ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕಾರಿಪುರ | ಸಮರ್ಪಕ ಬಸ್ ಕೊರತೆ: ವಿದ್ಯಾರ್ಥಿಗಳಿಗೆ ಪ್ರಯಾಸ

Published : 14 ಸೆಪ್ಟೆಂಬರ್ 2024, 6:46 IST
Last Updated : 14 ಸೆಪ್ಟೆಂಬರ್ 2024, 6:46 IST
ಫಾಲೋ ಮಾಡಿ
Comments

ಶಿಕಾರಿಪುರ: ತಾಲ್ಲೂಕಿನಲ್ಲಿ ಸರ್ಕಾರಿ ಬಸ್‌ಗಳ (ಕೆಎಸ್‌ಆರ್‌ಟಿಸಿ) ಸಂಚಾರ ಸಮರ್ಪಕವಾಗಿರದ ಕಾರಣ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರಯಾಸಪಡುವಂತಾಗಿದೆ.

ಗ್ರಾಮೀಣ ಭಾಗ ಸೇರಿ ಕೆಲವು ಪಟ್ಟಣಗಳಿಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಚರಿಸಲು ಅಗತ್ಯ ಸಮಯಕ್ಕೆ ಸರ್ಕಾರಿ ಬಸ್‌ಗಳ ಸೇವೆ ಇಲ್ಲದಂತಾಗಿದೆ. ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸುವ ಮುಂಚೆಯೂ ತಾಲ್ಲೂಕಿನಲ್ಲಿ ಸರ್ಕಾರಿ ಬಸ್‌ಗಳ ಸಮರ್ಪಕ ಸೌಲಭ್ಯ ಇರಲಿಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಬಸ್ಸಿಗಾಗಿ ಪರದಾಡುವ ಪರಿಸ್ಥಿತಿ ಇತ್ತು.

ಪಟ್ಟಣದಲ್ಲಿ ಬಸ್ ಡಿಪೊ ನಿರ್ಮಾಣವಾದ ನಂತರ ಬಸ್ ಸಂಚರಿಸತ್ತವೆ ಎಂಬ ನಂಬಿಕೆ ತಾಲ್ಲೂಕಿನ ಜನರಲ್ಲಿ ಇತ್ತು.  ಬಸ್ ಡಿಪೊ ನಿರ್ಮಾಣವಾಗಿದ್ದರೂ ಅಗತ್ಯ ಸಮಯಕ್ಕೆ ಪ್ರಯಾಣ ಬೆಳೆಸಲು ಸರ್ಕಾರಿ ಬಸ್ ಸೇವೆ ದೊರೆಯದೇ ತೊಂದರೆ ಅನುಭವಿಸುತ್ತಿದ್ದಾರೆ.

‘ಶಕ್ತಿ’ ಯೋಜನೆ ಜಾರಿಯಾದ ನಂತರವಂತೂ ಮಹಿಳೆಯರು ಖಾಸಗಿ ಬಸ್‌ ಸಂಚಾರ ಕೈಬಿಟ್ಟು ಇದ್ದಬದ್ದ ಸರ್ಕಾರಿ ಬಸ್‌ಗಳಿಗೇ ಹತ್ತುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ವೃದ್ಧರು ಬಸ್‌ಗಳಲ್ಲಿ ಸಂಚರಿಸುವುದು ದುಸ್ತರವಾಗಿದೆ. ಬೆಳಿಗ್ಗೆ ಹಾಗೂ ಸಂಜೆ ಅವಧಿಯಲ್ಲಿ ಶಾಲೆ– ಕಾಲೇಜಿಗೆ ಪಟ್ಟಣಕ್ಕೆ ಆಗಮಿಸುವ ವಿದ್ಯಾರ್ಥಿಗಳು ಸರ್ಕಾರಿ ಬಸ್‌ಗಳಲ್ಲಿ ಜಾಗ ಸಿಗದೇ ಮತ್ತೊಂದು ಬಸ್‌ಗೆ ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ಇದೆ.

ಶಿರಾಳಕೊಪ್ಪ ಪಟ್ಟಣದಲ್ಲಿರುವ ಡಿಪ್ಲೊಮಾ ಕಾಲೇಜಿಗೆ ತೆರಳಲು ಬೆಳಿಗ್ಗೆ 8.30ಕ್ಕೆ ಹುಬ್ಬಳ್ಳಿ ಬಸ್ ಹೋಗುತ್ತದೆ. ಹುಬ್ಬಳ್ಳಿ ಬಸ್ ನಂತರ 9.30ರ ತನಕ ಬಸ್ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. 9ಕ್ಕೆ ಒಂದು ಬಸ್ ಬಿಡಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ಮತ್ತಿಕೋಟೆ, ಮುಗಳಗೆರೆ, ನಿಂಬೆಗೊಂದಿ ಗ್ರಾಮದಿಂದ ಶಿಕಾರಿಪುರದ ಶಾಲಾ ಕಾಲೇಜಿಗೆ ವಿದ್ಯಾರ್ಥಿಗಳು ಬರಲು ಬೆಳಿಗ್ಗೆ 8.30ಕ್ಕೆ ಗ್ರಾಮದಿಂದ ಬಸ್ ಹೊರಡುತ್ತದೆ. ಈ ಗ್ರಾಮದ ಮಾರ್ಗಕ್ಕೆ ಮತ್ತೊಂದು ಬಸ್ ಅಗತ್ಯವಿದೆ. ಸಂಜೆ ವೇಳೆಗೆ ಗ್ರಾಮಗಳಿಗೆ ತೆರಳಲು ಬಸ್ ಇಲ್ಲ. ಕೊಟ್ಟ, ಕಪ್ಪನಹಳ್ಳಿ, ಶಿವಾಜಿ ಕಣಿಯ, ಹರಗುವಳ್ಳಿ, ಅಮಟೆಕೊಪ್ಪ ಗ್ರಾಮಗಳಿಂದ ಶಿಕಾರಿಪುರಕ್ಕೆ ವಿದ್ಯಾರ್ಥಿಗಳು ಆಗಮಿಸಲು ಇನ್ನೊಂದು ಬಸ್ ಅವಶ್ಯಕತೆ ಇದೆ.

ಶಾಲೆ– ಕಾಲೇಜಿಗೆ ಹೋಗುವ ಸಮಯದಲ್ಲಿ ಬಸ್‌ಗಳು ಕಡಿಮೆ ಇವೆ. ಹೆಚ್ಚಿನ ಸಂಖ್ಯೆಯ ಬಸ್ ಓಡಿಸಲು ಸಂಸ್ಥೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇನ್ನಷ್ಟು ಬಸ್ ಬಿಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಶಾಸಕರು ಗಮನ ಹರಿಸಬೇಕು ಎಂದು ವಿದ್ಯಾರ್ಥಿನಿ ಶಿಲ್ಪಾ, ಶಿಕ್ಷಕಿ ರೇಖಾ ಹಾಗೂ ಪ್ರಯಾಣಿಕರು ಮನವಿ ಮಾಡಿದ್ದಾರೆ.

ಬಿ.ವೈ. ವಿಜಯೇಂದ್ರ
ಬಿ.ವೈ. ವಿಜಯೇಂದ್ರ
ತಾಲ್ಲೂಕಿನಾದ್ಯಂತ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ತೆರಳಲು ಸಮರ್ಪಕ ಬಸ್ ವ್ಯವಸ್ಥೆ ಇಲ್ಲದಿರುವುದು ಗಮನಕ್ಕೆ ಬಂದಿದೆ. ಅಗತ್ಯ ಬಸ್‌ ಒದಗಿಸುವಂತೆ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.
ಬಿ.ವೈ. ವಿಜಯೇಂದ್ರ ಶಾಸಕರು ಶಿಕಾರಿಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT