂಜವಳ್ಳಿ, ಬೊಬ್ಬಿ, ಕಾರೆಕುಮ್ರಿ, ಶಿವಳ್ಳಿ, ಕೊಕ್ಕೋಡು, ಧರೆಗುಂಡಿ ಗ್ರಾಮಕ್ಕೆ ಸರಿಯಾದ ಮೂಲಸೌಕರ್ಯ ಇಲ್ಲ.

ನಾಲೂರು ಗ್ರಾಮಕ್ಕೆ ಹೊಂದಿಕೊಂಡಿರುವ ಹೊಸನಗರ ತಾಲ್ಲೂಕಿನ ಯಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರನಕೋಟೆ, ಬೊಬ್ಬಿ, ಮಲ್ಲಕ್ಕಿ, ಹೆಬ್ಬಾಗಿಲು, ತೈರೊಳ್ಳಿ ಗ್ರಾಮಗಳು ಕೂಗಳತೆ ದೂರದಲ್ಲಿವೆ. ಆದರೂ 32 ಕಿ.ಮೀ. ಸುತ್ತುವರಿದು ಯಡೂರಿಗೆ ಹೋಗಬೇಕು. ಇಲ್ಲದಿದ್ದರೆ ಉಕ್ಕಡ (ತೆಪ್ಪ) ಬಳಸಿ 6 ಕಿ.ಮೀ. ಹಿನ್ನೀರಿಗೆ ಹುಟ್ಟು ಹಾಕಬೇಕು. ಹೊಸನಗರ ತಾಲ್ಲೂಕು ಕೇಂದ್ರಕ್ಕೆ ಹೋಗಬೇಕಾದರೆ 77 ಕಿ.ಮೀ. ದೂರ ಕ್ರಮಿಸಬೇಕಾದ ಅನಿವಾರ್ಯ ಇಲ್ಲಿನ ಜನರದ್ದು.

ಅತಂತ್ರ ಸ್ಥಿತಿಯಲ್ಲಿ ನಾಗರಿಕ ಸೌಲಭ್ಯ ಪಡೆಯಲು 3ರಿಂದ 4 ಬಸ್‌ ಬದಲಾಯಿಸಿ ಹೊಸನಗರ ತಾಲ್ಲೂಕು ಕೇಂದ್ರಕ್ಕೆ ತಲುಪುವ ದುಃಸ್ಥಿತಿ ಮುಳುಗಡೆ ಸಂತ್ರಸ್ತರದ್ದು. ಈ ಕಾರಣದಿಂದ ಇಲ್ಲಿನ ಗ್ರಾಮಸ್ಥರು ಪ್ರತಿನಿತ್ಯ ಪ್ರಜಾಪ್ರಭುತ್ವವನ್ನೇ ಶಪಿಸುವಂತಾಗಿದೆ. ಯಡೂರು ಹಿನ್ನೀರು ಪ್ರದೇಶಕ್ಕೆ ಒಬ್ಬರು ಗ್ರಾಮ ಪಂಚಾಯಿತಿ ಸದಸ್ಯರಿದ್ದರೂ ಸಂಖ್ಯಾಬಲದ ಕಾರಣ ಗ್ರಾಮದ ಸಮಸ್ಯೆಯನ್ನು ಗಟ್ಟಿಯಾಗಿ ಮಾತನಾಡದ ಪರಿಸ್ಥಿತಿ ಇದೆ.

ವಿದ್ಯಾರ್ಥಿಗಳು 4ನೇ ತರಗತಿ ನಂತರ ಇಲ್ಲಿಂದ 17 ಕಿ.ಮೀ. ದೂರದಲ್ಲಿರುವ ಗುಡ್ಡೇಕೇರಿ ಅಥವಾ 12 ಕಿ.ಮೀ. ದೂರದ ನಾಲೂರು ಶಾಲೆಗೆ ಹೋಗಬೇಕು. ಬೇಸಿಗೆಯಲ್ಲಿ ಹೇಗಾದರೂ ಶಾಲೆ ತಲುಪಬಹುದು. ಆದರೆ ಮಳೆಗಾಲದಲ್ಲಿ ಹಳ್ಳಕೊಳ್ಳ ದಾಟಿ ವಿದ್ಯಾರ್ಥಿಗಳು ಒದ್ದೆಯಾಗಿ ನರಕಯಾತ್ರೆ ಮಾಡಬೇಕು. ಇಂತಹ ಸ್ಥಿತಿಯಲ್ಲಿ ಪಾಠ ಕೇಳುವುದಕ್ಕಿಂತ ಹೊಲ ಮನೆ ನೋಡಿಕೊಳ್ಳುವುದೇ ಲೇಸು ಎಂಬ ಭಾವನೆ ಇಲ್ಲಿನ ಜನರಲ್ಲಿ ಆಗಾಗ ಮೂಡುತ್ತದೆ.

ಮಕ್ಕಳನ್ನು ಹಾಸ್ಟೆಲ್‌ಗೆ ಸೇರಿಸಲು ಇಷ್ಟ ಇಲ್ಲದ ಪೋಷಕರು ತೀರ್ಥಹಳ್ಳಿ ಪಟ್ಟಣದ ಖಾಸಗಿ ಶಾಲೆಗೆ ಮತ್ತು ಬಡವರು ಸರ್ಕಾರಿ ವಸತಿ ಶಾಲೆ ಮೊರೆಹೋಗಿದ್ದಾರೆ ಎಂದು ಬೇಸರಿಸಿದರುಯಡೂರು ಗ್ರಾಮದಪ್ರೇಮ್‌.

ಸೀಮೆಎಣ್ಣೆಗೆ ಪರದಾಟ: ತಿಂಗಳ ಪಡಿತರ ಪಡೆಯಲು ಈ ಹಿಂದೆ ಯಡೂರಿಗೆ ಹೋಗಬೇಕಾಗಿತ್ತು. 2019ರ ಫೆಬ್ರವರಿಯಲ್ಲಿ ಅಂದಿನ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಹುರುಳಿ ಗ್ರಾಮದಲ್ಲಿ ಮಾಡಿದ ಗ್ರಾಮವಾಸ್ತವ್ಯದ ಫಲವಾಗಿ ಈಗ ಗಾರ್ಡರಗದ್ದೆ ಪಡಿತರ ವಿತರಣಾ ಕೇಂದ್ರದಲ್ಲಿ ತಿಂಗಳ ಅಕ್ಕಿ ಪಡೆಯಬಹುದು.‌ ವಿದ್ಯುತ್‌ ಇಲ್ಲದ ಸಂದರ್ಭ ಬುಡ್ಡಿದೀಪ ಉರಿಸಲು ಸೀಮೆಎಣ್ಣೆಗಾಗಿ ಗ್ರಾಮಸ್ಥರು ಇಂದಿಗೂ ಯಡೂರಿಗೆ ತೆರಳಬೇಕಾದ ಪರಿಸ್ಥಿತಿ ಇದೆ.

ಮೊಬೈಲ್‌ ಸಂಪರ್ಕ ದೂರ: ರಾಜ್ಯ ಸರ್ಕಾರ ವಿದ್ಯಾಗಮ ಮೂಲಕ ಮನೆಯಲ್ಲಿರುವ ವಿದ್ಯಾರ್ಥಿಗಳನ್ನು ತಲುಪಿದೆ. ಅಂತರ್ಜಾಲ ತರಗತಿ ನಡೆಸಿದ್ದರೂ ಇಲ್ಲಿನ ಗ್ರಾಮದ ಮಕ್ಕಳಿಗೆ ಮಾತ್ರ ಆ ತರಗತಿ ಮಾಹಿತಿ ಕಿಂಚಿತ್ತೂ ಸಿಗಲಿಲ್ಲ. ಶಿಕ್ಷಕರು ಗ್ರಾಮಕ್ಕೆ ತೆರಳುವುದು ಕಷ್ಟಕರವಾಗಿತ್ತು. ವಿದ್ಯಾರ್ಥಿಗಳ ಮನೆಗೆ ತೆರಳಲು ಶಿಕ್ಷಕರಿಗೂ ಯಾರಾದರೂ ಬಾಡಿಗಾರ್ಡ್‌ ಬೇಕಾಗಿತ್ತು. ಪೋಷಕರಿಗೂ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ. ಇಂದಿಗೂ ಬಹುತೇಕ ಕುಟುಂಬಗಳದ್ದು ಇದೇ ಪರಿಸ್ಥಿತಿ. ಇಂದಿಗೂ ಪೋನ್‌ನಲ್ಲಿ ಮಾತನಾಡಲು ಆಗದ ಸ್ಥಿತಿ.

ಜಗತ್ತು ಕೈಬೆರಳಿನಲ್ಲಿದ್ದರೂ ಇಲ್ಲಿನ ಜನರಿಗೆ ತಕ್ಷಣದ ಯಾವುದೇ ಸುದ್ದಿ ತಲುಪುವುದಿಲ್ಲ. ಗಾರ್ಡರಗದ್ದೆ ಪಡಿತರ ವಿತರಣಾ ಕೇಂದ್ರಕ್ಕೆ ಬರುವ ಯಡೂರು ಗ್ರಾಮಸ್ಥರೂ ನೆಟ್‌ವರ್ಕ್‌ ಸಮಸ್ಯೆಯ ಕಾರಣದಿಂದ ಎರಡು ಮೂರು ದಿನ ಇಲ್ಲಿ ಕಾಯಬೇಕಾದ ಅನಿವಾರ್ಯ ಎದುರಾಗಿದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಸಂದೀಪ.

ಇದ್ದರೂ ಇಲ್ಲದಂತಾದ ಬಸ್‌: ಖಾಸಗಿ ಬಸ್‌ ಓಡಾಡುತ್ತಿದ್ದ ಕಾಲಘಟ್ಟದಲ್ಲಿ ಇಲ್ಲಿನ ಜನರಿಗೆ ತಕ್ಕಮಟ್ಟಿನ ಅನುಕೂಲ ಆಗಿತ್ತು. ಜಿಲ್ಲಾಧಿಕಾರಿ ಭೇಟಿ ನಂತರ ಆರಂಭವಾದ ಕೆಎಸ್‌ಆರ್‌ಟಿಸಿ ಬಸ್‌ ಬೆಳಿಗ್ಗೆ 7.45ಕ್ಕೆ ಕೊರನಕೋಟೆಯಿಂದ ಹೊರಟರೆ ಸಂಜೆ ಹೊತ್ತಿಲ್ಲದ ಹೊತ್ತಲ್ಲಿ ಗ್ರಾಮಕ್ಕೆ ಬಂದು ಸೇರುತ್ತದೆ. ಬಸ್‌ನಲ್ಲಿ ತೀರ್ಥಹಳ್ಳಿ ಬರಬೇಕಾದರೆ ಸುಮಾರು 2ರಿಂದ 3 ಗಂಟೆ ಕಾಲಾವಧಿ ಬೇಕಾಗುತ್ತದೆ. ನಾಲೂರು ಹೆದ್ದಾರಿ ಸೇರುವ ಬಸ್‌ ಮತ್ತೆ ಹಳ್ಳಿ ಭಾಗದ ಗುಡ್ಡೇಕೇರಿ, ಕೆಂದಳಬೈಲು, ಶೀರೂರು ಗ್ರಾಮದ ಮೂಲಕ ತೀರ್ಥಹಳ್ಳಿಗೆ ಬರಬೇಕು. ಬಸ್‌ ಇದ್ದರೂ ಇಲ್ಲದಂತಹ ಪರಿಸ್ಥಿತಿ ಗ್ರಾಮಸ್ಥರದ್ದು. ಮಧ್ಯಾಹ್ನ ತರಗತಿ ಮುಗಿಸಿ ನಾಲೂರು ಸೇರುವ ವಿದ್ಯಾರ್ಥಿಗಳಿಗೆ ಕಾಲು ನಡಿಗೆಯೇ ಗತಿ ಎಂದು ಬೇಸರಿಸಿದರು ತೈರೊಳ್ಳಿ ರಾಜೇಶ್.

ಕತ್ತಲ ಜಗತ್ತು: ಇಲ್ಲಿನ ಮಣ್ಣಿನ ಮಕ್ಕಳು ನಾಡಿಗೆ ಬೆಳಕು ನೀಡಿದ್ದಾರೆ. ಬೆಳಕಿನ ಮೂಲ ಹೊಂದಿರುವ ಗ್ರಾಮಗಳಲ್ಲಿ ಇಂದಿಗೂ ವಿದ್ಯುತ್‌ ಸಮಸ್ಯೆ ಬಗೆಹರಿದಿಲ್ಲ. ಬೇಸಿಗೆಯಲ್ಲಿ ಸಿಗುವ ವಿದ್ಯುತ್‌ ಸರಬರಾಜು ಮಳೆಗಾಲದ 3 ತಿಂಗಳು ಕಾಣೆಯಾಗುತ್ತದೆ. ವಿದ್ಯಾರ್ಥಿಗಳು ಕತ್ತಲೆ ಕಾರಣಕ್ಕೆ ಬಿಡುತ್ತಿದ್ದಾರೆ. ರಾತ್ರಿ ಕರೆಂಟ್‌ ಕಟ್‌ ಆದ್ರೆ ಬರುವ ನಿರೀಕ್ಷೆ ಇಲ್ಲ. ಬರುವ ವಿದ್ಯುತ್‌ ಬಿಲ್‌ ಕಟ್ಟಲೂ ನಗರಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ.

ಆಗುಂಬೆ ಭಾಗದಲ್ಲಿನಕ್ಸಲ್‌ ಹಾವಳಿಯಿಂದ ಅನೇಕ ಅಭಿವೃದ್ಧಿಕಾಮಗಾರಿಗಳು ನಡೆದಿವೆ. ಒಂದಷ್ಟು ಅರಣ್ಯ ಪ್ರದೇಶ ಕೂಡ ನಕ್ಸಲರ ಭಯದ ಕಾರಣಕ್ಕೆ ಉಳಿದಿದೆ. ಈಚೆಗೆ ಅಂತಹ ಪ್ರಕರಣಗಳು ವರದಿಯಾಗದಿದ್ದರೂ ಮಲ್ಲಂದೂರು, ಹುರುಳಿ ಭಾಗ ನಕ್ಸಲ್‌ ಪೀಡಿತ ಪ್ರದೇಶ ಎಂದು ಘೋಷಣೆಯಾಗಿವೆ. ನಕ್ಸಲರಿಂದಾಗಿ ಕೆಲ ಅಭಿವೃದ್ಧಿ ಕಾಮಗಾರಿ ಆಗಿದ್ದನ್ನು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ.

*
ಗ್ರಾಮದಲ್ಲಿ ಅನೇಕ ಸಮಸ್ಯೆಗಳು ಇದೆ. ವಿದ್ಯುತ್‌ ಸರಿಯಾಗಿ ಇಲ್ಲದ ಕಾರಣ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಜಿಲ್ಲಾಡಳಿತ ಗ್ರಾಮೀಣ ಭಾಗದ ಜನರ ಕೂಗು ಕೇಳಿಸಿಕೊಳ್ಳಬೇಕು.
–ಸಂದೀಪ ಗಾರ್ಡರಗದ್ದೆ, ನಾಲೂರು ಪಂಚಾಯಿತಿ ಸದಸ್ಯ

*
ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ವಿದ್ಯುತ್‌ ಸ್ಥಗಿತ ಆಗುವುದರಿಂದ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ. ವಿದ್ಯುತ್‌ ಇಲ್ಲದ ವೇಳೆ ದೂರ ಸಂಪರ್ಕ ಕೇಂದ್ರಗಳು ಕಾರ್ಯಸ್ಥಗಿತಗೊಳಿಸುತ್ತವೆ. ಇದರಿಂದ ನೆಟ್‌ವರ್ಕ್‌ ಸಮಸ್ಯೆ ಹೆಚ್ಚಿದೆ.
–ತೈರೊಳ್ಳಿ ರಾಜೇಶ್, ಗ್ರಾಮಸ್ಥ

*
ಹೊಸನಗರ ತಾಲ್ಲೂಕು ಕೇಂದ್ರ ಬಹಳ ದೂರ. ಬಸ್‌ನಲ್ಲಿ ಯಡೂರಿನಿಂದ ಮಾಸ್ತಿಕಟ್ಟೆಗೆ ತೆರಳಿ ಅಲ್ಲಿಂದ ನಗರಕ್ಕೆ ಹೋಗಬೇಕು. ಜಿಲ್ಲಾಡಳಿತ ಸುಳುಗೋಡು, ಯಡೂರು ಗ್ರಾಮ ಪಂಚಾಯಿತಿಯನ್ನು ತೀರ್ಥಹಳ್ಳಿಗೆ ಸೇರಿಸಲು ಕ್ರಮ ತೆಗೆದುಕೊಳ್ಳಬೇಕು.
–ಪ್ರೇಮ್‌ ಯಡೂರು, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT