ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾಹವೆಂಬುದು ಪವಿತ್ರ ಜೀವನ ಪದ್ಧತಿ: ನಿರ್ಮಲಾನಂದ ಸ್ವಾಮೀಜಿ

ಒಕ್ಕಲಿಗ ವಧು–ವರರ ಸಮಾವೇಶದಲ್ಲಿ ನಿರ್ಮಲಾನಂದ ಸ್ವಾಮೀಜಿ
Last Updated 9 ನವೆಂಬರ್ 2021, 6:40 IST
ಅಕ್ಷರ ಗಾತ್ರ

ಶಿವಮೊಗ್ಗ: ಎಲ್ಲ ಆಶ್ರಮಗಳಿಗಿಂತ ಗೃಹಸ್ಥಾಶ್ರಮ ಶ್ರೇಷ್ಠ. ವಿವಾಹ ಎಂಬುದು ಕೇವಲ ಎರಡು ದೇಹಗಳ ಸಮ್ಮಿಲನ ಅಲ್ಲ. ಅದು ಎರಡು ಹೃದಯ ಬೆಸೆಯುವ ಪವಿತ್ರ ಜೀವನ ಪದ್ಧತಿ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ನಿರ್ಮಲಾನಂದ ಸ್ವಾಮೀಜಿ ಹೇಳಿದರು.

ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶಾಖಾ ಮಠದ 31ನೇ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಒಕ್ಕಲಿಗ ವಧು–ವರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಯುವಕ- ಯುವತಿಯರು ಹಣ, ಆಸ್ತಿ ಸಂಪತ್ತನ್ನು ನೋಡದೆ ಹಿರಿಯರು ನೋಡಿದವರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಸಾರದಲ್ಲಿ ಪತಿ, ಪತ್ನಿಯರಲ್ಲಿ ಹೊಂದಾಣಿಕೆ ಬಹಳ ಮುಖ್ಯ. ಮದುವೆ ಎನ್ನುವುದು ವಿಧಿಲಿಖಿತ. ಅದನ್ನು ಹೊಂದಾಣಿಕೆಯಿಂದ ಮುನ್ನಡೆಸಿಕೊಂಡು ಹೋಗುವುದು ದಂಪತಿಯ ಕರ್ತವ್ಯ. ಸಾಂಸಾರಿಕ ಜೀವನದಲ್ಲಿ ಏಳು–ಬೀಳುಗಳು, ಸವಾಲುಗಳು ಸಹಜ. ಆದರಿಂದ ಮಾನಸಿಕವಾಗಿ ಕುಗ್ಗದೆ ಹಿರಿಯರ ಮಾರ್ಗದರ್ಶನದಲ್ಲಿ ಸರಿದೂಗಿಸಿಕೊಂಡು ಹೋಗುವುದು ಬಹಳ ಮುಖ್ಯ ಎಂದರು.

ರಾಜ್ಯ ಒಕ್ಕಲಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ‘ಮೊದಲ ಬಾರಿಗೆ ಬಿ.ಎಸ್. ಯಡಿಯೂರಪ್ಪ ಅವರು ಸಮಾಜದ ಗುರುಗಳು ಮಾಡಿದ ಒಂದೇ ವಿನಂತಿಗೆ ಒಕ್ಕಲಿಗ ಅಭಿವೃದ್ಧಿ ನಿಗಮ ಮಂಜೂರು ಮಾಡಿ, ಬಜೆಟ್‌ನಲ್ಲಿ ₹ 500 ಕೋಟಿ ಮೀಸಲಿಟ್ಟರು. ಇನ್ನಿತರ ಸಮಾಜದವರು ಅಭಿವೃದ್ಧಿ ನಿಗಮಕ್ಕಾಗಿ ಹೋರಾಡುತ್ತಿದ್ದಾರೆ. ಆದರೆ, ನಿರ್ಮಲಾನಂದ ಶ್ರೀಗಳ ಮೇಲಿನ ಗೌರವದಿಂದ ಯಡಿಯೂರಪ್ಪ ಅವರು ತಕ್ಷಣಕ್ಕೆ ಸ್ಪಂದಿಸಿದರು’ ಎಂದು ಸ್ಮರಿಸಿದರು.

‘ಮೊದಲ ಕಂತಿನ ಹಣ ಬಿಡುಗಡೆಯಾದ ತಕ್ಷಣ ಗುರುಗಳ ಮಾರ್ಗದರ್ಶನದಲ್ಲಿ ಸಮಾಜದ ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗೆ ಅನುದಾನ ವಿನಿಯೋಗಿಸಲಾಗುವುದು. ಪ್ರಾರಂಭದಲ್ಲೇ ಗುರುಗಳು ನನ್ನನ್ನು ಕರೆಯಿಸಿ ನೀನು ನಿಗಮದ ಮೊದಲ ಅಧ್ಯಕ್ಷನಾಗಿದ್ದೀಯಾ, ಎಷ್ಟು ಗಟ್ಟಿಯಾಗಿ ಅಡಿಪಾಯ ಹಾಕುತ್ತೀಯಾ ಸಮಾಜ ಅಷ್ಟು ಗಟ್ಟಿಯಾಗುತ್ತಾ ಹೋಗುತ್ತದೆ ಎಂದು ತಿಳಿಸಿದ್ದಾರೆ. ಸಮಾಜದ ಬಡ ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್, ಉನ್ನತ ಶಿಕ್ಷಣಕ್ಕೆ ನೆರವು, ಅಪೂರ್ಣಗೊಂಡ ಸಮುದಾಯ ಭವನಗಳ ಕಾಮಗಾರಿ ಪೂರ್ಣಗೊಳಿಸುವುದು ನನ್ನ ಗುರಿ’ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಮಠದ ಸಾಮಾಜಿಕ ಸೇವೆ ಮತ್ತು ನಡೆದು ಬಂದ ಹಾದಿಯ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಸಮಾಜದ ಅನೇಕ ಪ್ರಮುಖರನ್ನು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮನಿಸಲಾಯಿತು.

ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿ, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಮಠದ ನಿರ್ದೇಶಕ ಮತ್ತು ಲೆಕ್ಕ ಪರಿಶೋಧಕ ಡಾ.ದೇವರಾಜ್, ರಮೇಶ್ ಹೆಗ್ಡೆ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT