ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕ್ಷೇತ್ರಕ್ಕೆ ಲಾಕ್‌ಡೌನ್ ಗಾಯ, ಅಕಾಲಿಕ ಮಳೆಯ ಬರೆ

ಖರೀದಿ, ಮಾರಾಟದ ಮೇಲೆ ಮಾರುಕಟ್ಟೆ ವಹಿವಾಟು ಸಮಯ ಕಡಿತದ ಸಂಕಷ್ಟ
Last Updated 10 ಮೇ 2021, 5:07 IST
ಅಕ್ಷರ ಗಾತ್ರ

ಶಿವಮೊಗ್ಗ: ಕೋವಿಡ್‌ ಲಾಕ್‌ಡೌನ್‌ ಹಾಗೂ ಮುಂಗಾರು ಪೂರ್ವದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಕೃಷಿ ಕ್ಷೇತ್ರ ಸಂಕಷ್ಟದಲ್ಲಿದೆ. ಕೃಷಿಯನ್ನೇ ನಂಬಿಕೊಂಡು ಬದುಕು ನಡೆಸುತ್ತಿರುವ ರೈತರು ತಲ್ಲಣಗೊಂಡಿದ್ದಾರೆ.

ಕೃಷಿ ಉತ್ಪನ್ನಗಳ ಮಾರಾಟಕ್ಕೆ ಮಧ್ಯಾಹ್ನ 12ರವರೆಗೆ ಮಾತ್ರ ಅವಕಾಶ ನೀಡಿರುವುದು ಮಾರಾಟ ಮತ್ತು ಖರೀದಿ ಪ್ರಕ್ರಿಯೆಗಳಿಗೆ ಹಿನ್ನಡೆಯಾಗಿದೆ. ಏ. 27ರಂದು ಲಾಕ್‌ಡೌನ್‌ ಘೋಷಿಸಿದಾಗ ಈ ಸಮಯ ಬೆಳಿಗ್ಗೆ 10ರವರೆಗೆ ಇತ್ತು. ಸೀಮಿತ ಅವಧಿಯಲ್ಲಿ ಅಡಿಕೆ ಮತ್ತಿತರ ಉತ್ಪನ್ನಗಳ ಮಾರಾಟ ಕಷ್ಟಕರವಾಗಿದ್ದ ಕಾರಣ ಸಮಯವನ್ನು ವಿಸ್ತರಿಸಿ, ಮಧ್ಯಾಹ್ನ 12ರವರೆಗೆ ನೀಡಲಾಗಿದೆ. ಆದರೂ, ಈ ಸಮಯ ಮಾರುಕಟ್ಟೆಯ ಸಮರ್ಪಕ ನಿರ್ವಹಣೆಗೆ ತೊಡಕಾಗಿದೆ.

ಮಂದಗತಿಯ ಅಡಿಕೆ ವಹಿವಾಟು: ಶಿವಮೊಗ್ಗ ಜಿಲ್ಲೆಯಲ್ಲಿ 5 ವರ್ಷಗಳ ಹಿಂದೆ 26 ಸಾವಿರ ಹೆಕ್ಟೇರ್ ಇದ್ದ ಅಡಿಕೆ ಬೆಳೆ ಕ್ಷೇತ್ರ ಇಂದು 80 ಸಾವಿರ ಹೆಕ್ಟೇರ್ ದಾಟಿದೆ. ನೆರೆಯ ದಾವಣಗೆರೆ ಜಿಲ್ಲೆಯಲ್ಲಿ 48 ಸಾವಿರ ಹೆಕ್ಟೇರ್‌ ಅಡಿಕೆ ಪ್ರದೇಶವಿದೆ. ಚನ್ನಗಿರಿ ತಾಲ್ಲೂಕಿನಲ್ಲೇ 36 ಸಾವಿರ ಹೆಕ್ಟೇರ್ ಅಡಿಕೆ ಕ್ಷೇತ್ರವಿದೆ. ರಾಜ್ಯದಲ್ಲಿ ಪ್ರತಿ ವರ್ಷ 5 ಲಕ್ಷ ಟನ್‌ ಅಡಿಕೆ ಉತ್ಪಾದಿಸಲಾಗುತ್ತಿದೆ. ರಾಜ್ಯದಲ್ಲಿ ಬೆಳೆಯುವ ಶೇ 60ಕ್ಕೂ ಹೆಚ್ಚು ಅಡಿಕೆಯನ್ನು ದಾವಣಗೆರೆ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲೇ ಬೆಳೆಯಲಾಗುತ್ತದೆ.

ಅಡಿಕೆ ವರ್ತಕರ ಸಂಘ, ಅಡಿಕೆ ಟಾಸ್ಕ್‌ಫೋರ್ಸ್‌, ಮ್ಯಾಮ್‌ಕೋಸ್‌ ಸೇರಿ ಸಹಕಾರ ಸಂಸ್ಥೆಗಳ ಪ್ರಯತ್ನದ ಫಲವಾಗಿ ವಹಿವಾಟು ಆರಂಭವಾಗಿದೆ. ಉತ್ತರ ಭಾರತದಲ್ಲಿ ಗುಟ್ಕಾ, ಪಾನ್‌ ಮಸಾಲ ಉತ್ಪಾದನೆ, ಮಾರಾಟ ನಿರ್ಬಂಧಿಸದ ಕಾರಣ ಪಾನ್ ಮಸಾಲ ಕಾರ್ಖಾನೆಗಳು ಬಾಗಿಲು ತೆರೆದಿವೆ. ವಹಿವಾಟು ನಡೆಯುತ್ತಿದೆ. ಇದರಿಂದ ಅಡಿಕೆಗೆ ಬೇಡಿಕೆಯೂ ಇದೆ. ಆದರೆ, ಸಮಯದ ಅಭಾವ ಖರೀದಿ, ಮಾರಾಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

‘ಮೊದಲು ಮಧ್ಯಾಹ್ನ 2.30ರ ನಂತರ ಟೆಂಡರ್ ಓಪನ್ ಮಾಡುತ್ತಿದ್ದೆವು. ಈಗ 11ಕ್ಕೇ ಮಾಡಬೇಕಿದೆ. 12 ಗಂಟೆ ಒಳಗೆ ಸಂಪೂರ್ಣ ವ್ಯವಹಾರ ಸ್ಥಗಿತವಾಗಬೇಕು. ಬಿಲ್‌ ಮತ್ತಿತರ ಪ್ರಕ್ರಿಯೆಗಳಿಗೂ ಸಮಯ ಸಾಲುವುದಿಲ್ಲ. ಎಪಿಎಂಸಿ ಪ್ರಾಂಗಣದಲ್ಲೇ 100ಕ್ಕೂ ಹೆಚ್ಚು ವರ್ತಕರು ಇದ್ದಾರೆ. ಟೆಂಡರ್ ಬರೆಯುವವರು ಎಲ್ಲ ಮಂಡಿಗಳಿಗೂ ಭೇಟಿ ನೀಡಿ, ಅಡಿಕೆ ಧಾರಣೆ ನಿಗದಿ ಮಾಡಲು ಸೀಮಿತ ಅವಧಿಯಲ್ಲಿ ಸಾಧ್ಯವಾಗುವುದಿಲ್ಲ’ ಎನ್ನುತ್ತಾರೆ ಶಿವಮೊಗ್ಗ ಅಡಿಕೆ ವರ್ತಕರ ಸಂಘದ ಕಾರ್ಯದರ್ಶಿ ಕೆ.ಸಿ.ಮಲ್ಲಿಕಾರ್ಜುನ.

ತರಕಾರಿ ಧಾರಣೆಯ ಹಾವು, ಏಣಿ ಆಟ: ಲಾಕ್‌ಡೌನ್‌ ತರಕಾರಿ ಮಾರಾಟದ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ. ವ್ಯಾಪಾರಸ್ಥರು ಶನಿವಾರ ಮತ್ತು ಭಾನುವಾರ ಸ್ವಯಂ ವಹಿವಾಟು ಸ್ಥಗಿತಗೊಳಿಸುವ ನಿರ್ಧಾರ ಪ್ರಕಟಿಸಿ, ಪಾಲಿಸುತ್ತಿದ್ದಾರೆ. ವಾರದಲ್ಲಿ ಐದು ದಿನಗಳು ಬೆಳಿಗ್ಗೆ 5ರಿಂದ ಮಧ್ಯಾಹ್ನ 12ರವರೆಗೆ ವಹಿವಾಟು ನಡೆಸಿದರೂ ಹೋಟೆಲ್‌ಗಳು, ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿರುವ ಕಾರಣ ತರಕಾರಿಗಳ ಬೇಡಿಕೆ ಕುಸಿದಿದೆ. ಧಾರಣೆ ವ್ಯತ್ಯಯಕ್ಕೂ ಇದು ಕಾರಣವಾಗಿದೆ.

‘ಬೆಳಗಾವಿ, ಬೆಂಗಳೂರು, ತುಮಕೂರು, ತಮಿಳುನಾಡಿನಿಂದ ತರಕಾರಿ ಬರುತ್ತದೆ. ಜಿಲ್ಲೆಯಲ್ಲಿ ಸೊಪ್ಪು, ಬದನೆ, ಬೆಂಡೆ, ಟೊಮಟೊ ಈ ಬಾರಿ ಬೆಳೆಯಲಾಗಿದೆ. ಬೇಡಿಕೆ ಕುಸಿತದ ಪರಿಣಾಮ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಬೀನ್ಸ್, ಕ್ಯಾರೆಟ್‌ ಹೊರತುಪಡಿಸಿ ಎಲ್ಲ ತರಕಾರಿಗಳ ಬೆಲೆ ಕುಸಿದಿದೆ’ ಎನ್ನುತ್ತಾರೆ ಎಪಿಎಂಸಿ ಸಗಟು ತರಕಾರಿ ವರ್ತಕರ ಸಂಘದ ಅಧ್ಯಕ್ಷ ಎನ್‌.ರಮೇಶ್.

ಅಕಾಲಿಕ ಮಳೆ ತಂದ ಸಂಕಷ್ಟ: ಜಿಲ್ಲೆಯಲ್ಲಿ ಮುಂಗಾರು ಪೂರ್ವದಲ್ಲೇ ಸುರಿದ ಅಕಾಲಿಕ ಮಳೆ ಕೃಷಿ ಕ್ಷೇತ್ರಕ್ಕೆ ಮತ್ತಷ್ಟು ಸಂಕಷ್ಟ ತಂದಿದೆ. ವಾಡಿಕೆಯಂತೆ ಮೇ ತಿಂಗಳಲ್ಲಿ 58 ಮಿ.ಮೀ ಮಳೆಯಾಗಬೇಕಿತ್ತು. ಒಂದು ವಾರದಲ್ಲೇ 245 ಮಿ.ಮೀ. ಮಳೆ ಸುರಿದಿದೆ. ಭದ್ರಾ, ತುಂಗಾ ಅಚ್ಚುಕಟ್ಟು ಸೇರಿ ಬೇಸಿಗೆಯಲ್ಲಿ 80 ಸಾವಿರ ಹೆಕ್ಟೇರ್‌ಗೂ ಹೆಚ್ಚು ಭತ್ತದ ಬೆಳೆ ಕಟಾವಿಗೆ ಬಂದಿವೆ. ಅಕಾಲಿಕ ಮಳೆಯಿಂದ ಭತ್ತಕ್ಕೆ ಸಾಕಷ್ಟು ಹಾನಿಯಾಗಿದೆ. ಅಡಿಕೆ, ಬಾಳೆ ಮರಗಳು ಧರೆಗೆ ಉರುಳಿವೆ. ಮಾವಿನ ಬೆಳೆಗೆ ಹಾನಿಯಾಗಿದೆ.

‘ಸ್ವಲ್ಪ ಪ್ರಮಾಣದಲ್ಲಿ ಭತ್ತಕ್ಕೆ ಹಾನಿಯಾಗಿದೆ. ಬಾಳೆ, ಅಡಿಕೆ ಮರಗಳು ಬಿದ್ದಿವೆ. ನಷ್ಟದ ಪ್ರಮಾಣ ಅಂದಾಜು ಮಾಡಲಾಗುತ್ತಿದೆ. ಎಲ್ಲ ತಾಲ್ಲೂಕುಗಳಿಂದ ಮಾಹಿತಿ ಪಡೆಯುತ್ತಿದ್ದೇವೆ’ ಎನ್ನುತ್ತಾರೆ ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧಾ.

***

ಅಡಿಕೆ ಧಾರಣೆ ಹೆಚ್ಚಳ

ಕೊರೊನಾ ಸಂಕಷ್ಟದ ಮಧ್ಯೆಯೂ ಉತ್ತರ ಭಾರತದಲ್ಲಿನ ಪಾನ್‌ ಮಸಾಲ ಕಂಪನಿಗಳು ಕಾರ್ಯನಿರ್ವಹಿಸುತ್ತಿರುವ ಕಾರಣ ಅಡಿಕೆಗೆ ಬೇಡಿಕೆ ಹೆಚ್ಚಿದೆ. ಮೂರು ದಿನಗಳ ಅವಧಿಯಲ್ಲಿ ₹ 1,500 ದರ ಏರಿಕೆಯಾಗಿದೆ. ಒಂದು ತಿಂಗಳಿನಿಂದ ಕ್ವಿಂಟಲ್‌ಗೆ ₹ 40 ಸಾವಿರ ಆಸುಪಾಸಿನಲ್ಲಿದ್ದ ಧಾರಣೆ ₹ 41,500ಕ್ಕೆ ಹೆಚ್ಚಳವಾಗಿದೆ.

***

ಬೆಲೆ ಕುಸಿತ: ಅನಾನಸ್ ಬೆಳೆಗಾರರು ಕಂಗಾಲು

ಗಣೇಶ್ ತಮ್ಮಡಿಹಳ್ಳಿ

ಶಿವಮೊಗ್ಗ: ಮಾರುಕಟ್ಟೆಯಲ್ಲಿ ಅನಾನಸ್‌ ಬೆಲೆ ಕುಸಿಯುತ್ತಿರುವುದರಿಂದ ಜಿಲ್ಲೆಯ ಬೆಳೆಗಾರರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ.

ತೋಟಗಾರಿಕೆ ಇಲಾಖೆಯ ಮೂಲಗಳ ಪ್ರಕಾರ, ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಅನಾನಸ್ ಬೆಳೆಗಾರರು ಇದ್ದಾರೆ. 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಬೆಳೆದ ಅನಾನಸ್‌ಗೆ ಹೊರ ರಾಜ್ಯಗಳ ವಿವಿಧ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಆದರೆ, ಈ ಬಾರಿ ಲಾಕ್‌ಡೌನ್ ಕಾರಣ ಬೇಡಿಕೆ ಕುಸಿದಿದೆ. ಹೀಗಾಗಿ ಬೆಳೆಗಾರರು ಸ್ಥಳೀಯ ಮಾರುಕಟ್ಟೆಯನ್ನು ಅವಲಂಬಿಸಿದ್ದಾರೆ. ಸೊರಬದ ಕೆಲ ರೈತರು ಬೆಲೆ ಕಡಿಮೆಯಾದ ಕಾರಣ ಬೆಳೆ ಕೊಯ್ಲು ಮಾಡಿಲ್ಲ.

ಗಣನೀಯವಾಗಿ ಕುಸಿದ ಬೆಳೆ ಕ್ಷೇತ್ರ: ಶಿವಮೊಗ್ಗ ಜಿಲ್ಲೆಯ ಸಾಂಸ್ಕೃತಿಕ ಸಂಕೇತವೇ ಆಗಿದ್ದ ಅನಾನಸ್ ಬೆಳೆ ಕ್ಷೇತ್ರ ಗಣನೀಯವಾಗಿ ಕ್ಷೀಣಿಸಿದೆ. ಸಾಗರ, ಸೊರಬ ತಾಲ್ಲೂಕಿನ ರೈತರು ಅನಾನಸ್ ಬೆಳೆಯನ್ನು ಈಗಲೂ ಕಾಪಾಡಿಕೊಂಡು ಬಂದಿದ್ದಾರೆ. ರಾಜ್ಯ ಸರ್ಕಾರ ‘ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಗೆ’ ಅನಾನಸ್ ಸೇರಿಸಿದೆ. ವರ್ಷದ ಎಲ್ಲ ಸಮಯದಲ್ಲಿ ಸಿಗುವ ಅನಾನಸ್ ಅರೆ ನೀರಾವರಿಯಲ್ಲೂ ಬೆಳೆಯಬಹುದಾಗಿದೆ. ಸಸಿ ನೆಟ್ಟು ಒಂದೂವರೆಗೆ ವರ್ಷಕ್ಕೆ ಈ ಬೆಳೆ ಬರುತ್ತದೆ. ಹುಳಿ, ಸಿಹಿ ಮಿಶ್ರಿತ ಅನಾನಸ್ ಹಣ್ಣು ಆರೋಗ್ಯಕ್ಕೆ ಪೂರಕವಾಗಿದೆ.

ಸಾಗರ ತಾಲ್ಲೂಕಿನ ತಾಳಗುಪ್ಪ ಹೋಬಳಿ, ಸೊರಬ ತಾಲ್ಲೂಕಿನ ಚಂದ್ರಗುತ್ತಿ, ಕುಪ್ಪಗಡ್ಡೆ ಹೋಬಳಿ ಭಾಗದಲ್ಲಿ ಪ್ರಮುಖ ಬೆಳೆ ಎನಿಸಿರುವ ಅನಾನಸ್ ಈಗ ಕಟಾವಿಗೆ ಬರುವ ಸಮಯವಾಗಿದೆ. ಒಂದು ತಿಂಗಳಿನಿಂದಲೂ ಫಸಲನ್ನು ಕಟಾವು ಮಾಡಿ ರೈತರು ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಆದರೆ, ಈಗ ಲಾಕ್‍ಡೌನ್ ಕಾರಣದಿಂದ ಹಣ್ಣುಗಳ ವಹಿವಾಟು ಪ್ರಮಾಣ ಕುಸಿದಿದೆ.

ಬೆಲೆಯಲ್ಲಿ ಭಾರಿ ಕುಸಿತ: ಜಿಲ್ಲೆಯಲ್ಲಿ ಬೆಳೆಯುತ್ತಿರುವ ಅನಾನಸ್ ಜ್ಯೂಸ್‌ ಹೆಚ್ಚು ಬಳಕೆಯಾಗುತ್ತದೆ. ಲಾಕ್‌ಡೌನ್ ಇರುವುದರಿಂದ ಜ್ಯೂಸ್ ಸೆಂಟರ್‌ಗಳು ಬಾಗಿಲು ಹಾಕಿವೆ. ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಮದುವೆ ಸಮಾರಂಭಗಳು ಇಲ್ಲದಿರುವುದು ಅನಾನಸ್‌ ಬೇಡಿಕೆ ಕುಸಿಯಲು ಕಾರಣ. ಸಾಮಾನ್ಯವಾಗಿ ಈ ದಿನದಲ್ಲಿ ಕೆ.ಜಿ.ಗೆ ₹ 12ರಿಂದ ₹ 20ರ ವರೆಗೆ ಮಾರಾಟವಾಗುತ್ತಿತ್ತು. ಆದರೆ, ಈಗ ₹ 3ರಿಂದ ₹ 4ರವರೆಗೆ ಕೇಳುತ್ತಿದ್ದಾರೆ.

ಲಾಭಕ್ಕಿಂತ ನಷ್ಟವೇ ಜಾಸ್ತಿ: ‘ಅನಾನಸ್ ಬೆಳೆ ಕೈಗೆ ಬರುವಷ್ಟರಲ್ಲಿ ಒಂದು ಗಿಡಕ್ಕೆ ₹ 12ರಿಂದ ₹ 13 ಖರ್ಚು ಮಾಡಬೇಕು. ಕೆ.ಜಿ.ಗೆ ₹ 18ರಿಂದ 20 ಸಿಕ್ಕರೆ ಸ್ವಲ್ಪ ಲಾಭ ಗಳಿಸಬಹುದು. ಆದರೆ, ಕೆಲವೊಮ್ಮೆ ಕೆ.ಜಿ.ಗೆ ₹ 4ರಂತೆ ಕೇಳುತ್ತಾರೆ. ಬೆಳೆಯಿಂದ ಬರುವ ಹಣ ಗೊಬ್ಬರದ ಖರ್ಚಿಗೂ ಆಗುವುದಿಲ್ಲ. ಕಳೆದ ಬಾರಿ 25 ಸಾವಿರ ಸಸಿ ಹಾಕಿದ್ದೆ. ಒಳ್ಳೆಯ ಫಸಲು ಬಂದಿತ್ತು. ಹೆಚ್ಚಿನ ಲಾಭವನ್ನೂ ನಿರೀಕ್ಷಿಸಿದ್ದೆ. ಆದರೆ, ಲಾಕ್‌ಡೌನ್‌ನಿಂದಾಗಿ ಹಣ್ಣು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ’ಎನ್ನುತ್ತಾರೆ ಸೊರಬ ತಾಲ್ಲೂಕಿನ ಆನವಟ್ಟಿ ಸಮೀಪದ ಬೆನ್ನೂರು ಗ್ರಾಮದ ರೈತ ವೀರಭದ್ರಗೌಡ.

‘ಹಣ್ಣುಗಳು ಕೊಳೆಯುತ್ತಿದ್ದಂತೆ ಸೊಳ್ಳೆ, ನಾಯಿಗಳ ಕಾಟ ಹೆಚ್ಚಾಯಿತು. ಹಾಗಾಗಿ, ಕೊನೆಗೆ ₹ 2.10 ಲಕ್ಷ ಖರ್ಚು ಮಾಡಿ ಬೆಳೆಸಿದ್ದ ಫಸಲನ್ನು ಕೇವಲ ₹ 40 ಸಾವಿರಕ್ಕೆ ಗುತ್ತಿಗೆ ಕೊಟ್ಟೆ. ಸರ್ಕಾರದಿಂದ ಕೇವಲ ₹ 5 ಸಹಾಯಧನ ಸಿಕ್ಕಿದೆ. ಕೆಲವು ರೈತರಿಗೆ ಸಿಕ್ಕಿಲ್ಲ’ ಎಂದು ಅಳಲು ತೋಡಿಕೊಂಡರು.

ತೊಂದರೆ ಆಗದಂತೆ ಮಾರುಕಟ್ಟೆ ವ್ಯವಸ್ಥೆ

‘ವ್ಯಾಪಾರಸ್ಥರು ಹಣ್ಣನ್ನು ಖರೀದಿಸುವಾಗ ಹಣ್ಣಿನ ತೂಕ ಒಂದು ಕೆ.ಜಿ.ಗೆ 100 ಗ್ರಾಂ ಕಡಿಮೆ ಇದ್ದರೂ ಅದನ್ನು ಅರ್ಧ ಕೆ.ಜಿ. ಎಂದು ಲೆಕ್ಕ ಹಾಕಿಕೊಳ್ಳುತ್ತಾರೆ. 400 ಗ್ರಾಂ ಇದ್ದರೆ ಅದನ್ನು 250 ಗ್ರಾಂ ಎಂದು ಲೆಕ್ಕ ಮಾಡಿಕೊಳ್ಳುತ್ತಾರೆ. ಕೆ.ಜಿ.ಗೆ ₹ 6 ಇದ್ದರೆ 900 ಗ್ರಾಂ ಇದ್ದ ಹಣ್ಣನ್ನು ಅರ್ಧ ಕೆಜಿಗೆ ಎಂದು ಲೆಕ್ಕ ಮಾಡುವುದರಿಂದ ₹ 3 ಸಿಗುತ್ತಿದೆ. ಹಣ್ಣಿನ ತೂಕದಲ್ಲೂ ಮೋಸ ಆಗುತ್ತಿದೆ. ಇದರ ಬಗ್ಗೆ ಪ್ರಶ್ನಿಸಿದರೆ, ‘ನಾವು ಖರೀದಿಸುವುದೇ ಹಾಗೆ. ಇಷ್ಟ ಇದ್ದರೆ ಕೊಡಿ; ಇಲ್ಲವಾದರೆ ಬೇಡ’ ಎಂದು ಹೇಳುತ್ತಾರೆ. ಮಾರಾಟವಾಗದೆ ಹಾಗೆ ಉಳಿದರೆ ಹಣ್ಣು ಕೊಳೆತು ಹೋಗುತ್ತದೆ ಎಂಬ ಭಯಕ್ಕೆ ಕೇಳಿದ ಬೆಲೆಗೆ ಮಾರಾಟ ಮಾಡುತ್ತಿದ್ದೇನೆ’ ಎನ್ನುತ್ತಾರೆ ರೈತ ರಾಜೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT