ಸೋಮವಾರ, ಏಪ್ರಿಲ್ 19, 2021
29 °C

ಯುವತಿ ಜತೆ ರಮೇಶ ಜಾರಕಿಹೊಳಿ ಇರುವ ಸಿ.ಡಿ ನೋಡಿಲ್ಲ: ಡಿ.ಕೆ.ಶಿವಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಶಿವಮೊಗ್ಗ: ‘ರಮೇಶ ಜಾರಕಿಹೊಳಿ ಸಿಡಿ ವಿಚಾರವನ್ನು ಪತ್ರಿಕೆಯಲ್ಲಿ ಓದಿ ಸ್ವಲ್ಪ ತಿಳಿದುಕೊಂಡಿದ್ದೇನೆ. ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಪೂರ್ಣ ವಿಷಯ ತಿಳಿದುಕೊಂಡು ಮಾತನಾಡುತ್ತೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಭಾನುವಾರ ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ರಮೇಶ ಜಾರಕಿಹೊಳಿ ಜೊತೆ ಯುವತಿ ಕಾಣಿಸಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿರುವ ಸಿ.ಡಿಯನ್ನು ನಾನು ನೋಡಿಲ್ಲ. ಸಿ.ಡಿ ವಿಚಾರವಾಗಿ ಬಿಜೆಪಿಯ ಹಲವರು ಮಾತನಾಡಿದ್ದಾರೆ. ಯತ್ನಾಳ್, ವಿಶ‍್ವನಾಥ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಅದೆಲ್ಲವನ್ನು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು, ತನಿಖೆ ನಡೆಸಬಹುದಿತ್ತು’ ಎಂದರು.

‘ರಮೇಶ ಜಾರಕಿಹೊಳಿ ಸಿ.ಡಿ ವಿಚಾರವಾಗಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಲು ಆಗುವುದಿಲ್ಲ ಎಂದರೆ ನಾವೇ ದೂರು ಕೊಡಿಸುತ್ತೇವೆ. ಅದು ಯಾವ ಸಿ.ಡಿ ನೋಡೋಣ. ಮುಖ್ಯಮಂತ್ರಿ ಅಧಿಕೃತವಾಗಿ ಸಿ.ಡಿ ವಿಚಾರ ಮಾತನಾಡಿದ್ದಾರೆ. ಆದರೆ, ಯಾವುದೇ ತನಿಖೆಯಾಗಿಲ್ಲ’ ಎಂದು ಕುಟುಕಿದರು.

ನನ್ನ ಮೇಲೆ ಷಡ್ಯಂತ್ರ: ‘ನಮ್ಮ ಮೇಲೆ ಹಿಂದಿನಿಂದ ಷಡ್ಯಂತ್ರಗಳು ನಡೆದುಕೊಂಡು ಬಂದಿವೆ. ಅವು ಈಗಲೂ ಮುಂದುವರಿದಿವೆ. ರಮೇಶ ಜಾರಕಿಹೊಳಿ ಅವರು ಸಿ.ಡಿಯಲ್ಲಿ ಇರುವುದು ತಾವಲ್ಲ ಎಂದು ಒಮ್ಮೆ ಹೇಳಿದರು. ನಂಗೆ ಗೊತ್ತೇ ಇಲ್ಲ ಎಂದಿದ್ದರು. ಈಗ ಅವರೇ ಎಲ್ಲವನ್ನೂ ಹೇಳುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

ಅವಕಾಶ ನೀಡಬೇಕಿತ್ತು: ‘ಸದನದಲ್ಲಿ ತಮಗೆ ಮಾತನಾಡಲು ಅವಕಾಶ ಸಿಗದೆ ತಮ್ಮ ನೋವನ್ನು ತೋಡಿಕೊಳ್ಳುವ ಭರದಲ್ಲಿ ಶಾಸಕ ಬಿ.ಕೆ. ಸಂಗಮೇಶ ಅವರು ತಮ್ಮ ಶರ್ಟ್‌ ತೆಗೆದು ಆ ರೀತಿ ನಡೆದುಕೊಂಡಿದ್ದಾರೆ. ಅದನ್ನು ಬಿಜೆಪಿಯವರು ದ್ವೇಷ ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡಬೇಕಿತ್ತು’ ಎಂದು ಖಾರವಾಗಿ ಹೇಳಿದರು.

‘ಸಿ.ಡಿ ಪ್ರಕರಣ ವಿಧಾನಸಭೆಯಲ್ಲಿ ಪ್ರಸ್ತಾಪ’

ಬೆಂಗಳೂರು: ‘ರಮೇಶ ಜಾರಕಿಹೊಳಿ ಸಿ.ಡಿ ಪ್ರಕರಣದ ವಿಚಾರವನ್ನು ವಿಧಾನಸಭೆಯಲ್ಲಿ ಮಾತನಾಡುತ್ತೇನೆ. ಮಾಧ್ಯಮಗಳ ಮುಂದೆ ಮಾತನಾಡುವುದಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಯುವತಿ ವಿಡಿಯೊ ಬಿಡುಗಡೆ ಮಾಡಿರುವ ವಿಚಾರದ ಬಗ್ಗೆಯೂ ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತೇನೆ’ ಎಂದರು.

ಸಿ.ಡಿ ಪ್ರಕರಣದ ಹಿಂದೆ ಕಾಂಗ್ರೆಸ್‌ನವರಿದ್ದಾರೆ ಎಂಬ ಆರೋಪದ ಕುರಿತು ಕೇಳಿದಾಗ, ‘ಯಾರು ತಪ್ಪು ಮಾಡಿದ್ದಾರೊ ಅವರಿಗೆ ಶಿಕ್ಷೆ ಆಗುತ್ತದೆ’ ಎಂದಷ್ಟೇ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು