ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠಿಣ ಲಾಕ್‌ಡೌನ್: ಮೊದಲ ದಿನ ಸಂಪೂರ್ಣ ಯಶಸ್ವಿ

ನೂರಾರು ವಾಹನಗಳ ವಶ, ಕೆಲವರಿಗೆ ಲಾಠಿ ರುಚಿ, ಅನಗತ್ಯ ಕಿರಿಕಿರಿ, ವಾಗ್ವಾದ
Last Updated 10 ಮೇ 2021, 14:01 IST
ಅಕ್ಷರ ಗಾತ್ರ

ಶಿವಮೊಗ್ಗ: ಅನಗತ್ಯವಾಗಿ ರಸ್ತೆಗಿಳಿದ ಭಾರಿ ಸಂಖ್ಯೆಯ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದರು. ಕೆಲವೆಡೆ ಬೈಕ್‌ ಸವಾರರ ಮೇಲೆ ಲಾಠಿ ಬೀಸಿದ ಪ್ರಕರಣಗಳೂ ವರದಿಯಾಗಿವೆ. ಸೊಪ್ಪು, ತರಕಾರಿ ಮಾರಾಟ ಮಾಡಲು ಬಂದ ರೈತರ ವಾಹನಗಳನ್ನೂ ವಶಕ್ಕೆ ಪಡೆದ ಆರೋಪಗಳು ಕೇಳಿ ಬಂದವು. ಮಾತಿನ ಚಕಮಕಿ, ವಾಗ್ವಾದಗಳು ನಡೆದಿವೆ. ಕೆಲವು ಕಡೆ ಅಗತ್ಯ ವಸ್ತುಗಳಿಗಾಗಿ ಜನರು ಪರದಾಟ ನಡೆಸಿದ್ದಾರೆ.

–ಇದು ಸೋಮವಾರ ಆರಂಭವಾದ 14 ದಿನಗಳ ಕೊರೊನಾ ಲಾಕ್‌ಡೌನ್‌ನ ಮೊದಲ ದಿನದ ಕಠಿಣ ನಿರ್ಬಂಧಗಳ ಚಿತ್ರಣ.

ಇದೇ ಮೊದಲ ಬಾರಿ ಅತ್ಯಂತ ಪ್ರಯಾಸಪಟ್ಟು ಜಿಲ್ಲಾಡಳಿತ, ಜಿಲ್ಲಾ ಪೊಲೀಸರು ವಾಹನಗಳ ಸಂಚಾರ, ಜನಜಂಗುಳಿ ತಡೆಯುವಲ್ಲಿ ಯಶ ಕಂಡರು. ಹಲವು ಭಾಗಗಳಲ್ಲಿ ಸಾರ್ವಜನಿಕರೂ ಸ್ವಯಂ ಪ್ರೇರಿತರಾಗಿ ಮನೆಯ ಒಳಗೇ ಇದ್ದು ಲಾಕ್‌ಡೌನ್‌ಗೆ ಸಹಕಾರ ನೀಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್, ಹೆಚ್ಚುವರಿ ಎಸ್‌ಪಿ ಶೇಖರ್ ಸ್ವತಃ ಬೀದಿಗಿಳಿದು ಪರಿಸ್ಥಿತಿ ಅವಲೋಕಿಸಿದರು.

ತರಕಾರಿ ಮಾರಾಟ, ಖರೀದಿಗೂ ನಿರಾಸಕ್ತಿ:

ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಸಗಟು ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಚಿಲ್ಲರೆ ತರಕಾರಿ ವ್ಯಾಪಾರಿಗಳಿಗೆ ನಗರದ ಹಲವೆಡೆ ಅವಕಾಶ ಕಲ್ಪಿಸಲಾಗಿತ್ತು. ವಿನೋಬನಗರದ ಶಿವಾಲಯದ ಹತ್ತಿರ, ಕಾಶಿಪುರದ ಕೇಂಬ್ರಿಡ್ಜ್ ಶಾಲೆ ಬಳಿ, ನವುಲೆ ಕ್ರೀಡಾಂಗಣದ ಪ್ರದೇಶ ದ್ವಾರದ ಬಳಿ, ಖಾಸಗಿ ಬಸ್ ನಿಲ್ದಾಣದ ಒಳಗೆ, ತುಂಗಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದಿನ ಬಯಲಿನಲ್ಲಿ, ಬಿ.ಎಚ್. ರಸ್ತೆ ಸೈನ್ಸ್ ಮೈದಾನದಲ್ಲಿ ಬೆಳಗ್ಗೆ 6ರಿಂದ 10ರವರೆಗೆ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಮಾರಾಟ ಮಾಡುವವರು, ಖರೀದಿಸುವವರೂ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಇದ್ದರು.

ಇದಕ್ಕೆ ವ್ಯತಿರಿಕ್ತವಾಗಿ ದಿನಸಿ, ಮದ್ಯದಂಗಡಿಗಳಲ್ಲಿ ಜನ ಸಂದಣಿ ಕಂಡುಬಂತು. ಜನರು ಸರದಿಯಲ್ಲಿ ನಿಂತು ದಿನಸಿ, ಮದ್ಯ ಖರೀದಿಸಿದರು. ನ್ಯಾಯಬೆಲೆ ಅಂಗಡಿ, ಔಷಧ ಅಂಗಡಿಗಳ ಬಳಿಯೂ ಜನ ಸಂದಣಿ ಇತ್ತು.

ಬಿಗಿ ತಪಾಸಣೆ: ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ 31 ಚೆಕ್‌ಪೋಸ್ಟ್‌ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 76 ಚೆಕ್‌ಪೋಸ್ಟ್‌ಗಳನ್ನು ತೆರೆದು ಜಿಲ್ಲೆ ಪ್ರವೇಶಿಸುವ, ನಗರದಲ್ಲಿ ಅನಗತ್ಯ ಸಂಚರಿಸುವ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿದರು. ನಿತ್ಯದ ಸನ್ನಿವೇಶಕ್ಕೆ ಹೋಲಿಸಿದರೆ ರಸ್ತೆಗಿಳಿದ ವಾಹನಗಳ ಸಂಖ್ಯೆ ಶೇ 10ಕ್ಕಿಂತ ಕಡಿಮೆ ಇತ್ತು. ಇಂತಹ ಸನ್ನಿವೇಶದಲ್ಲೂ ನೂರಾರು ವಾಹನಗಳನ್ನು ವಶಕ್ಕೆ ಪಡೆದರು.

ವಾಗ್ವಾದ, ಲಾಠಿ ರುಚಿ:

ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6ರಿಂದ 10ರವರೆಗೆ ಅವಕಾಶ ಇದ್ದರೂ, ಪೊಲೀಸರು ವಾಹನಗಳಲ್ಲಿ ತೆರಳುವುದಕ್ಕೆ ಸಂಪೂರ್ಣ ಕಡಿವಾಣ ಹಾಕಿದರು. ಇದರಿಂದ ತರಕಾರಿ ಮತ್ತಿತರ ಅಗತ್ಯ ಸಾಮಗ್ರಿ ಮಾರಾಟ ಮಾಡಿ, ಮನೆಗೆ ತೆರಳುತ್ತಿದ್ದ ರೈತರು, ವರ್ತಕರು ಸಾಕಷ್ಟು ಕಿರಿಕಿರಿ ಅನುಭವಿಸಿದರು.

ಎಪಿಎಂಸಿ, ಗಾಂಧಿಬಜಾರ್‌ನ ಸಗಟು ಮಳಿಗೆಗಳಿಂದ ಚಿಲ್ಲರೆ ವ್ಯಾಪಾರಕ್ಕೆ ಬೇಕಾದ ಸಾಮಗ್ರಿ ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದ ಆಟೊರಿಕ್ಷಾಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಲವು ಪ್ರದೇಶಗಳಲ್ಲಿ ಸಾಮಗ್ರಿಯನ್ನು ಇಳಿಸಿ, ವಾಪಸ್‌ ಬರುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಇಂತಹ ಕ್ರಮ ಹಲವೆಡೆ ವಾಗ್ವಾದಕ್ಕೆ ಕಾರಣವಾಗಿತ್ತು. ಬ್ಯಾಂಕ್‌ಗಳು ತೆರೆದಿದ್ದರೂ ತುರ್ತು ವ್ಯವಹಾರಕ್ಕೆ ಹೋಗುವ, ಕೃಷಿ ಕೆಲಸ, ಊಟ, ಔಷಧ ತೆಗೆದುಕೊಳ್ಳಲು ಬಂದವರೂ ಸಂಕಷ್ಟ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT