ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನವಟ್ಟಿ| ಕಾರ್ಯಕರ್ತರನ್ನು ಪ್ರೀತಿ, ವಿಶ್ವಾಸದಿಂದ ಕಾಣುವ ಮಧು ಬಂಗಾರಪ್ಪ

ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಸದಾನಂದ ಗೌಡ ಪಾಟೀಲ್ ಹೇಳಿಕೆ
Last Updated 27 ಫೆಬ್ರುವರಿ 2023, 5:19 IST
ಅಕ್ಷರ ಗಾತ್ರ

ಆನವಟ್ಟಿ: ‘ಎಲ್ಲ ಜಾತಿ, ಧರ್ಮದವರನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ಕಾಣುವ ಜೊತೆಗೆ ತಾಲ್ಲೂಕು ಅಭಿವೃದ್ಧಿ ಬಗ್ಗೆ ಕಾಳಜಿ ಇರುವ ಮಧು ಬಂಗಾರಪ್ಪ ಅವರನ್ನು ಬರುವ ಚುನಾವಣೆಯಲ್ಲಿ ಗೆಲ್ಲಿಸುವುದು ನಮ್ಮ ಗುರಿ’ ಎಂದು ಕಾಂಗ್ರೆಸ್‌ನ ಆನವಟ್ಟಿ ಬ್ಲಾಕ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸದಾನಂದ ಬಿ. ಪಾಟೀಲ್ ಹೇಳಿದರು.

ಶನಿವಾರ ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬ್ಲಾಕ್ ಕಾಂಗ್ರೆಸ್ ಪಕ್ಷದ ಪದಗ್ರಹಣ ಸಮಾರಂಭ ಹಾಗೂ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಸೊರಬ ತಾಲ್ಲೂಕಿನ ಕಟ್ಟ ಕಡೆಯ ಹಳ್ಳಿ ಹಾಗೂ ಕಾರ್ಯಕರ್ತರನ್ನು ಗುರುತಿಸಿ ಅಧಿಕಾರ ನೀಡುವ ಜೊತೆಗೆ ಗಡಿ ಗ್ರಾಮಗಳನ್ನು ಮುಖ್ಯ ವೇದಿಕೆಗೆ ತರುವ ಹೃದಯವಂತಿಕೆ ಮಧು ಬಂಗಾರಪ್ಪ ಅವರಲ್ಲಿ ಮಾತ್ರ ಕಾಣಲು ಸಾಧ್ಯ’ ಎಂದ ಅವರು, ‘ಸೋತಾಗಲೂ ಕಾರ್ಯಕರ್ತರ ಮೇಲಿನ ನಂಬಿಕೆ, ವಿಶ್ವಾಸ ಕಡಿಮೆ ಮಾಡದೆ. ಪ್ರೀತಿಯಿಂದ ನಡೆಸಿಕೊಂಡರು’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ 7ನೇ ಬಾರಿ ಭೇಟಿ ನೀಡುತ್ತಿದ್ದಾರೆ ಎಂದರೆ, ಕರ್ನಾಟಕದಲ್ಲಿ ಬಿಜೆಪಿ ಪರ ಒಲವು ಕ್ಷೀಣಿಸಿದೆ. ಕಾಂಗ್ರೆಸ್ ಪಕ್ಷದ ಮೇಲೆ ಜನರ ಒಲವು ಹೆಚ್ಚಿದೆ. ನನಗೆ ಬ್ಲಾಕ್ ಅಧ್ಯಕ್ಷ ಹುದ್ದೆ ನೀಡಿರಬಹುದು. ನಿಜವಾದ ಪಕ್ಷದ ಬಲವಿರುವುದು ಕಾರ್ಯಕರ್ತರಲ್ಲಿ. ಪರಸ್ಪರ ಸಂಘಟಿತರಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮವಹಿಸಿ ದುಡಿಯೋಣ’ ಎಂದು ಸಲಹೆ ನೀಡಿದರು.

‘ರಾಜ್ಯ, ರಾಷ್ಟ್ರಮಟ್ಟದಲ್ಲಿ ಬಂಗಾರಪ್ಪ ಅವರ ಹೆಸರು ರಾರಾಜಿಸುತ್ತಿದೆ ಎಂದರೆ ಅದು ತಾಲ್ಲೂಕಿನ ಮತದಾರರ ಕೊಡುಗೆ. ರಾಜ್ಯದ ರೈತರ, ಬಡವರ, ಕೂಲಿ– ಕಾರ್ಮಿಕರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಜಾರಿಗೆ ತಂದರು. ಈ ಮೂಲಕ ಸೊರಬದ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದರು. ಅವರ ಅಶೀರ್ವಾದ ಹಾಗೂ ಜನರ ಪ್ರೀತಿ ವಿಶ್ವಾಸ ನನ್ನ ಮೇಲೆ ಇರುವುದರಿಂದ ಕಾಂಗ್ರೆಸ್ ಪ್ರಮುಖ ಹುದ್ದೆಗಳನ್ನು ನೀಡಿದೆ. ನಾನು ಏನೇ ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದರೂ ಅದಕ್ಕೆ ಕಾರಣ ಕ್ಷೇತ್ರದ ಜನರು. ನನಗೆ ಜಾತ್ಯತೀತವಾಗಿ ಬೆಂಬಲ ನೀಡುತ್ತಿರುವುದು ನನ್ನ ಪುಣ್ಯ’ ಎಂದು ಕೆಪಿಸಿಸಿ ರಾಜ್ಯ ಒಬಿಸಿ ಘಟಕದ ಅಧ್ಯಕ್ಷ ಎಸ್. ಮಧು ಬಂಗಾರಪ್ಪ ತಿಳಿಸಿದರು.

ಯಡಿಯೂರಪ್ಪಗೆ ಮೋಸ ಮಾಡಿದ ಕುಮಾರ್: ‘ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಹೆಸರು ಹೇಳಿಕೊಂಡು ಗೆಲುವು ಪಡೆದ ಕುಮಾರ್ ಬಂಗಾರಪ್ಪ ಅವರು ಯಡಿಯೂರಪ್ಪ ಅವರಿಗೆ ಮೋಸ ಮಾಡಿದರು. ನೊಂದ ಬಿಜೆಪಿ ಕಾರ್ಯಕರ್ತರು ಬೀದಿಗೆ ಬಂದು ನಮೋ ವೇದಿಕೆ ಕಟ್ಟಿಕೊಂಡಿದ್ದಾರೆ. ಗೆಲುವಿಗೆ ಶ್ರಮಿಸಿರುವ ಕಾರ್ಯಕರ್ತರನ್ನೇ ಹೊರಹಾಕಿದ ಶಾಸಕರಿಂದ ಕ್ಷೇತ್ರದ ಸಾಮಾನ್ಯ ಜನರ ಕಷ್ಟಕ್ಕೆ ಪರಿಹಾರ ಸಿಗಲು ಸಾಧ್ಯವಿಲ್ಲ’ ಎಂದು ಲೇವಡಿ ಮಾಡಿದರು.

ಪದಗ್ರಹಣ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಆರ್.ಸಿ.ಪಾಟೀಲ್, ಹಿರಿಯ ಮುಖಂಡ ಚೌಟಿ ಚಂದ್ರಶೇಖರ್ ಪಾಟೀಲ್, ಸೊರಬ ಬ್ಲಾಕ್ ಅಧ್ಯಕ್ಷ ಅಣ್ಣಪ್ಪ, ಮುಖಂಡರಾದ ಕೆ.ಪಿ. ರುದ್ರಗೌಡ, ಗಣಪತಿ, ಶಿವಲಿಂಗೇಗೌಡ, ವೀರೇಶ್ ಕೂಟಗಿ, ರಾಜಶೇಖರ್ ಕುಪ್ಪಗಡ್ಡೆ, ಶಿವಪುತ್ರಪ್ಪ, ಎಂ.ಡಿ.ಶೇಖರ್, ಜಯಶೀಲಪ್ಪ, ಲೋಲಾಕ್ಷಮ್ಮ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT