ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ಬಿಗೆಯ ತೂಗು ಸೇತುವೆಗೆ ನಿರ್ವಹಣೆ ಕೊರತೆ

Last Updated 4 ನವೆಂಬರ್ 2022, 8:13 IST
ಅಕ್ಷರ ಗಾತ್ರ

ಹೊಸನಗರ: ಸಮೀಪದ ಹೆಬ್ಬಿಗೆ ಬಳಿ ಇರುವ ತೂಗು ಸೇತುವೆ ಸೂಕ್ತ ನಿರ್ವಹಣೆ ಇಲ್ಲದೆ ದುರವಸ್ಥೆ ತಲುಪಿದೆ. ಭಾರಿ ಶಬ್ದ ಮಾಡುವ ಈ ಸೇತುವೆ ಅಪಾಯದ ಮುನ್ಸೂಚನೆ ನೀಡುತ್ತಿದೆ. ಇದರಿಂದ ಸಹಜವಾಗಿಯೇ ಜನ ಆತಂಕಕ್ಕೆ ಒಳಗಾಗಿದ್ದಾರೆ.

ಸೇತುವೆ ನಿರ್ಮಾಣಗೊಂಡು ದಶಕವೇ ಕಳೆದಿದಿದ್ದರೂ ಈವರೆಗೆ ದುರಸ್ತಿ ಭಾಗ್ಯ ಕಂಡಿಲ್ಲ. ಕನಿಷ್ಠ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ನಿರ್ವಹಣೆಗೆಂದು ನೀರಾವರಿ ನಿಗಮದಿಂದ ಬಿಡುಗಡೆ ಆದ ₹ 25 ಲಕ್ಷ ಅನುದಾನ ಕೊಳೆಯುತ್ತಿದೆ. ದುರಸ್ತಿ ಕುರಿತು ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ತುಕ್ಕು ಹಿಡಿದ ಕಬ್ಬಿಣದ ಮೇಲೆಯೇ ನಿತ್ಯದ ಓಡಾಟ ಸಾಗಿದೆ.

ಬಹು ವರ್ಷದ ಬೇಡಿಕೆ: ನಿಟ್ಟೂರು, ಹೆಬ್ಬಿಗೆ, ಕೆಪ್ಪಿಗೆ, ಬರುವೆ, ಕಿರೇತೋಡಿ, ಏಳಿಗೆ, ಬೈಲಿಗೆ, ಬಸವನಕಲ್ಲು ಸೇರಿದಂತೆ ಹತ್ತಾರು ಮಜರೆ ಹಳ್ಳಿಗಳ ಜನರ ಹಲವು ದಶಕಗಳ ಹೋರಾಟದ ಫಲವಾಗಿ ಹೆಬ್ಬಿಗೆಭಾಗದ ಹಿನ್ನೀರಿಗೆ ಅಡ್ಡಲಾಗಿ ತೂಗು ಸೇತುವೆಯನ್ನು 2011ರಲ್ಲಿ ನಿರ್ಮಾಣ ಮಾಡಲಾಗಿದೆ.

ಮಲೆನಾಡಿನ ಪಾಲಿಗೆ ವರದಾನವಾದ ಈ ಸೇತುವೆ ಅಂದಾಜು 200 ಮೀಟರ್ ಉದ್ದವಿದ್ದು, ₹ 1.25 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು ದಶಕ ಕಾಲ ಜನರ ಜೀವನಾಡಿಯಾಗಿದೆ. ಮಳೆಗಾಲದಲ್ಲಿ ಸಂಪೂರ್ಣ ಸಂಪರ್ಕ ಕಳೆದುಕೊಳ್ಳುವ ಅದೆಷ್ಟೋ ಗ್ರಾಮಗಳಿಗೆ ತೂಗು ಸೇತುವೆಗಳೇ ಆಧಾರ. ತೂಗುಸೇತುವೆಯನ್ನು ವರ್ಷಕ್ಕೆ ಒಮ್ಮೆ ಆಯಿಲ್, ಗ್ರೀಸ್‌, ಬೋಲ್ಟ್ ನಟ್ ಫಿಟ್ಟಿಂಗ್ ಮಾಡಬೇಕಾಗಿರುವುದು ಅವಶ್ಯ. ಆದರೆ, ಈ ಸೇತುವೆ ನಿರ್ವಹಣೆಯೇ ಇಲ್ಲ.

ಗ್ರೀಸ್ ಕಂಡಿಲ್ಲ: ಸೇತುವೆಯ ಕಬ್ಬಿಣದ ಪರಿಕರಗಳು, ರೋಪ್‌ಗಳು ತುಕ್ಕು ಹಿಡಿಯುತ್ತಿವೆ. ರೋಪ್ ಸಡಿಲಗೊಂಡಿದೆ. ಅಲ್ಲದೆ ತೂಗುಸೇತುವೆಯ ಆಧಾರವಾಗಿರುವ ರೋಪ್‌ಗಳು ಅಳವಡಿಸಿದ ಬಳಿಕ ಗ್ರೀಸ್ ಕಂಡಿಲ್ಲ. ತೂಗು ಸೇತುವೆಯ ಕೆಳಭಾಗದತ್ತ ದೃಷ್ಟಿ ಹಾಯಿಸಿದರೆ ಸೇತುವೆ ಮೇಲೆ ಹೋಗುವ ಧೈರ್ಯ ಬರಲಾಗದು. ಅಷ್ಟೊಂದು ಅಪಾಯಕಾರಿಯಾಗಿದೆ.

ಎಸ್ಆರ್ ದರ ಇಲ್ಲ ಅಂತಾರೆ: ಹೆಬ್ಬಿಗೆ ತೂಗು ಸೇತುವೆಗೆ ನೀರಾವರಿ ನಿಗಮದಿಂದ ಹಣ ಬಿಡುಗಡೆಯಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ. ಆದರೆ, ಟೆಂಡರ್ ಕರೆಯಲು ಅದರ ಎಸ್ಆರ್ ದರ ಇಲ್ಲ. ಹೀಗಾಗಿ ವಿಳಂಬವಾಗುತ್ತಿದೆ. ಹಳೇ ಎಸ್ಆರ್ ದರ, ಎಸ್ಟಿಮೇಟ್ ಸಿಕ್ಕಲ್ಲಿ ದರ ಪುನರಾವರ್ತನೆ ಮಾಡಿಕೊಂಡು ಅನುಮೋದನೆ ಪಡೆಯಲು ಸಹಕಾರಿಯಾಗುತ್ತದೆ. ಬಳಿಕ ಟೆಂಡರ್ ಕರೆಯಬಹುದು ಎಂದು ನೀರಾವರಿ ಇಲಾಖೆ ಮೂಲಗಳು ತಿಳಿಸುತ್ತವೆ.

ಈ ಬಗ್ಗೆ ಮಲೆನಾಡು ಅಭಿವೃದ್ಧಿ ಮಂಡಳಿ ಅಧಿಕಾರಿಗಳು, ಈ ಹಿಂದೆ ಮಂಡಳಿ ಮೂಲಕ ಸುಸಜ್ಜಿತ ತೂಗು ಸೇತುವೆ ನಿರ್ಮಾಣ ಮಾಡಿ ಸ್ಥಳೀಯಾಡಳಿತಕ್ಕೆ ಹಸ್ತಾಂತರ ಮಾಡಲಾಗಿದೆ ಎನ್ನುತ್ತಾರೆ.

***

ಮಳೆ ಗಾಳಿಗೆ ಸೇತುವೆ ತೂಗುತ್ತಿದೆ. ವಿಪರೀತ ಶಬ್ದ ಬರುತ್ತಿದೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಸೇತುವೆ ನೋಡಲು ಬಂದವರು ಅದನ್ನು ತೂಗಿಸುತ್ತಾರೆ. ಒಮ್ಮೊಮ್ಮೆ ಅಲ್ಲೇ ಮೋಜುಮಸ್ತಿ ಮಾಡುತ್ತಾರೆ. ಇದರಿಂದ ಓಡಾಟಕ್ಕೆ ಕಿರಿ ಕಿರಿ ಆಗುತ್ತಿದೆ.

ಸತ್ಯಮೂರ್ತಿ ಹೆಗಡೆ, ನಿಟ್ಟೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT