ಭಾನುವಾರ, ಜೂನ್ 26, 2022
22 °C
ಸೊರಬ ತಾಲ್ಲೂಕಿನ ಬಸ್ತಿಕೊಪ್ಪ ಕ್ವಾರಿಗೆ ವಿ.ಆರ್. ಶಾಸ್ತ್ರಿ ನೇತೃತ್ವದ ತಂಡ ಭೇಟಿ

ಗಣಿಗಾರಿಕೆ ಕಂಪನದ ತೀವ್ರತೆ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೊರಬ: ತಾಲ್ಲೂಕಿನ ಬಸ್ತಿಕೊಪ್ಪ ಗ್ರಾಮದ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ನಿಯಮ ಮೀರಿ ಸ್ಫೋಟಕಗಳನ್ನು ಬಳಸುತ್ತಿರುವ ಕುರಿತು ಸುರತ್ಕಲ್‍ನ ಎನ್‌ಐಟಿಕೆ ಗಣಿಗಾರಿಕೆ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ವಿ.ಆರ್. ಶಾಸ್ತ್ರಿ ನೇತೃತ್ವದ ತಂಡ ಸೋಮವಾರ ಪರಿಶೀಲನೆ ನಡೆಸಿತು.

ಬಸ್ತಿಕೊಪ್ಪ ಗಣಿಗಾರಿಕೆ ಪ್ರದೇಶದಲ್ಲಿ ಭಾರಿ ಸ್ಫೋಟಕಗಳನ್ನು ಬಳಸಿ ಕಲ್ಲನ್ನು ಒಡೆಯಲಾಗುತ್ತಿದೆ. ಸ್ಫೋಟದ ಸಮಯದಲ್ಲಿ ಹೊರಹೊಮ್ಮುವ ಕರ್ಕಶ ಶಬ್ದಕ್ಕೆ ಜನರ ಬದುಕು, ನೆಮ್ಮದಿ ಹಾಳಾಗುತ್ತಿದೆ. ಭಾರಿ ಗಾತ್ರದ ಕಲ್ಲು ಹಾಗೂ ದೂಳು ಮಿಶ್ರಿತ ಸಣ್ಣ ಕಲ್ಲುಗಳು ಗ್ರಾಮದಲ್ಲಿ ವ್ಯಾಪಿಸುತ್ತಿವೆ. ಮಹಿಳೆಯರು, ಮಕ್ಕಳು ಹಾಗೂ ವೃದ್ಧರಲ್ಲಿ ಕಾಯಿಲೆಗಳು ಉಲ್ಬಣಿಸಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿ, ಶಾಶ್ವತವಾಗಿ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು.

ಗ್ರಾಮಸ್ಥರ ಮನವಿ ಮೇರೆಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಹಿರಿಯ ಭೂ ವಿಜ್ಞಾನಿ ಪಿ.ಎಸ್. ನವೀನ್ ಸ್ಥಳಕ್ಕೆ ಭೇಟಿ ನೀಡಿದ್ದರು. ಗಣಿಗಾರಿಕೆಯಲ್ಲಿ ಬಳಸುತ್ತಿರುವ ಸ್ಫೋಟಕಗಳಿಂದ ಜನಜೀವನದ ಮೇಲೆ ಆಗುತ್ತಿರುವ ಪರಿಣಾಮ, ಗಣಿಗಾರಿಕೆ ಸ್ಥಳದಿಂದ ಕಲ್ಲುಗಳು ಎಷ್ಟು ದೂರದ ವ್ಯಾಪ್ತಿಯಲ್ಲಿ ಬೀಳುತ್ತಿವೆ ಎನ್ನುವ ಕುರಿತು ತಜ್ಞರಿಂದ ವರದಿ ಪಡೆದ ನಂತರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅದರಂತೆ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಗ್ರಾಮಸ್ಥರ ಮನವಿ ಆಲಿಸಿದ ನಂತರ ಮಾತನಾಡಿದ ವಿ.ಆರ್. ಶಾಸ್ತ್ರಿ, ‘ಗಣಿಗಾರಿಕೆ ಸ್ಥಳದಿಂದ ಸಿಡಿಯುತ್ತಿರುವ ಕಲ್ಲು ತಾಂತ್ರಿಕವಾಗಿ ಎಷ್ಟು ಪ್ರಮಾಣದಲ್ಲಿ ಕಂಪನ ಉಂಟು ಮಾಡುತ್ತದೆ ಎನ್ನುವ ಬಗ್ಗೆ ಎರಡು ದಿನಗಳಲ್ಲಿ, ನಾಲ್ಕು ಹಂತಗಳಲ್ಲಿ ಪರಿಶೀಲನೆ ನಡೆಸಲಾಗುವುದು. ದೂಳು ಮಿಶ್ರಿತ ಕಲ್ಲು ಬಸ್ತಿಕೊಪ್ಪ ಸುತ್ತಮುತ್ತ ವಾಸವಾಗಿರುವ ಜನರ ಆರೋಗ್ಯದ ಮೇಲೆ ಉಂಟುಮಾಡುತ್ತಿರುವ ಪರಿಣಾಮದ ಬಗ್ಗೆ, ಗಣಿಗಾರಿಕೆ ಸ್ಥಳದ ಸ್ಫೋಟದಿಂದ 100 ಮೀಟರ್ ಹಾಗೂ ಗರಿಷ್ಠ 400 ಮೀಟರ್ ವ್ಯಾಪ್ತಿಯಲ್ಲಿ ಉಂಟಾಗುವ ಕಂಪನದ ತೀವ್ರತೆಯ ಬಗ್ಗೆ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಭೂ ವಿಜ್ಞಾನಿಗಳಾದ ಪಿ.ಎಸ್. ನವೀನ್, ಮಾನಸಾ, ವಿದ್ಯಾ, ಕಲ್ಪವೃಕ್ಷ ಆಂದೋಲನಾ ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ವಲಯ ಅರಣ್ಯಾಧಿಕಾರಿಗಳು, ಕಂದಾಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು