ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಕ್ರೀಡಾ ತರಬೇತಿ ಕೇಂದ್ರಕ್ಕೆ ಆಯನೂರು ಬಳಿ ಭೂಮಿ: ಎಂ.ಗುರುಮೂರ್ತಿ

2013ರಲ್ಲೇ ಸರ್ಕಾರದಿಂದ 50 ಎಕರೆ ಮಂಜೂರು, ಸಹ್ಯಾದ್ರಿ ಕಾಲೇಜು ಹಳೇ ವಿದ್ಯಾರ್ಥಿಗಳ ಮಾಹಿತಿ
Last Updated 19 ಜೂನ್ 2021, 10:53 IST
ಅಕ್ಷರ ಗಾತ್ರ

ಶಿವಮೊಗ್ಗ: ಸಹ್ಯಾದ್ರಿ ಕಾಲೇಜು ಆವರಣದಲ್ಲಿ ವಿಶೇಷ ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ. 2013ರಲ್ಲಿ ಮೀಸಲಿಟ್ಟಿರುವ ಆಯನೂರು ಸರ್ವೆ ನಂಬರ್ 129ರಲ್ಲಿನ 50 ಎಕರೆ ಜಾಗಕ್ಕೆ ಸ್ಥಳಾಂತರಿಸಬೇಕು ಎಂದು ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ.ಗುರುಮೂರ್ತಿ ಆಗ್ರಹಿಸಿದರು.

ರಾಜ್ಯ ಸರ್ಕಾರ, ಜಿಲ್ಲಾಡಳಿತ ಜನರನ್ನು ಮೂರ್ಖರನ್ನಾಗಿಸಲು ಹೊರಟಿವೆ. ಹಿಂದೆ ವಿಶೇಷ ಕ್ರೀಡಾಂಗಣ ಸ್ಥಾಪನೆಗೆ ಮಾಜಿ ಶಾಸಕ ಕುಮಾರಸ್ವಾಮಿ ವಿರೋಧಿಸಿದ್ದರು. ಸರ್ಕಾರಕ್ಕೆ ಪತ್ರ ಬರೆದಿದ್ದರು. ನಂತರ ಆಯನೂರು ಸರ್ವೆ ನಂಬರ್ 129ರಲ್ಲಿನ 50 ಎಕರೆ ಜಾಗ ಮೀಸಲಿಡಲಾಗಿತ್ತು. ಅಲ್ಲಿಗೆ ಸ್ಥಾಳಾಂತರಿಸಬೇಕು. ವಿದ್ಯಾರ್ಥಿ ವಿರೋಧಿ ನೀತಿ ಕೈಬಿಡಬೇಕು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಪ್ರಗತಿಪರರು, ವಿವಿಧ ಸಂಘಟನೆಗಳು, ಹಳೆಯ ವಿದ್ಯಾರ್ಥಿಗಳು, ಹೊಸ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ನಿರಂತರ ಹೋರಾಟ ನಡೆದಿದೆ. ಆದರೂ, ಸಹ್ಯಾದ್ರಿ ಕಾಲೇಜು ಆವರಣವನ್ನೇ ಆಯ್ಕೆ ಮಾಡಲಾಗಿದೆ. ಇದರ ವಿರುದ್ಧ ತೀವ್ರ ಹೋರಾಟ ನಡೆಸುತ್ತೇವೆ ಎಂದು ವಿದ್ಯಾರ್ಥಿಗಳಾದ ವಿನಯ್ ಕಳಸ, ಅಭಿನಂದನ್, ವಿಧಾತ್ರಿ, ಯೋಗೀಶ್, ಅಭಿಗೌಡ, ಅಭಿಲಾಷ್, ಸಾಗರ್ ವಿರಾಜ್, ಅಭಿನಂದನ್, ವಿಜಯ್‌ ಎಚ್ಚರಿಸಿದರು.

ಅಂದಿನ ಮೈಸೂರು ಅರಸ ಜಯಚಾಮರಾಜೇಂದ್ರ ಒಡೆಯರ್ 1940ರಲ್ಲಿ 100 ಎಕರೆ ಜಾಗ ನೀಡಿದ್ದರು. ಅದು ಈಗ ಒತ್ತುವರಿಯಾಗಿ ಕೇವಲ 76 ಎಕರೆ ಉಳಿದುಕೊಂಡಿದೆ. ಈ ಜಾಗದಲ್ಲೂ 3 ಪ್ರತ್ಯೇಕ ಕಾಲೇಜುಗಳು ನಡೆಯುತ್ತಿವೆ. ಸುಮಾರು 6,500 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಸ್ನಾತಕೋತ್ತರ ವಿಭಾಗ ತೆರೆಯಲಾಗಿದೆ. ಈಗಿರುವ ಜಾಗ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಸಾಲುತ್ತಿಲ್ಲ. ಹಾಗಾಗಿ, ಖೇಲೋ ಇಂಡಿಯಾ ಅಥವಾ ಸಾಯ್‌ ಸಂಸ್ಥೆಗಳಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಈಗಿರುವ ಜಾಗದಲ್ಲೇ ವಿದ್ಯಾರ್ಥಿನಿಯರ ಹಾಸ್ಟೆಲ್, ಗ್ರಾಂಥಾಲಯ, ಕ್ರೀಡಾಂಗಣ, ಪ್ರಯೋಗಾಲಯ, ಆಡಿಟೋರಿಯಂ ಸೇರಿದಂತೆ ಹಲವು ಸೌಲಭ್ಯಗಳು ಬೇಕಾಗುತ್ತದೆ. ಇಂತಹ ಸ್ಥಿತಿ ಸಹ್ಯಾದ್ರಿ ಕಾಲೇಜಿಗಿರುವಾಗ ಮತ್ತೆ 18 ಎಕರೆ ವಿಶೇಷ ಕ್ರೀಡಾ ತರಬೇತಿ ಕೇಂದ್ರಕ್ಕೆ ಬಿಟ್ಟುಕೊಡಲು ಸಾಧ್ಯವಿಲ್ಲ. ಹೋರಾಟಗಾರರು ವಿಶೇಷ ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ಬೇಡ ಎಂಬುದಷ್ಟೆ ವಾದ. ಇದನ್ನು ಮೀರಿ ಜಿಲ್ಲಾಡಳಿತ, ಸಂಸದ, ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲಿಯೇ ಸ್ಥಾಪಿಸಲು ಮುಂದಾದರೆ ಸುಮ್ಮನಿರುವುದಿಲ್ಲ ಎಂದರು.

ವಕೀಲ ಕೆ.ಪಿ.ಶ್ರೀಪಾಲ್ ಮಾತನಾಡಿ, ಜಿಲ್ಲಾಧಿಕಾರಿಗಳು ಸಭೆ ಕರೆದಾಗ ಎಲ್ಲಾ ವಿಷಯ ಕೂಲಕಂಷವಾಗಿ ತಿಳಿಸಿದ್ದೇವೆ. ಅವರು ಕೇಳುವ ಸ್ಥಿತಿಯಲ್ಲಿಲ್ಲ. ಈಗಾಗಲೇ 18 ಎಕರೆಯನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಲು ಪತ್ರ ಬರೆದಿದ್ದಾರೆ. ಒಳಗೊಳಗೆ ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಸಣ್ಣರಾಮ, ಅಣ್ಣಾ ಹಜಾರೆ ಹೋರಾಟ ಸಮಿತಿ ಮುಖಂಡ ಅಶೋಕ್ ಯಾಧವ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT