ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆಹೊನ್ನೂರು: ಚುನಾವಣೆ ನಂತರ ಸಿದ್ದರಾಮಯ್ಯ ನಿರುದ್ಯೊಗಿಯಾಗಲಿದ್ದಾರೆ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ವ್ಯಂಗ್ಯ
Last Updated 13 ಫೆಬ್ರುವರಿ 2023, 6:11 IST
ಅಕ್ಷರ ಗಾತ್ರ

ಹೊಳೆಹೊನ್ನೂರು: ‘ಈ ಬಾರಿ ವಿಧಾನಸಭೆ ಚುನಾವಣೆ ಮುಗಿದ ಬಳಿಕ ಸಿದ್ದರಾಮಯ್ಯ ನಿರುದ್ಯೋಗಿ ಆಗುತ್ತಾರೆ. ಡಿ.ಕೆ. ಶಿವಕುಮಾರ್‌ ಕರಗಿ ಹೋಗ್ತಾರೆ; ಕುಮಾರಣ್ಣ ಕುಟುಂಬ ಸೇರ್ತಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದರು.

ಶಿವಮೊಗ್ಗ ತಾಲ್ಲೂಕಿನ ಹೊಳಲೂರು ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿಯ ಪೇಜ್ ಪ್ರಮುಖರ ಸಮಾವೇಶವನ್ನು ಉದ್ಘಾಟಿಸಿದ ಅವರು, ‘ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ 150 ಕ್ಷೇತ್ರಗಳಲ್ಲಿ ಜಯಿಸಿ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದರು.

‘ಕಾಂಗ್ರೆಸ್ ಮುಕ್ತ ಭಾರತ ನಿರ್ಮಿಸಲು ಎಲ್ಲಾ ಕಾರ್ಯಕರ್ತರು ಕೈ ಜೋಡಿಸಬೇಕು.
ಶಿವಮೊಗ್ಗದಲ್ಲಿ ಟಿಪ್ಪು ಅಭಿಮಾನಿಗಳು ಇರಬೇಕೋ ಅಥವಾ ಶಿವಪ್ಪ ನಾಯಕನ ಆರಾಧಕರು ಇರಬೇಕೋ ಎನ್ನುವುದನ್ನು ಹಿಂದೂಗಳು ಯೋಚಿಸಬೇಕು. ಗ್ರಾಮಾಂತರ ಕ್ಷೇತ್ರದಲ್ಲಿ ಹಿಂದೂ ವಿರೋಧಿಗಳನ್ನು ಮ‌ನೆಗೆ ಕಳುಹಿಸಬೇಕು. ಧರ್ಮ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ಮುಸ್ಲಿಮರನ್ನು ಓಲೈಕೆ ಮಾಡುವ ಧರ್ಮಾಂಧರನ್ನು ಮುಂದಿನ ದಿನಗಳಲ್ಲಿ ರಾಜಕೀಯದಿಂದ ದೂರ ಇಡಬೇಕು’ ಎಂದು ಮನವಿ ಮಾಡಿದರು.

ಶಾಸಕ ಕೆ.ಬಿ.ಅಶೋಕ್ ನಾಯ್ಕ, ‘ಐದು ವರ್ಷಗಳ ಅವಧಿಯಲ್ಲಿ ಬಿಜೆಪಿ ಗ್ರಾಮಾಂತರ ಮತ್ತು ಜಿಲ್ಲೆಯಲ್ಲಿ ಹಲವು ಶಾಶ್ವತ ಹೆಜ್ಜೆಗುರುತುಗಳನ್ನು ಮೂಡಿಸಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಶೌಚಾಲಯದಿಂದ ಸುಸಜ್ಜಿತ ವಿಮಾನ ನಿಲ್ದಾಣದವರೆಗೂ ಸೌಲಭ್ಯ ಕಲ್ಪಿಸಿರುವುದು ಬಿಜೆಪಿಯ ಸಾಧನೆ’ ಎಂದರು.

‘ಕುಂಸಿ, ಹಾರನಹಳ್ಳಿ ಭಾಗದ ಏತ ನೀರಾವರಿ ಯೋಜನೆಗೆ ₹ 350 ಕೋಟಿ ಅನುದಾನ ತಂದು 174 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಲಾಗಿದೆ. ಗ್ರಾಮಾಂತರ ಕ್ಷೇತ್ರದಲ್ಲಿ 74 ಗ್ರಾಮಗಳು ದಾಖಲೆರಹಿತ ಗ್ರಾಮಗಳಿವೆ. ದಾಖಲೆ ರಹಿತ ಮನೆಗಳಿಗೆ 94ಡಿ, 94ಸಿ ಅಡಿಯಲ್ಲಿ ಹಕ್ಕುಪತ್ರಗಳನ್ನು ನೀಡುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ. ಅದರ ಭಾಗವಾಗಿ 5000 ಹಕ್ಕು ಪತ್ರಗಳನ್ನು ಯಡಿಯೂರಪ್ಪ ಅವರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ವಿತರಿಸ
ಲಾಗುವುದು’ ಎಂದು ತಿಳಿಸಿದರು.

‘ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಕಮಲ ಗುರುತಿನ ಚಿಹ್ನೆಯ
ಅಭ್ಯರ್ಥಿಯನ್ನು ಶಾಕರನ್ನಾಗಿ ನೀಡುವ ಭರವಸೆಯನ್ನು ಪಕ್ಷದ ಅಧ್ಯಕ್ಷರಿಗೆ ನೀಡುತ್ತೇವೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಧನಂಜಯ ಸರ್ಜಿ, ಪವಿತ್ರ ರಾಮಯ್ಯ, ಎಂ.ಬಿ.ಭಾನುಪ್ರಕಾಶ್, ಕಲ್ಲಜ್ಜನಾಳ್ ಮಂಜುನಾಥ್, ರಾಜೇಶ್ ಪಟೇಲ್, ಮಾಜಿ ಶಾಸಕ ಮೋನಪ್ಪ ಭಂಡಾರಿ, ರಾಜ್ಯಗಳ ಪ್ರಭಾರಿ ಅಶೋಕ್ ಮೂರ್ತಿ, ಪದ್ಮಿನಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಸ್ತಿ ಸುರೇಶ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT