ಭಾನುವಾರ, ಜೂನ್ 13, 2021
22 °C
ತಿಂಗಳಾದರೂ ಕೈ ಸೇರದ ಕೂಲಿ ಮೊತ್ತ, ಸಕಾಲಕ್ಕೆ ಹಣವಿಲ್ಲದೆ ಕಾರ್ಮಿಕರ ಪರದಾಟ

ಉದ್ಯೋಗ ‘ಖಾತ್ರಿ’ ಕೂಲಿ ಹಣ ಪಡೆಯುವುದೇ ಪಜೀತಿ!

ಗಣೇಶ್ ತಮ್ಮಡಿಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುತ್ತಿರುವ ಕಾರ್ಮಿಕರ ಪಾಡು ‘ಮಾಡುವುದು ಕೂಲಿ, ಬೇಡುವುದು ಕೂಲಿ’ ಎಂಬಂತಾಗಿದೆ.

ಕೊರೊನಾ ಸಂಕಷ್ಟ ಕಾಲದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಸಾಕಷ್ಟು ಗ್ರಾಮೀಣ ಕುಟುಂಬಗಳಿಗೆ ಜೀವನಾಧಾರವೂ ಆಗಿದೆ. ಲಾಕ್‌ಡೌನ್‌ನಿಂದಾಗಿ ನಗರದಲ್ಲಿ ಕೆಲಸ ವಿಲ್ಲದೆ ಹಲವು ಜನರು ಉದ್ಯೋಗ ಖಾತ್ರಿ ಕಾಮಗಾರಿಗೆ ಹೋಗುತ್ತಿದ್ದಾರೆ.

ಕುಟುಂಬ ನಿರ್ವಹಣೆಗೆ ಸಂಘ–ಸಂಸ್ಥೆಗಳಲ್ಲಿ ಸಾಲ ಪಡೆದು ಕಂತು ರೂಪದಲ್ಲಿ ಪಾವತಿ ಮಾಡುತ್ತಿರುವ ಅದೆಷ್ಟೋ ಮಂದಿ ಲಾಕ್‌ಡೌನ್ ನಿಂದ ಇದ್ದ ಕೆಲಸ, ಕಾರ್ಯ ಕಳೆದುಕೊಂಡು ಉದ್ಯೋಗ ಖಾತ್ರಿಗೆ ಹೋಗುತ್ತಿದ್ದಾರೆ. ಆದರೆ, ಸಕಾಲಕ್ಕೆ ಕೂಲಿ ಹಣ ಬಿಡುಗಡೆಯಾಗದೇ ಸಂಕಷ್ಟ ಅನುಭವಿಸುವಂತಾಗಿದೆ. ಯೋಜನೆಯ ಸಾಮಗ್ರಿಗಳ ವೆಚ್ಚ ಸಹ ಪಾವತಿಯಾಗದೇ ತಿಂಗಳುಗಳೇ ಉರುಳಿವೆ. ಕೂಲಿ ಇಲ್ಲದೇ ಉದ್ಯೋಗ ಮಾಡುವುದು ಹೇಗೆ ಎಂದು ಕಾರ್ಮಿಕರು ಉದ್ಯೋಗ ಖಾತ್ರಿ ಕೆಲಸಕ್ಕೆ ಹೋಗೋಕೆ ಹಿಂದೇಟು ಹಾಕುತ್ತಿದ್ದಾರೆ.

ಎಷ್ಟು ಬಾಕಿ: ಶಿವಮೊಗ್ಗ ಜಿಲ್ಲೆಯಲ್ಲಿ ಮೇ 15ರ ಅಂಕಿ ಅಂಶದಂತೆ ಒಟ್ಟಾರೆ ₹ 1.22 ಕೋಟಿ ಕೂಲಿ ಹಣ ಪಾವತಿಯಾಗಬೇಕಿದೆ. ₹ 39.7 ಲಕ್ಷ ಸಾಮಗ್ರಿ ವೆಚ್ಚವೂ ಸೇರಿ ಒಟ್ಟಾರೆ ₹ 1.62 ಕೋಟಿ ಹಣ ಬಾಕಿಯಿದೆ.

ಭದ್ರಾವತಿ ತಾಲ್ಲೂಕಿ‌ಗೆ ₹ 17.72 ಲಕ್ಷ, ಹೊಸನಗರ ₹ 10.17 ಲಕ್ಷ , ಸಾಗರ ₹13.41 ಲಕ್ಷ , ಶಿಕಾರಿಪುರ ₹ 45.9 ಲಕ್ಷ, ಶಿವಮೊಗ್ಗ ₹ 33.67 ಲಕ್ಷ, ಸೊರಬ ₹ 27.77 ಲಕ್ಷ ಹಾಗೂ ತೀರ್ಥಹಳ್ಳಿ ತಾಲ್ಲೂಕಿಗೆ ₹ 13.69 ಲಕ್ಷ ಹಣ ಬರಬೇಕಿದೆ.

ಸುಗ್ಗಿ ನಂತರ ಉದ್ಯೋಗವಿಲ್ಲ: ಮಲೆನಾಡು ಭಾಗದಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್‌ ವರೆಗೆ ಸುಗ್ಗಿ. ಕೃಷಿಯಲ್ಲಿ ತೊಡಗುವ ಕಾರಣ ಒಂದಿಷ್ಟು ಉದ್ಯೋಗ ಲಭಿಸುತ್ತದೆ. ಆದರೆ, ಜನವರಿಯಿಂದ ಮಳೆಗಾಲ ಆರಂಭದವರೆಗೂ ಉದ್ಯೋಗವಕಾಶ ಸಿಗುವುದಿಲ್ಲ. ಇಂತಹ ಸಮಯದಲ್ಲೇ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚು. ವಾರ್ಷಿಕ ಪ್ರಗತಿ ಸಾಧಿಸಲು ಈ ಸಮಯದಲ್ಲಿ ಕಾಮಗಾರಿಗಳೂ ಸಾಕಷ್ಟು ನಡೆಯುತ್ತವೆ. ಆದರೆ, ಕೊರೊನಾ ಸಂಕಷ್ಟದಲ್ಲಿ  ಈ ಬಾರಿ ಕೂಲಿ ಹಣ ಬಾಕಿ ಇರುವುದು ಗ್ರಾಮೀಣ ಕೂಲಿ ಕಾರ್ಮಿಕರಿಗೆ ನುಂಗಲಾರದ ತುತ್ತಾಗಿದೆ.

ಬೇಸಿಗೆ ಸಮಯದಲ್ಲಿ ಕೈಯಲ್ಲಿ ಕೆಲಸವಿಲ್ಲದಾಗ ಈ ಯೋಜನೆ ಆಶ್ರಯಿಸುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಉದ್ಯೋಗವಿಲ್ಲದ ಪರಿಸ್ಥಿತಿ ನಿರ್ಮಾಣವಾದಾಗ, ಕೈಹಿಡಿದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಸಾಕಷ್ಟು ಗ್ರಾಮೀಣ ಕುಟುಂಬಗಳಿಗೆ ಜೀವನಾಧಾರವೂ ಆಗಿದೆ. ಈಗ ಕೂಲಿ ಕಾರ್ಮಿಕರಿಗೆ ತಮ್ಮ ದುಡುಮೆಯ ಹಣ ಬಿಡುಗಡೆ ಆಗದಿರುವುದು ಯೋಜನೆಯನ್ನೂ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ತಿಂಗಳಾದರೂ ಹಣ ಬರಲ್ಲ: ‘ಕೆಲಸ ಮಾಡಿ ತಿಂಗಳಾದರೂ ಕೂಲಿ ಮೊತ್ತ ಪಾವತಿಯಾಗಿಲ್ಲ. ಕುಟುಂಬ ನಿರ್ವಹಣೆ, ಸಂಘ, ಸಂಸ್ಥೆ ಹಣ ಮರುಪಾವತಿಗೆ ಅವರಿವರ ಬಳಿ ಕೈಗಡ ಹಣ ತಂದು ಕಟ್ಟುತ್ತಿದ್ದೇವೆ. ವಾರಕ್ಕೊಮ್ಮೆಯಾದರೂ ಕೂಲಿ ಹಣ ಸಿಕ್ಕರೆ ಅನುಕೂಲವಾಗುತ್ತದೆ. ಹಣ ಕೊಡುವುದಕ್ಕೆ ಪಂಚಾಯಿತಿಗೆ ಅಲೆಯಬೇಕು. ಅವರು ಯಾವಾಗ ಅಂತ ಹೇಳಲ್ಲ. ಕೇಳಿದಾಗಲೆಲ್ಲ ಬರುತ್ತೇ ಹೋಗಿ ಎಂದು ಹೇಳುತ್ತಾರೆ. ಆದರೆ, ಸಾಲ ಕೊಟ್ಟ ಸಂಘ, ಸಂಸ್ಥೆಗಳು ಈ ಕಾರಣ ಕೇಳಲ್ಲ. ಬಾಯಿಗೆ ಬಂದಹಾಗೆ ಮಾತನಾಡುತ್ತಾರೆ. ಹಾಗಾಗಿ, ಬೇರೆಯವರ ಬಳಿ ಸಾಲ ತಂದು ಹಣ ಕಟ್ಟುವಂತ ಪರಿಸ್ಥಿತಿ ಇದೆ. ಸಾಲ ಕೊಟ್ಟವರು ಸುಮ್ಮನೆ ಕೊಡುವುದಿಲ್ಲ, ಬಡ್ಡಿ ಕೇಳುತ್ತಾರೆ. ಉದ್ಯೋಗ ಖಾತ್ರಿ ಹಣ ಬಂದಾಗ ಅವರಿಗೆ ಅಸಲಿನ ಜತೆ ಬಡ್ಡಿ ಸೇರಿಸಿಯೇ ಕೊಡಬೇಕು. ಇಲ್ಲವಾದಲ್ಲಿ ಇನ್ನೊಮ್ಮೆ ಸಾಲ ಕೊಡುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ’ ಎಂದು ನರೇಗಾ ಕಾರ್ಮಿಕ ನಿಂಗರಾಜು ಅಳಲು ತೋಡಿಕೊಂಡರು.

ಇಒಗೆ ಕೊರೊನಾ; ಕೆಲಸ ನಿಧಾನ

ಟಿ.ರಾಘವೇಂದ್ರ

ಸೊರಬ: ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ಕೆ.ಕುಮಾರ್ ಅವರಿಗೆ ಕೊರೊನಾ ಸೋಂಕು‌ ತಗುಲಿದ್ದು, ಗಾಜನೂರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಯೋಜನೆಯ ಕೆಲಸಗಳು ವೇಗ ಪಡೆದುಕೊಳ್ಳುತ್ತಿಲ್ಲ.

ತವನಂದಿ, ತಲಗಡ್ಡೆ, ತಲಗುಂದ, ಭಾರಂಗಿ, ಹಂಚಿ, ಚಂದ್ರಗುತ್ತಿ, ಎಣ್ಣೇಕೊಪ್ಪ, ಹೆಗ್ಗೋಡು, ಹಳೇಸೊರಬ, ಹೆಚ್ಚೆ, ಹುರುಳಿ, ಕಾತುವಳ್ಳಿ, ತಲಗಡ್ಡೆ, ತಲ್ಲೂರು, ಮುಟಗುಪ್ಪೆ ಸೇರಿ ಒಟ್ಟು 15 ಗ್ರಾಮ ಪಂಚಾಯಿತಿಯಲ್ಲಿ 2,766 ಜನರು ಕೆಲಸ ಮಾಡುತ್ತಿದ್ದಾರೆ ಎಂದು ನರೇಗಾ ಯೋಜನೆಯ ನೋಡಲ್ ಅಧಿಕಾರಿ ಸತೀಶ್ ಮಾಹಿತಿ ನೀಡಿದರು.

ಕೊರೊನಾ ಎರಡನೇ ಅಲೆಗೆ ಜನಜೀವನ ತತ್ತರಿಸಿರುವ ಸಮಯದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರ ಜನರಿಗೆ ಉದ್ಯೋಗ ಖಾತ್ರಿ ಕೆಲಸ ನೀಡುವ ಮೂಲಕ ಬಡವರ ನೆರವಿಗೆ ಮುಂದಾಗಿದೆ.

ರಾಜ್ಯದಲ್ಲಿ ಪ್ರಸ್ತುತ ಲಾಕ್‌ಡೌನ್‌ ಜಾರಿಯಲ್ಲಿದೆ. ಕೆಲವೇ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಣೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಲಾಕ್‌ಡೌನ್ ನಿಯಮದಲ್ಲಿ ಸರ್ಕಾರ ಕೆಲವೊಂದು ಬದಲಾವಣೆ ಮಾಡಿದ್ದು, ನರೇಗಾ ಕಾಮಗಾರಿಗೆ ಒಪ್ಪಿಗೆ ನೀಡಿದೆ. ರಾಜ್ಯದಲ್ಲಿ ಕಾರ್ಮಿಕರು ಕಾಮಗಾರಿಯಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆತಿದೆ.

ಕೋವಿಡ್‌ ನಿಯಮಗಳನ್ನು ಪಾಲಿಸುವ ಜತೆಗೆ ಒಂದು ಕಡೆ 40ಕ್ಕಿಂತ ಹೆಚ್ಚು ಕಾರ್ಮಿಕರು ಇರದಂತೆ ನೋಡಿಕೊಳ್ಳಬೇಕೆಂಬ ಪರಿಷ್ಕೃತ ಮಾರ್ಗಸೂಚಿ ಹೊರಡಿಸಲಾಗಿದೆ. ಉಳಿದಂತೆ, ಕೆಲಸದ ಸ್ಥಳದಲ್ಲಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸುವುದು ಕಡ್ಡಾಯ.

ಮೇ ವರೆಗೆ ಶೇ 38ರಷ್ಟು ಸಾಧನೆ

ಸಕಾಲಕ್ಕೆ ಕೂಲಿಯ ಮೊತ್ತ ಸಿಗದೆ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುವ ಬಡ ಕೂಲಿ ಕಾರ್ಮಿಕರು ದಿಕ್ಕೆಟ್ಟು ಕೂರುವಂತಾಗಿದ್ದರೆ, ಯೋಜನೆಯ ಗುರಿ ತಲುಪಲು ಸಾಧ್ಯವಾಗದೆ ಅಧಿಕಾರಿಗಳು ಒತ್ತಡಕ್ಕೆ ಸಿಲುಕುವಂತೆ ಮಾಡಿದೆ. ನಿತ್ಯವೂ ಗ್ರಾಮ ಪಂಚಾಯಿತಿಗಳಿಗೆ ಆಗಮಿಸುವ ಕಾರ್ಮಿಕರು ತಮ್ಮ ಕೂಲಿ ಹಣ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುವಾಗ ಉತ್ತರಿಸಲು ಆಗದ ಅಧಿಕಾರಿಗಳು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ಕೂಲಿ ಹಣ ಹಾಗೂ ಸಾಮಗ್ರಿ ವೆಚ್ಚ ಸಕಾಲದಲ್ಲಿ ಬಿಡುಗಡೆಯಾಗದಿರುವುದು ಪ್ರಗತಿಗೆ ಅಡ್ಡಿಯಾಗಿದೆ. ನಿಯಮಿತವಾಗಿ ಕೂಲಿ ಹಣ ಪಾವತಿ ಆಗದಿದ್ದರೆ ಜನರು ಕೆಲಸಕ್ಕೆ ಬರುವುದಿಲ್ಲ. ಇದರಿಂದ ಯೋಜನೆಯ ಆಶಯವೂ ಈಡೇರುವುದಿಲ್ಲ. ಸಾಮಗ್ರಿಗಳನ್ನು ಪೂರೈಕೆ ಮಾಡಿದ ಗುತ್ತಿಗೆದಾರರು ಲಕ್ಷಾಂತರ ರೂಪಾಯಿ ಬಾಕಿಯಾಗಿರುವ ಕಾರಣ ಹೊಸ ಸಾಮಗ್ರಿಗಳ ಪೂರೈಕೆಗೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿಗಳು ಅಪೂರ್ಣವಾಗುತ್ತಿವೆ. 

ಜಿಲ್ಲೆಯ 271 ಗ್ರಾಮ ಪಂಚಾಯಿತಿಗಳಲ್ಲಿ ತಮಗೆ ನಿಗದಿಪಡಿಸಿದ ಗುರಿಯಲ್ಲಿ ಮೇ 10ರ ವರೆಗೆ ಸರಾಸರಿ ಶೇ 38ರಷ್ಟು ಮಾತ್ರ ಸಾಧನೆ ಮಾಡಲು ಸಾಧ್ಯವಾಗಿದೆ. ಭದ್ರಾವತಿಯಲ್ಲಿ ಶೇ 31, ಹೊಸನಗರದಲ್ಲಿ ಶೇ 17, ಸಾಗರ ಶೇ 49, ಶಿಕಾರಿಪುರ ಶೇ 33, ಶಿವಮೊಗ್ಗ ಶೇ 39, ಸೊರಬ ಶೇ 57, ತೀರ್ಥಹಳ್ಳಿ ಶೇ 24ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.