ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಪರ ಮಲೆನಾಡು ಮಠಾಧೀಶರ ಧ್ವನಿ

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರೇ ಇಡಲು ಒತ್ತಾಯ
Last Updated 1 ಮೇ 2022, 6:21 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರದ ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಹೆಸರನ್ನೇ ಇಡುವಂತೆ ಮಲೆನಾಡು ಮಠಾಧೀಶರರು ಒತ್ತಾಯಿಸಿದ್ದಾರೆ.

ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರು ಇಡುವ ಕುರಿತು ಇಲ್ಲಿನ ಬೆಕ್ಕಿನ ಕಲ್ಮಠದ ಸಭಾಂಗಣದಲ್ಲಿ ಆನಂದಪುರದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳ ನೇತೃತ್ವದಲ್ಲಿ ಶನಿವಾರ ಸಭೆ ನಡೆಯಿತು.

ವಿಮಾನ ನಿಲ್ದಾಣದ ರೂವಾರಿಯೇ ಬಿ.ಎಸ್. ಯಡಿಯೂರಪ್ಪ. ಅವರು ಸಿಎಂ ಆಗಿದ್ದಾಗ ಹಲವು ಜನಪರ ಯೋಜನೆಗಳನ್ನು ರಾಜ್ಯಕ್ಕೆ ಕೊಟ್ಟಿದ್ದಾರೆ. ಯಡಿಯೂರಪ್ಪ ಅವರಿಗೆ ಗೌರವ ಸಲ್ಲಿಸಲು ಸರ್ಕಾರ ಅವರ ಹೆಸರನ್ನೇ ಇಡಬೇಕು. ಯಡಿಯೂರಪ್ಪ ಅವರು ಪತ್ರ ಬರೆದು, ತಮ್ಮ ಹೆಸರು ಇಡುವುದು ಬೇಡ ಎಂದಿದ್ದರೂ ಅವರ ಹೆಸರು ಬದಲು ಬೇರೆಯವರ ಹೆಸರು ಇಡಬಾರದು ಎಂದು ಮಠಾಧೀಶರು ಒತ್ತಾಯಿಸಿದ್ದಾರೆ.

‘ವ್ಯಕ್ತಿ ಬದುಕಿರುವಾಗಲೇ ಯಾವುದೇ ಯೋಜನೆಗೆ ಅವರ ಹೆಸರು ನಾಮಕರಣ ಮಾಡುವುದು ಸರಿಯಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಸರ್.ಎಂ. ವಿಶ್ವೇಶ್ವರಯ್ಯ ಬದುಕಿರುವಾಗಲೇ ಯೋಜನೆಯೊಂದಕ್ಕೆ ಅವರ ಹೆಸರು ಇಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಕ್ರೀಡಾಂಗಣಕ್ಕೆ ನಾಮಕರಣ ಮಾಡಲಾಗಿದೆ. ಈಗ ಬಿಎಸ್‍ವೈ ಹೆಸರು ನಾಮಕರಣಕ್ಕೆ ಹಿಂಜರಿಕೆ ಬೇಡ’ ಎಂದು ಬೆಕ್ಕಿನಕಲ್ಮಠದ ಶ್ರೀಗಳು ಹೇಳಿದರು.

‘ಯಡಿಯೂರಪ್ಪನವರನ್ನು ಕೇವಲ ರಾಜಕಾರಣಿ ಎಂದಷ್ಟೇ ಕರೆಯಲು ಸಾಧ್ಯವಿಲ್ಲ. ರಾಜಕಾರಣಿಗಳು ಮುಂದಿನಚುನಾವಣೆಯನ್ನು ಗೆಲ್ಲುವುದು ಹೇಗೆ ಎಂಬ ಚಿಂತನೆಗಷ್ಟೇ ಸೀಮಿತವಾಗಿರುತ್ತಾರೆ. ಆದರೆ, ಯಡಿಯೂರಪ್ಪ, ಮುಂದಿನ ಪೀಳಿಗೆಯವರೂ ಇಂತಹಮುತ್ಸದ್ಧಿಯನ್ನು ನೆನಪಿನಲ್ಲಿಟ್ಟಕೊಳ್ಳುವಂತಹ ಕಾರ್ಯ ಮಾಡಿದ್ದಾರೆ. ಸಾಮಾನ್ಯ ವ್ಯಕ್ತಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗುವುದೆಂದರೆ ಸುಮ್ಮನೆಯ ಮಾತಲ್ಲ. ಇದಕ್ಕೆ ಅವರ ಧಾರ್ಮಿಕ ನಂಬಿಕೆ, ದೈವಭಕ್ತಿ, ಜನಸೇವೆ, ಅಭಿವೃದ್ಧಿಯೇ ಕಾರಣ ಎಂದುಗೋಣಿಬೀಡು ಶೀಲಸಂಪಾದನ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

‘ಯಡಿಯೂರಪ್ಪಅವರು ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿದಾಗ ವಿಮಾನ ನಿಲ್ದಾಣಕ್ಕೆ ಅವರ ಹೆಸರು ನಾಮಕರಣ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದುವೀರಶೈವ ಸೇವಾ ಸಮಾಜದ ಅಧ್ಯಕ್ಷಎನ್.ಜೆ. ರಾಜಶೇಖರ್ ಹೇಳಿದರು.

‌ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನು ನಾಮಕರಣ ಮಾಡುವ ನಿರ್ಧಾರದಿಂದ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಸಿ. ಮಹೇಶ್‌ಮೂರ್ತಿ ಒತ್ತಾಯಿಸಿದರು.

ಬಿಳಕಿ ಮಠದ ರಾಚೋಟೇಶ್ವರ ಸ್ವಾಮೀಜಿ, ಜಡೆ ಮಠದ ಮಹಾಂತ ಸ್ವಾಮೀಜಿ, ಹಾರ್ನಹಳ್ಳಿ ಚೌಕಿ ಮಠದ ನೀಲಕಂಠ ಸ್ವಾಮೀಜಿ, ಶಾಂತಪುರದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಕಲ್ಮಠ ಗುತ್ತಲದ ಪ್ರಭು ಸ್ವಾಮೀಜಿ, ಶಿರಾಳಕೊಪ್ಪ ವಿರಕ್ತಮಠದ ಸಿದ್ದೇಶ್ವರ ಸ್ವಾಮೀಜಿ, ತೊಗರ್ಸಿ ಪಂಚವಣ್ಣಿಗೆ ಮಠದ ಚನ್ನವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ವೀರಶೈವ ಸಮಾಜದ ಪ್ರಮುಖರಾದ ಎಂ.ಆರ್. ಪ್ರಕಾಶ್, ಪ್ರೊ.ಕಿರಣ ದೇಸಾಯಿ, ಎನ್.ಎಸ್. ಕುಮಾರ್, ಪಿ.ರುದ್ರೇಶ್‍ , ವಿಶ್ವಾಸ್, ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಬಳ್ಳೇಕೆರೆ ಸಂತೋಷ್, ಬಿಜೆಪಿ ಮುಖಂಡ ಮಾಲತೇಶ್, ಪ್ರಮುಖರಾದ ಕರಿಬಸವಯ್ಯ, ರೇಣುಕಾರಾಧ್ಯ ಇದ್ದರು.

***

ಯಡಿಯೂರಪ್ಪನವರನ್ನು ಕೇವಲ ರಾಜಕಾರಣಿ ಎಂದಷ್ಟೇ ಕರೆಯಲು ಸಾಧ್ಯವಿಲ್ಲ. ಅವರು ಮುತ್ಸದ್ಧಿ. ಯಡಿಯೂರಪ್ಪ ಕೇವಲ ಹೆಸರಲ್ಲ, ಅದೊಂದು ಬ್ರ್ಯಾಂಡ್‌.

- ಸಿದ್ಧಲಿಂಗ ಸ್ವಾಮೀಜಿ, ಗೋಣಿಬೀಡು ಶೀಲಸಂಪಾದನ ಮಠ

***

ಹೆಸರು ನಾಮಕರಣ ಮಾಡುವ ಸಂಬಂಧ ಕೇಳಿ ಬರುತ್ತಿರುವ ಒತ್ತಾಯಕ್ಕೆ ಜಾತಿ ಬಣ್ಣ ಲೇಪಿಸುವುದು ಸರಿಯಲ್ಲ. ಅವರು ಎಲ್ಲ ಜಾತಿಗೂ ಬೇಕಾದವರು.

- ಎನ್.ಜೆ. ರಾಜಶೇಖರ್, ಅಧ್ಯಕ್ಷ, ವೀರಶೈವ ಸೇವಾ ಸಮಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT