ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಧಿಕ ಇಳುವರಿ, ಆದಾಯದ ಮೋಹಕ್ಕೆ ಭೂಮಿಯ ಸತ್ವ ನಾಶ

ಕನ್ನಡ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಕಳವಳ
Published : 21 ಸೆಪ್ಟೆಂಬರ್ 2024, 15:42 IST
Last Updated : 21 ಸೆಪ್ಟೆಂಬರ್ 2024, 15:42 IST
ಫಾಲೋ ಮಾಡಿ
Comments

ಆನಂದಪುರ: ಬಹುರಾಷ್ಟ್ರೀಯ ಕಂಪನಿಗಳ ಆಕರ್ಷಣೆ, ಅಧಿಕ ಆದಾಯ, ಇಳುವರಿಯ ಮೋಹದಿಂದ ರೈತರು ಭೂಮಿಯ ಜೈವಿಕ ಸತ್ವಗುಣಗಳನ್ನು ನಾಶಮಾಡುತ್ತಿದ್ದಾರೆ ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.

ಸಮೀಪದ ಇರುವಕ್ಕಿಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ 12ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪಾರಂಪಾರಿಕಾ ಕೃಷಿ ಜೀವ, ನಿಸರ್ಗ ವಿರೋಧಿಯಲ್ಲ. ನಿಸರ್ಗಕ್ಕೆ ಪೂರಕವಾಗಿ ಕಟ್ಟಿಕೊಂಡ ವ್ಯವಸಾಯ ಸಂಸ್ಕೃತಿ. ಆದರೆ ಪ್ರಸ್ತುತ ಆಧುನೀಕರಣ ಹಾಗೂ ಜಾಗತೀಕರಣ ಎನ್ನುವುದು ವರದಾನವಾಗುತ್ತದಯೋ ಇಲ್ಲವೇ ಸಾವಿನ ರೂಪದಲ್ಲಿ ಬರುತ್ತದೆಯೋ ಎಂಬುದನ್ನು ಅತ್ಯಂತ ವಿವೇಚನೆಯಿಂದ ಸ್ವೀ‌ಕರಿಸಬೇಕು. ಇಲ್ಲವಾದಲ್ಲಿ ಭೂಮಿಯ ಋತು ಚಕ್ರಕ್ಕೆ ಮಾರಕವಾಗುವುದರಲ್ಲಿ ಸಂಶಯವಿಲ್ಲ ಎಂದು ಎಚ್ಚರಿಸಿದರು.

‘ಪಾರಂಪರಿಕ ಕೃಷಿಯಲ್ಲಿ ಆಯಾ ಭೌಗೋಳಿಕ ಪ್ರದೇಶಗಳಿಗೆ ಅನುಗುಣವಾಗಿ ಹೊಂದಿಕೊಳ್ಳುವಂತಹ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಆದರೆ ಇಂದು ಅಧಿಕ ಇಳುವರಿ, ಆದಾಯದ ಮೋಹದಿಂದಾಗಿ ಮಲೆನಾಡಿನಲ್ಲಿ ಬೆಳೆಯಬೇಕಾದ ಅಡಿಕೆ ಬಯಲುಸಿಮೆಯತ್ತ ಮುಖಮಾಡಿದೆ. ಒಂದೆಡೆ ಬೆಳೆಯ ಅದಲು ಬದಲು, ಇನ್ನೊಂದೆಡೆ ಭೂಮಿಗೆ ಮಿತಿ ಮೀರಿದ ಔಷಧಗಳ ಬಳಕೆಯಿಂದ ಭೂಮಿಯನ್ನು ಬರಡಾಗಿಸುತ್ತಿದ್ದೇವೆ’ ಎಂದು ಹೇಳಿದರು.

ದಕ್ಷಿಣ ಆಪ್ರಿಕಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ನೀರಿನ ಹಾಹಾಕಾರ ಉಂಟಾಗಿದೆ. ಭೂಮಿಯ ತಾಪಮಾನ ಹೆಚ್ಚಳಕ್ಕೆ ನೈಸರ್ಗಿಕ ಕಾರಣವೋ ಅಥವಾ ಮನುಷ್ಯ ಭೂಮಿಯ ಮೇಲೆ ಮಾಡುವ ಅತ್ಯಾಚಾರ ಕಾರಣವೇ ಎಂಬುವುದನ್ನು ವಿಜ್ಞಾನಿಗಳು ಮನಗಂಡು ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಆರ್.ಸಿ. ಜಗದೀಶ್, ‘ನಮ್ಮ ವಿಶ್ವವಿದ್ಯಾಲಯ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿದೇಶ ಹಾಗೂ ಹೊರರಾಜ್ಯಗಳ ವಿದ್ಯಾರ್ಥಿಗಳಿಂದ ಪ್ರವೇಶಾತಿಗೆ ಬೇಡಿಕೆ ಬರುತ್ತಿದೆ. ಮುಂದಿನ ದಿನಗಳಲ್ಲಿ ಹೊಸ ಹೊಸ ತಾಂತ್ರಿಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಕೆಲಸ ಮಾಡಲಾಗುತ್ತದೆ’ ಎಂದು ಹೇಳಿದರು.

ಕಾಂತರಾಜ್ ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಎಚ್.ಕೆ. ವೀರಣ್ಣ ಅವರಿಗೆ ಅತ್ಯುತ್ತಮ ಸಂಶೋಧನಾ ವಿಜ್ಞಾನಿ, ರುದ್ರೇಗೌಡಗೆ ಅತ್ಯುತ್ತಮ ವಿಸ್ತರಣಾ ವಿಜ್ಞಾನಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ತರಿಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್, ಕುಲಸಚಿವ ಕೆ.ಸಿ. ಶಶಿಧರ್, ವ್ಯವಸ್ಥಾಪನಾ ಮಂಡಳಿ ಸದಸ್ಯ ಬಸವರಾಜ ಪಿ.ಕೆ., ಶಿಕ್ಷಣ ನಿರ್ದೇಶಕರಾದ ಬಿ.ಹೇಮ್ಲಾನಾಯ್ಕ, ದುಶ್ಯಂತ್ ಕುಮಾರ್, ನಾರಾಯಣ ಎಸ್., ಬಿ.ಕೆ.ಶಿವಣ್ಣ, ಶ್ರೀನಿವಾಸ್, ಡಿ.ತಿಪ್ಪೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT