ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಕೂಗು

ಹೊಸನಗರ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಮೂಲಸೌಕರ್ಯಗಳ ಕೊರತೆ
Last Updated 22 ಮಾರ್ಚ್ 2023, 6:19 IST
ಅಕ್ಷರ ಗಾತ್ರ

ಹೊಸನಗರ: ತಾಲ್ಲೂಕಿನ ಗ್ರಾಮಗಳ ಜ್ವಲಂತ ಸಮಸ್ಯೆಗಳಾದ ರಸ್ತೆ, ಮೋರಿ, ಸೇತುವೆ, ಕುಡಿಯುವ ನೀರು, ಕಾಲುಸಂಕ ಇತ್ಯಾದಿ ಸಮಸ್ಯೆಗಳ ಬಗ್ಗೆ ಸಾಲು ಸಾಲು ಮನವಿ ಸಲ್ಲಿಸಿ ಬೇಸತ್ತಿದ್ದ ಜನರು ಇದೀಗ ವಿಧಾನಸಭೆ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.

ತಾಲ್ಲೂಕಿನ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೇಲಿನಬೇಸಿಗೆ ಗ್ರಾಮ ಪಂಚಾಯಿತಿಯ ಗೊರದಳ್ಳಿ ಗ್ರಾಮಕ್ಕೆ ಉತ್ತಮ ರಸ್ತೆ ಕಲ್ಪಿಸಲು ಆಗ್ರಹಿಸಿ ಗ್ರಾಮಸ್ಥರು ತಾಲ್ಲೂಕು ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ರಸ್ತೆ ದುರಸ್ತಿಗೆ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮುಂಬರುವ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ
ನೀಡಿದ್ದಾರೆ.

ಗ್ರಾಮದಲ್ಲಿ 66 ಮನೆಗಳಿವೆ. ಇಲ್ಲಿ ಸುಮಾರು 223 ಮತಗಳಿವೆ. ಇಲ್ಲಿನ ಸಂಪರ್ಕಕ್ಕೆ ಲೋಕೋಪಯೋಗಿ ಇಲಾಖೆಯ ರಸ್ತೆ ಇದ್ದರೂ ಸಮರ್ಪಕ ಮೋರಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿದು ರಸ್ತೆ ಹಾಳಾಗಿದೆ. ರಸ್ತೆ ಮಣ್ಣುಮಯವಾಗಿದೆ. ಇದರಿಂದ ಜನರ ಸಂಚಾರ ಕಷ್ಟಕರವಾಗಿದೆ. ವಿದ್ಯಾರ್ಥಿಗಳು ಬದಲಿ ರಸ್ತೆ ಇಲ್ಲದೆ ಇದೇ ರಸ್ತೆಯಲ್ಲೇ ನಡೆದಾಡಬೇಕಿದೆ. ದೂಳಿನಿಂದಾಗಿ ಜನರಲ್ಲಿ ಉಸಿರಾಟ ಸಮಸ್ಯೆ ಉಲ್ಬಣಿಸಿದೆ. ಜನಪ್ರತಿನಿಧಿಗಳಿಗೆ ಹಲವು ಸಲ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಚುನಾವಣೆ ಬಹಿಷ್ಕಾರವೊಂದೇ ಕೊನೆಯ ದಾರಿ ಎಂದು ಹೇಳಿದ್ದಾರೆ.

ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆದುವಳ್ಳಿ ಗ್ರಾಮಕ್ಕೆ ಈವರೆಗೂ ರಸ್ತೆ ಸಂಪರ್ಕ ಕಲ್ಪಿಸಿಲ್ಲ. ರಸ್ತೆಯೇ ಇಲ್ಲದೆ ಹಳ್ಳ ದಿಣ್ಣೆ ದಾಟಿ ಸಂಚರಿಸಬೇಕಿದೆ. ಮಳೆಗಾಲದಲ್ಲಿ ರಸ್ತೆ ಕಡಿತಗೊಳ್ಳುತ್ತದೆ. ಇದರಿಂದ ಜನರ ಪರದಾಟ ಹೆಚ್ಚಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ರಸ್ತೆಗಾಗಿ ನಾಲ್ಕಾರು ವರ್ಷಗಳಿಂದ ಪ್ರತಿಭಟನೆ ಮಾಡುತ್ತಲೇ ಬಂದಿರುವ ಮಾರುತೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿತ್ತಲಮರ ಜಡ್ಡು ಮತ್ತು ವಂದಗದ್ದೆ ಗ್ರಾಮಸ್ಥರು, ‘ಚುನಾವಣೆಗೆ ಮತ ಕೇಳಲು ನಮ್ಮ ಊರಿಗೆ ಬರುವ ಅಗತ್ಯವಿಲ್ಲ’ ಎಂಬ ಫಲಕ ಅಳವಡಿಸಲು ಸಿದ್ಧತೆ ನಡೆಸಿದ್ದಾರೆ.

ಜನಪ್ರತಿನಿಧಿಗಳ ಮೌನ: ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯಗಳ ಅವ್ಯವಸ್ಥೆ ತಾರಕಕ್ಕೆ ಏರಿದೆ. ಅಲ್ಲಲ್ಲಿ ಚುನಾವಣೆ ಬಹಿಷ್ಕಾರದ ಧ್ವನಿ ಕೇಳಿ ಬರುತ್ತಿದ್ದರೂ ಜನರನ್ನು ಆಳುವ ಜನಪ್ರತಿನಿಧಿಗಳು ಇದರತ್ತ ತಲೆ ಕೆಡಿಸಿಕೊಳ್ಳುತ್ತಿಲ್ಲ.

‘ಶಾಸಕರ ಬಾಲಬಡುಕರಿಗೆ ಎಲ್ಲಾ ಸವಲತ್ತು ಲಭ್ಯವಾಗುತ್ತಿದೆ. ನಮ್ಮ ಪಾಡು ಹಾಗೆ ಇದೆ’ ಎಂದು ಗೊರದಳ್ಳಿ ಶಿವಪ್ಪ ನಾಯ್ಕ ಬೇಸರ ವ್ಯಕ್ತಪಡಿಸಿದರು.

ಕಿತ್ತಲಮರಜಡ್ಡು ಗ್ರಾಮಕ್ಕೆ ಕುಡಿಯುವ ನೀರು ಇಲ್ಲ. ಬಾವಿಗಳು ತಳ ಕಂಡಿವೆ. ಬೋರ್ ನೀರಿನ ಆಸೆ ಕನ್ನಡಿ ಗಂಟಾಗಿದೆ. ಸಾಲದ್ದಕ್ಕೆ ರಸ್ತೆ ಇಲ್ಲ. ಸಮಸ್ಯೆ ಬಗ್ಗೆ ಹತ್ತಾರು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈ ಸಲ ಓಟು ಕೇಳಲು ಬರಲಿ. ಬುದ್ಧಿಕಲಿಸಿ ಓಡಿಸುತ್ತೇವೆ’ ಎಂದು ಗ್ರಾಮಸ್ಥ ಗಣೇಶ್ ಆಕ್ರೋಶ ವ್ಯಕ್ತಪಡಿಸಿದರು.

ಕೋಟ್‌...

ಗ್ರಾಮಸ್ಥರಿಂದ ಬಂದ ಮನವಿ ಆಧರಿಸಿ, ಸ್ಥಳ ಪರಿಶೀಲಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ವಸವೆ-ಕರಿಂಗೊಳ್ಳಿ ಸಂಪರ್ಕ ರಸ್ತೆಗೆ₹ 40 ಲಕ್ಷ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ.

ಮಲ್ಲಿಕಾರ್ಜುನ್, ಎಇಇ, ಲೋಕೋಪಯೋಗಿ ಇಲಾಖೆ, ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT