ಶಿವಮೊಗ್ಗ: ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ರೈಲು ಮಾರ್ಗ ನಿರ್ಮಾಣದ ಭೂಸ್ವಾಧೀನ ಪ್ರಕ್ರಿಯೆಯನ್ನು 2 ತಿಂಗಳೊಳಗೆ ಪೂರ್ಣಗೊಳಿಸಲು 645 ಎಕರೆ ಭೂಮಿಯನ್ನು ರೈಲ್ವೆ ಇಲಾಖೆಗೆ ನೀಡುವಂತೆ ಹಾವೇರಿ ಜಿಲ್ಲಾಧಿಕಾರಿಗೆ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಶಿವಮೊಗ್ಗ ಜಿಲ್ಲೆಯ ರೈಲ್ವೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ–ಶಿಕಾರಿಪುರ ನಡುವೆ ರೈಲು ಮಾರ್ಗ ನಿರ್ಮಾಣಕ್ಕೆ ₹ 995 ಕೋಟಿ ಅನುದಾನ ಬೇಕಾಗುತ್ತದೆ. ಮೊದಲ ಹಂತದ ಕಾಮಗಾರಿಯನ್ನು 2026ಕ್ಕೆ ಪೂರ್ಣಗೊಳಿಸಲಾಗುವುದು. ನಂತರ 56 ಕಿ.ಮೀ. ಅಂತರದ ಶಿಕಾರಿಪುರ–ರಾಣೆಬೆನ್ನೂರು ಮಾರ್ಗದ ಕಾಮಗಾರಿ ನಡೆಯಲಿದೆ. ಇದಕ್ಕೆ ₹ 150 ಕೋಟಿ ಮೀಸಲಿಡಲಾಗಿದೆ ಎಂದರು.
ಶಿವಮೊಗ್ಗ–ಹಾವೇರಿ–ದಾವಣೆಗೆರೆ ರೈಲು ಸಂಪರ್ಕದ ಚಿಂತನೆ ನಡೆದಿದೆ. ಬೀರೂರು–ಶಿವಮೊಗ್ಗ ಮಾಙರ್ಗದ ಡಬ್ಲಿಂಗ್ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ಕಾಮಗಾರಿ ಆರಂಭಿಸಲು ಶೇ 90ರಷ್ಟು ಭೂಮಿ ನೀಡಿದಾಗ ಮಾತ್ರ ಆರಂಭಿಸಲು ಸಾಧ್ಯವಾಗುತ್ತದೆ ಎಂದರು.
ಅಮೃತ್ ಭಾರತ್ ಯೋಜನೆಯಡಿ ಶಿವಮೊಗ್ಗ, ತಾಳಗುಪ್ಪ ಮತ್ತು ಸಾಗರ ರೈಲು ನಿಲ್ದಾಣಗಳ ಸ್ಥಳವನ್ನು ಆಯ್ಕೆ ಮಾಡಿ ಅಭಿವೃದ್ಧಿಗೆ ₹ 80 ಕೋಟಿ ಅನುದಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗ ರೈಲು ನಿಲ್ದಾಣಕ್ಕೆ ಅಂದಾಜು ₹ 20 ಕೋಟಿ ಅನುದಾನ ನೀಡಲಾಗುವುದು. ಶಿವಮೊಗ್ಗದ ಮೂರು ಕಡೆ ರೈಲ್ವೆ ಮೇಲ್ಸೆತುವೆ ಅಭಿವೃದ್ದಿಗೆ ₹ 2 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಹಾರನಹಳ್ಳಿ ನಿಲ್ದಾಣದ ಅಭಿವೃದ್ದಿಗೆ ₹ 1.85 ಕೋಟಿ ಮಂಜೂರಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ 169 ಎಕರೆ ಭೂಸ್ವಾಧೀನ ಪ್ರಕ್ರಿಯೇ ಪೂರ್ಣಗೊಂಡಿದೆ. 80 ಎಕರೆ ಸ್ವಾಧೀನವನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾಹಿತಿ ನೀಡಿದರು.
ಸುಮಾರು 600ಕ್ಕೂ ಅಧಿಕ ಎಕರೆ ಜಮೀನು ಸ್ವಾಧೀನ ನಡೆಯುತ್ತಿದೆ. 21 ಗ್ರಾಮಗಳ ರೈತರಿಂದ ಭೂಮಿ ಸ್ವಾಧೀನ ಮಾಡಲಾಗುತ್ತಿದೆ. ಈಗಾಗಲೇ 5 ಗ್ರಾಮಗಳ ರೈತರ ಭೂಮಿ ಸ್ವಾಧೀನ ಕಾರ್ಯ ಚಾಲನೆಯಲ್ಲಿದೆ ಎಂದು ಹಾವೇರಿಯ ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಕೆಐಎಡಿಬಿ ಅಧಿಕಾರಿಗಳು ಹೇಳಿದರು.
ಯಶವಂತಪುರ– ಶಿವಮೊಗ್ಗ ನಡುವೆ ನಿತ್ಯ ರೈಲು ಸಂಚರಿಸಬೇಕು, ಕುಂಸಿ ನಿಲ್ದಾಣವನ್ನು ಮೇಲ್ದರ್ಜೇಗೆ ಏರಿಸಬೇಕು. ಭದ್ರಾವತಿ ಬಳಿಯ ಕಡದಕಟ್ಟೆ ಬಳಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕು. ಮೇಲ್ಸೇತುವೆಗಳನ್ನು ಅಭಿವೃದ್ಧಿಪಡಿಸಬೇಕು. ಶಿವಮೊಗ್ಗ- ರೇಣಿಗುಂಟಾ- ಚೆನ್ನೈ ಮಾರ್ಗ ಕುರಿತು ಗಮನ ಹರಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಸಚಿವರನ್ನು ಕೋರಿದರು.
ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ಮಾರ್ಗದ ಭೂ ಸ್ವಾಧೀನ ಪ್ರಕ್ರಿಯೇ ಕೆಐಎಡಿಬಿ ಅಧಿಕಾರಿಗಳು ಬಹಳ ವಿಳಂಬ ಮಾಡುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಶಾರದಾ ಪೂರ್ಯಾ ನಾಯ್ಕ್, ಡಾ. ಧನಂಜಯ ಸರ್ಜಿ, ಭಾರತಿ ಶೆಟ್ಟಿ, ಬಲ್ಕಿಷ್ ಬಾನು, ಡಿ.ಎಸ್. ಅರುಣ್, ರೈಲ್ವೆ ಅಧಿಕಾರಿಗಳಾದ ಅರವಿಂದ ಶ್ರೀವಾತ್ಸವ್, ಎಸ್.ಪಿ.ಶಾಸ್ತ್ರಿ. ಅಜಯ್ ಶರ್ಮಾ, ಆಶಾ ಇದ್ದರು.
- ಸರ್ಕುಲರ್ ರೈಲ್ವೆ ನಿರ್ಮಾಣ
ಶಿವಮೊಗ್ಗ: ಬೆಂಗಳೂರಿನಲ್ಲಿ ಸರ್ಕುಲರ್ ರೈಲ್ವೆ ಮಾಡಲಾಗುವುದು. ಇದರ ಜತೆಗೆ ಸಬರ್‌ಬನ್ 4 ಪ್ಯಾಕೇಜ್‌ಗಳನ್ನು 2022ರಲ್ಲಿ ಘೋಷಣೆ ಮಾಡಲಾಗಿದೆ. ಈಗ ಪ್ಯಾಕೇಜ್ ನಂಬರ್ 2 ಮತ್ತು 4 ಕಾಮಗಾರಿ ಮಾಡುವ ಮೂಲಕ 72 ಕೀ.ಮಿ. ಕಾಮಗಾರಿ ಮಾಡಲಾಗುವುದು. ಉಳಿದ ಕಾಮಗಾರಿಯನ್ನು ಸರ್ಕುಲರ್ ರೈಲ್ವೆ ಕಾಮಗಾರಿ ಜತೆಗೆ ಸೇರಿಸಲಾಗುವುದು. ಕೊಂಕಣ ರೈಲ್ವೆಯನ್ನು ರೈಲ್ವೆ ಬೋಡ್೯ಗೆ ತರಲು ಪ್ರಯತ್ನ ನಡೆಯುತ್ತಿದ್ದು ಡಿಸೆಂಬರ್ ಒಳಗೆ ಮಾಡಲಾಗುವುದು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು. ಸಚಿವರ ಪರವಾಗಿ ಮನವಿ ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ರೈಲ್ವೆ ಮಾರ್ಗವನ್ನು ಶಿವಮೊಗ್ಗ–ಶಿಕಾರಿಪುರ–ಆನವಟ್ಟಿ–ಶಿರಾಳಕೊಪ್ಪ ಮಾರ್ಗವಾಗಿ ರಾಣೆಬೆನ್ನೂರಿಗೆ ನಿರ್ಮಿಸಿದರೆ ಅನುಕೂಲವಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಅವರು ಬರೆದಿರುವ ಪತ್ರವನ್ನು ಸಚಿವರ ಪರವಾಗಿ ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ಅವರು ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.