ಶನಿವಾರ, ಆಗಸ್ಟ್ 13, 2022
27 °C
‌ಅಧಿಕಾರಿಗಳಿಗೆ ಇಂಧನ ಸಚಿವ ವಿ.ಸುನಿಲ್‌ಕುಮಾರ್ ಸೂಚನೆ

ವಿದ್ಯುದಾಗಾರಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ: ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಗಲ್: ನಾಡಿಗೆ ಬೆಳಕು ನೀಡುವಲ್ಲಿ ಮುಖ್ಯ ಪಾತ್ರ ವಹಿಸಿರುವ ಶರಾವತಿ ಕಣಿವೆ ಯೋಜನಾ ಪ್ರದೇಶದ ವಿದ್ಯುದಾಗಾರಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಉನ್ನತ ಮಟ್ಟದಲ್ಲಿರಿಸಬೇಕು ಎಂದು ಇಂಧನ ಸಚಿವ ವಿ.ಸುನಿಲ್‌ಕುಮಾರ್ ತಿಳಿಸಿದರು.

ಇಲ್ಲಿಗೆ ಸಮೀಪದ ಜೋಗದ ಕೆಪಿಸಿ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಅವರು ಮಾತನಾಡಿದರು.

‘ಜಲ ವಿದ್ಯುದಾಗಾರಗಳಿಂದ ಅತ್ಯಂತ ಕಡಿಮೆ ದರದಲ್ಲಿ ವಿದ್ಯುತ್ ಉತ್ಪಾದನೆ ಸಾಧ್ಯವಾಗಿದೆ. ಅತ್ಯಂತ ಎಚ್ಚರವಾಗಿ ನಿರ್ವಹಣೆ ಮಾಡುವ ಜವಾಬ್ದಾರಿ ಕಾರ್ಮಿಕ ವರ್ಗ ಮತ್ತು ಅಧಿಕಾರಿಗಳಿಗಿದೆ. ಇಲಾಖೆಗೆ ಸಂಬಂಧಪಟ್ಟ ಕುಂದುಕೊರತೆಗಳ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡಿ ಸರಿಪಡಿಸಲಾಗುವುದು’ ಎಂದು ತಿಳಿಸಿದರು.

ಸ್ಥಳೀಯ ಪಟ್ಟಣ ಪಂಚಾಯಿತಿಗೆ ಪಾವತಿಸಬೇಕಾದ ₹ 2 ಕೋಟಿ ತೆರಿಗೆಯನ್ನು ಕೆಪಿಸಿ ಬಾಕಿ ಉಳಿಸಿರುವ ಕ್ರಮ ಸರಿಯಲ್ಲ. ಈ ಬಗ್ಗೆ ತಾಂತ್ರಿಕ ತೊಂದರೆಗಳು ಇದ್ದಲ್ಲಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿ ಸರಿಪಡಿಸಲಾಗುವುದು. ಮುಳುಗಡೆ ಸಂತ್ರಸ್ತರಿಗೆ ಆಸ್ಪತ್ರೆ, ಶಾಲೆ, ಬಸ್, ಕುಡಿಯುವ ನೀರು ಇನ್ನಿತರೆ ಸೌಲಭ್ಯಗಳನ್ನು ಕೆಪಿಸಿ ಮುಂದುವರಿಸಬೇಕು. ಈ ವಿಚಾರದಲ್ಲಿ ಕೆಲವೊಂದು ಅಧಿಕಾರಿಗಳು ಅಸಡ್ಡೆ ತೋರುತ್ತಿರುವುದು ಗಮನಕ್ಕೆ ಬಂದಿದೆ. ಈ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಸರಿಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.

‘ಕೆಪಿಸಿಯ ನಿರುಪಯುಕ್ತವಾಗಿ ಉಳಿದಿರುವ ವಸತಿ ಗೃಹಗಳನ್ನು ಪಟ್ಟಣ ಪಂಚಾಯಿತಿ, ಶಿಕ್ಷಕರು ಹೀಗೆ ಬೇರೆ ಬೇರೆ ಇಲಾಖೆಯ ಉದ್ಯೋಗಿಗಳಿಗೆ ನೀಡಿದರೆ ಉಪಯುಕ್ತವಾಗುತ್ತದೆ. ವಿದ್ಯುತ್ ನಿಗಮದ ಭದ್ರತೆಗಾಗಿ ನಿಯೋಜನೆಗೊಂಡಿರುವ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಯೋಧರಿಗೆ ಅಗತ್ಯವಾದ ವಸತಿ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು. ಈ ಬಗ್ಗೆ ಇಂಧನ ಸಚಿವರು ಗಮನಹರಿಸಿ ಪೂರಕ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಎಚ್‌.ಹಾಲಪ್ಪ ಹರತಾಳು ಗಮನ ಸೆಳೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು