ಶುಕ್ರವಾರ, ಅಕ್ಟೋಬರ್ 22, 2021
29 °C
ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಸಚಿವ ಕೆ.ಎಸ್‌. ಈಶ್ವರಪ್ಪ

ಹಿರಿಯರನ್ನು ಗೌರವಿಸುವ ಸಂಸ್ಕೃತಿ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸಮಾಜದಲ್ಲಿ ಹಿರಿಯ ನಾಗರಿಕರನ್ನು ಗೌರವಿಸುವುದು ಭಾರತ ಸಂಸ್ಕೃತಿ ಪರಂಪರೆಯ ಪ್ರತೀಕ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಇಲ್ಲಿನ ಗಾನಯೋಗಿ ಪಂಚಾಕ್ಷರಿ ಗವಾಯಿ ಅವರ ಪುಣ್ಯಾಶ್ರಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ  ವಿವಿಧ ಸಂಸ್ಥೆಗಳು ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆಲ್ಲ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು ಎಂದು ಕೂಡು ಕುಟುಂಬ ಇರುತ್ತಿತ್ತು. ಈಗ ಆಧುನಿಕತೆಯಿಂದ ತಂದೆ–ತಾಯಿಗಳು ಒಂದು ಕಡೆ ಮಕ್ಕಳು ಬಂದು ಕಡೆ ಬೆಳೆಯುತ್ತಿದ್ದಾರೆ. ಮಕ್ಕಳನ್ನು ಹೊತ್ತು, ಹೆತ್ತು ಸಾಕಿದ ತಂದೆ–ತಾಯಿಗಳಿಗೆ ಕೊನೆಗಾಲದಲ್ಲಿ ಮಕ್ಕಳ ಆಶ್ರಯ ಸಿಗದೆ, ಆಶ್ರಮದಲ್ಲಿ ಕಾಲ ಕಳೆಯುವ ಸಂಸ್ಕೃತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಿರಿಯರು ದಾರಿ ತಪ್ಪಿ ನಡೆದಾಗ ಅವರಿಗೆ ಮಾರ್ಗದರ್ಶನ ನೀಡುವ ಹಿರಿತನ, ಅನುಭವ ಹೊಂದಿರುವ ಹಿರಿಯರನ್ನು ಗೌರವಿಸಬೇಕಾದುದು ಯುವಪೀಳಿಗೆಯ ಕರ್ತವ್ಯ. ಹಿರಿಯ ಅನುಭವ ಕಿರಿಯರ ಜ್ಞಾನ ಸೇರಿದರೆ ಮಾತ್ರ ಸುಂದರ ಸಮಾಜ ನಿರ್ಮಾಣಗೊಳ್ಳಲು ಸಾಧ್ಯ ಎಂದರು.

ದೇವರಿಗೆ ತೋರುವಷ್ಟೇ ಶ್ರದ್ಧೆ, ಭಕ್ತಿ, ಪ್ರೀತಿ, ಮಮಕಾರವನ್ನು ಹೆತ್ತ ತಂದೆ, ತಾಯಿಗೂ ಕೊಡಬೇಕು. ತಂದೆ, ತಾಯಿಯನ್ನು ಬೀದಿಪಾಲು ಮಾಡಬಾರದು. ಯಾರು ತಂದೆ ತಾಯಿಯನ್ನು ಪ್ರೀತಿಯಿಂದ ಕಾಣುತ್ತಾರೋ ಅವರು ಜೀವನದಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಸಲಹೆ ನೀಡಿದರು.

ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಹಿರಿಯ ನಾಗರಿಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್. ಹೊನ್ನಳ್ಳಿ, ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶಿಲ್ಪಾ ದೊಡ್ಮನಿ, ಗಂಗೀಬಾಯಿ, ಪಂಡಿತ್‌ ಆರ್.ಬಿ. ಸಂಗಮೇಶ್ವರ ಗವಾಯಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು