ಮೈಸೂರು ದಸರಾ: ಮುಜರಾಯಿ ದೇವರಿಗಷ್ಟೇ ಪ್ರವೇಶ -ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ಈ ಬಾರಿಯ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಜರಾಯಿ ದೇವಸ್ಥಾನದ ದೇವರುಗಳಿಗಷ್ಟೇ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರಪಾಲಿಕೆ ಸಭಾಂಗಣದಲ್ಲಿ ಬುಧವಾರ ದಸರಾ ಆಚರಣೆ ಕುರಿತು ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಹಳೇಜೈಲು ಮೈದಾನದಲ್ಲಿ ನಡೆಯುವ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಖಾಸಗಿ ದೇವಾಲಯಗಳ ದೇವರನ್ನು ಕರೆ ತರಲು ಅವಕಾಶವಿಲ್ಲ. ಮುಜರಾಯಿ ದೇವರನ್ನು ಕರೆ ತರುವ ಸಮಯದಲ್ಲಿ ಮೆರವಣಿಗೆ ಇರುವುದಿಲ್ಲ. ಸಾಂಕೇತಿಕವಾಗಿ ಬನ್ನಿ ಮಂಟಪಕ್ಕೆ ತಂದು ವಿಧಿ ವಿಧಾನ ಪೂರೈಸಲು ಅವಕಾಶ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೊರೊನಾ ಎಲ್ಲೆಡೆ ತೀವ್ರವಾಗಿ ಹರಡುತ್ತಿದೆ. ಪ್ರೀತಿಪಾತ್ರರಾದ ಹಲವರನ್ನು ಕಳೆದುಕೊಂಡಿದ್ದೇವೆ. ಜನರನ್ನು ಒಂದೆಡೆ ಸೇರಿಸಬಾರದು. ಅದಕ್ಕಾಗಿ ಈ ಬಾರಿ ಸರಳವಾಗಿ ದಸರಾ ಆಚರಿಸಲಾಗುವುದು. ಸಾರ್ವಜನಿಕರು ಮನೆಗಳಲ್ಲೇ ದಸರಾ ಆಚರಿಸಬೇಕು. ತಾವೂ ಸಹ ಈ ಬಾರಿಯ ಅಂಬುಛೇದನ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದರು.
ದಸರಾ ವೇಳೆ ಶಿವಮೊಗ್ಗ ನಗದ ಎಲ್ಲೆಡೆ ಗರಿಷ್ಠ ಅಲಂಕಾರ ಮಾಡಬೇಕು. ದಸರಾ ಆಚರಣೆಯ ಕಾರ್ಯಕ್ರಮಗಳನ್ನು ಟಿ.ವಿ, ಇಂಟರ್‌ನೆಟ್ ಮೂಲಕ ನೇರ ಪ್ರಸಾರ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.