ಸೋಮವಾರ, ಜುಲೈ 4, 2022
24 °C
ಆನಂದಪುರ ಸಮೀಪದ ಇರುವಕ್ಕಿ ಗ್ರಾಮ

ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ವಿರುದ್ಧ ಭೂಮಿ ಒತ್ತುವರಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನಂದಪುರ: ಇಲ್ಲಿಗೆ ಸಮೀಪದ ಇರುವಕ್ಕಿ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾಲಯದ ಇಬ್ಬರು ಪ್ರೊಫೆಸರ್‌ಗಳು ಭೂ ಕಬಳಿಕೆಯಲ್ಲಿ ತೊಡಗಿರುವ ಆರೋಪ ಕೇಳಿಬಂದಿದೆ.

ಇರುವಕ್ಕಿಯ ಶಿವಪ್ಪನಾಯಕ ಕೃಷಿ ವಿಶ್ವವಿದ್ಯಾಲಯದ ಆಡಳಿತ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪ್ರೊಫೆಸರ್ ಗಣಪತಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಮೋಹನ್ ನಾಯ್ಕ್ ಅವರು ಇರುವಕ್ಕಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿಯಲ್ಲಿ ತೊಡಗಿಕೊಂಡಿದ್ದಾರೆ.

ಸ್ಥಳೀಯರಲ್ಲದ ಇವರು ಇಲ್ಲಿ ತಲಾ 3 ಎಕರೆ ಭೂಮಿ ಖರೀದಿಸಿದ್ದು, ಈಗ 2 ಪಟ್ಟು ಹೆಚ್ಚಿಗೆ ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದಾರೆ.

ಬೆಲೆಬಾಳುವ ಮರಗಳ ನಾಶ: ಒತ್ತುವರಿ ಜೊತೆಗೆ ಬೆಲೆಬಾಳುವ ಮರಗಳನ್ನು ಸಹ ನಾಶಪಡಿಸಿದ್ದಾರೆ. ಈ ಹಿಂದೆಯೇ ಮರ ಕಡಿತದ ವಿಷಯವಾಗಿ ಕೇಸು ದಾಖಲಾಗಿತ್ತು. ಅದು ಬಗೆಹರಿಯುವ ಮುನ್ನವೇ ಮತ್ತೆ ಮರ ಕಡಿತದಲ್ಲಿ ತೊಡಗಿದ್ದಾಗ ಭೂ ಒತ್ತುವರಿ ವಿಷಯ ಬೆಳಕಿಗೆ ಬಂದಿದೆ. ಜೆಸಿಬಿ ಯಂತ್ರದ ಮೂಲಕ ಜಾಗ ಸ್ವಚ್ಛ ಮಾಡುವಾಗ ಸ್ಥಳೀಯರ ಮಾಹಿತಿ ಮೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣ ದಾಖಲು: ಮರ ಕಡಿತದ ವಿಷಯವಾಗಿ ಈ ಹಿಂದೆಯೂ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗ ಮತ್ತೆ ಮರ ಕಡಿತಲೆ ಮಾಡಿದ್ದಾರೆ. ಈ ಭೂಮಿ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಕಂದಾಯ ಇಲಾಖೆಗೆ ಸೇರಿದೆ. ಮರ ಕಡಿತದ ವಿಷಯವಾಗಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತನಿಖೆಗೆ ಸ್ಥಳೀಯರ ಆಗ್ರಹ: ‘ವಿಶ್ವವಿದ್ಯಾಲಯದ ಅಧಿಕಾರಿಗಳು ರಸ್ತೆಯನ್ನೂ ಬಿಡದೆ ಬೇಲಿ ಹಾಕುತ್ತಿದ್ದಾರೆ. ಆದರೆ, ಈ ವಿಷಯವಾಗಿ ಸಂಬಂಧಪಟ್ಟ ಅಧಿಕಾರಿಗಳು ಮೌನ ವಹಿಸಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮುಂದುವರಿದ ವಿವಾದ: ಇರುವಕ್ಕಿಯಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಶಂಕು ಸ್ಥಾಪನೆ ಆದ ದಿನದಿಂದ ಸೂಕ್ತ ಗಡಿ ಗುರುತಿಸುವಲ್ಲಿ ವಿಳಂಬ ಆಗಿರುವುದೇ ರೈತರ ಹಾಗೂ ಅಧಿಕಾರಿಗಳ ನಡುವೆ ವಿವಾದಕ್ಕೆ ಕಾರಣವಾಗಿದೆ. ಗಡಿ ಗುರುತಿಸದ ಕಾರಣ ಹೊಸದಾಗಿ ಒತ್ತುವರಿ ಮಾಡುವ ಪ್ರಕ್ರಿಯೆ ಮುಂದುವರಿದಿದೆ. ಇದರಿಂದ ರೈತರು ಹಾಗೂ ಅಧಿಕಾರಿಗಳು ನಿರಂತರ ಕಿತ್ತಾಟದಲ್ಲಿ ತೊಡಗಿದ್ದಾರೆ. ಅಧಿಕಾರಿಗಳು ಬೇಲಿ ಹಾಕಲು ಹೋದರೆ ಜನಪ್ರತಿನಿಧಿಗಳು ಬಂದು ಬೇಲಿ ಕಿಳಿಸುವುದು ಮುಂದುವರಿದಿದ್ದು, ಗಡಿ ಗುರುತಿಸುವುದು ವಿಳಂಬವಾಗುತ್ತಿದೆ. ತಕ್ಷಣ ಸೂಕ್ತ ಗಡಿ ಗುರುತಿಸದಿದ್ದರೆ ವಿಶ್ವವಿದ್ಯಾಲಯದ 777 ಎಕರೆ ಜಾಗ ಉಳಿಸಿಕೊಳ್ಳುವುದು ಅಸಾಧ್ಯವಾಗುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.